ನೆಲಮಂಗಲದ ಬೆನಕ ಬಡಾವಣೆಯಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಪರ ಹಿರಿಯ ಸಿವಿಲ್​ ನ್ಯಾಯಾಧೀಶ ಸಂದೀಶ್​ ಉದ್ಘಾಟಿಸಿದರು. ಲಯನ್ಸ್​ ಕ್ಲಬ್​ ವೈದ್ಯ ರಾಜೇಂದ್ರಪ್ರಸಾದ್​, ಸಮಾಜ ಕಲ್ಯಾಣ ಅಧಿಕಾರಿ ವಾಣಿ ಇತರರು ಇದ್ದರು.  
ರಾಜ್ಯ

ಎಲ್ಲ ಕ್ಷೇತ್ರದಲ್ಲೂ ಮಹಿಳೆಯರ ಸಾಧನೆ / NELAMANAGAL

ನೆಲಮಂಗಲ : ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಛಾಪು ಮೂಡಿಸುತ್ತಿದ್ದು, ಅವರ ಬಗ್ಗೆ ಗೌರವ ಅಭಿಮಾನ ಹೆಚ್ಚಿಸಲು ಮಹಿಳಾ ದಿನಾಚರಣೆ ಸಹಕಾರಿಯಾಗಲಿದೆ ಎಂದು 1ನೇ ಅಪರ ಹಿರಿಯ ಸಿವಿಲ್​ ನ್ಯಾಯಾಧೀಶ ಸಂದೀಶ್​ ಅಭಿಪ್ರಾಯಪಟ್ಟರು.
ನಗರದ ಬೆನಕ ಬಡಾವಣೆಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ತಾಲೂಕು ಕಾನೂನು ಸೇವಾಸಮಿತಿ, ತಾಲೂಕು ವಕೀಲರ ಸಂಘ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಂದೀಪ್​ ಸೇವಾ ನಿಲಯಂ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ಇತಿಹಾಸದಲ್ಲೂ ಮಹಿಳೆಯರು ವಿವಿಧ ರಂಗಗಳಲ್ಲಿ ಕೊಡುಗೆ ನೀಡಿದ್ದು, ಅವರನ್ನು ಗೌರವಿಸುವುದು ಮಹಿಳಾ ದಿನದ ಕೆಲಸವಾಗಿದೆ. 20 ವರ್ಷಗಳ ಹಿಂದಕ್ಕೆ ಹೋಲಿಸಿದರೆ ಪ್ರಸ್ತುತ ಸನ್ನಿವೇಶ ಬದಲಾಗಿದೆ. ಪುರುಷರಷ್ಟೇ ಸರಿಸಮಾವಾಗಿ ಮಹಿಳೆ ಕೆಲಸ ಮಾಡಿ ಸಂಪಾದನೆ ಮಾಡುತ್ತಿದ್ದಾರೆ ಎಂದರು.
ವಿಮಾನ, ರೈಲು ಚಾಲನೆ ಮಾಡುತ್ತಿದ್ದಾರೆ. ಸಮಾಜ ಹಾಗೂ ಕುಟುಂಬದಿಂದ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಉಚಿತ ಕಾನೂನು ಸೇವೆ ನೀಡುವ ಉದ್ದೇಶದಿಂದ ತಾಲೂಕುಮಟ್ಟದಿಂದ ರಾಜ್ಯಮಟ್ಟದವರೆಗೆ ಕಾನೂನು ಸೇವಾ ಸಮಿತಿ ರಚಿಸಲಾಗಿದೆ. ಕಾನೂನಿನಲ್ಲಿ ಮಹಿಳೆಯರ ಭದ್ರತೆಗಾಗಿ ಇರುವ ಹಕ್ಕುಗಳು ಕಾಯ್ದೆಗಳ ಮಾಹಿತಿ ಕಾನೂನು ಸೇವಾ ಸಮಿತಿ ತಿಳಿವಳಿಕೆ ನೀಡಲಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದರು.
1ನೇ ಅಪರ ಸಿವಿಲ್​ ನ್ಯಾಯಾಧೀಶ ಎಂ. ಮಂಜು ಮಾತನಾಡಿ, ಮಹಿಳೆಯರಿಗಾಗಿ ಸರ್ಕಾರ ಸಾಕಷ್ಟು ಅವಕಾಶ ಕಲ್ಪಿಸುತ್ತಿವೆ. ಕಾನೂನು ಕ್ಷೇತ್ರದಲ್ಲೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ಬರುತ್ತಿದ್ದಾರೆ. ಓದಿನಲ್ಲೂ ಮುಂದಿರುವ ಹೆಣ್ಣುಮಕ್ಕಳು ಹೆಮ್ಮೆಪಡುವ ಕೆಲಸ ಮಾಡಿ ಸಮಾಜಕ್ಕೆ ಉತ್ತಮ ಪ್ರಜೆಗಳಾಗುತ್ತಿದೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಕೇಶವಮೂರ್ತಿ, ಶಿಶುಅಭಿವೃದ್ಧಿ ಯೋಜನಾಧಿಕಾರಿ ಎಂ.ನಾಗೇಶ, ಮೇಲ್ವೀಚಾರಕಿ ಸುಜಾತಾ, ಸಂದೀಪ್​ ಸೇವಾನಿಲಯಂ ನ ಕಾರ್ಯದರ್ಶಿ ಲಿಲ್ಲಿಸ್ಯಾಮುಯಲ್​, ಸ್ಯಾಮುಯಲ್​ ಪ್ರಭಾಕರ್​, ರೇಣುಕಾ ಇತರರು ಇದ್ದರು.