ಯಳಂದೂರು ತಾಲೂಕಿನ ಮದ್ದೂರು ಗ್ರಾಮದಲ್ಲಿ ರೈತ ವಿಶ್ವ ಬೆಳೆದಿರುವ ಕಾಫಿ.
- ಮದ್ದೂರು ಗ್ರಾಮದ ಯುವ ರೈತ ವಿಶ್ವ
- ಸಮಗ್ರ ಕೃಷಿಯೊಂದಿಗೆ ಕೋಳಿ ಸಾಕಣೆ
ಯಳಂದೂರು: ಯಾವುದೇ ರೀತೀಯ ರಾಸಾಯನಿಕ ಬಳಸದೆ ಕೃಷಿಯಲ್ಲಿ ಸಮಗ್ರ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಇಲ್ಲೊಬ್ಬ ರೈತ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ.
ತಾಲೂಕಿನ ಮದ್ದೂರು ಗ್ರಾಮದ ಯುವ ರೈತ ವಿಶ್ವ ಸಮಗ್ರ ಕೃಷಿಯೊಂದಿಗೆ ಕೋಳಿ ಸಾಕಣೆ ಮಾಡುತ್ತಿದ್ದು, ಆ ಮೂಲಕ ಲಕ್ಷಗಟ್ಟಲೆ ಆದಾಯ ಪಡೆದು ಕೃಷಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.
ಹುಟ್ಟೂರಿನಲ್ಲಿರುವ ಜಮೀನಿನ ಮೇಲೆ ಯುವ ರೈತನಿಗೆ ಅಪಾರ ಪ್ರೀತಿ. ಈ ಪ್ರೀತಿಯೇ ಅವರನ್ನು ಸಮಗ್ರ ಕೃಷಿಯತ್ತ ಕೊಂಡೊಯ್ದಿದೆ ಎಂದರೆ ತಪ್ಪಾಗಲಾರದು. ತಾಲೂಕಿನ ಮದ್ದೂರು ಗ್ರಾಮದಲ್ಲಿ ಇವರಿಗೆ 6 ಎಕರೆ ಕೃಷಿ ಭೂಮಿ ಇದ್ದು, ಇದರಲ್ಲಿ ಅರ್ಧ ಎಕರೆಯಲ್ಲಿ ಕಾಫಿ, 2.20 ಎಕರೆಯಲ್ಲಿ ಕಬ್ಬು, 20 ಗುಂಟೆಯಲ್ಲಿ ಬದನೆಕಾಯಿ ಹಾಗೂ 2.20 ಎಕರೆಯಲ್ಲಿ ಕೋಳಿ ಸಾಕಣೆ ಮಾಡುತ್ತಿದ್ದಾರೆ. ಇದರೊಂದಿಗೆ ಜೇನು ಕೃಷಿಯನ್ನೂ ಮಾಡುತ್ತಿರುವ ಇವರು, ಆ ಮೂಲಕ ಸಮಗ್ರ ಕೃಷಿ ಚಟುವಟಿಕೆಗಲ್ಲಿ ತೊಡಗಿಸಿಕೊಂಡು ಎಲ್ಲ ತರಹದ ಬೆಳೆಗಳನ್ನು ಬೆಳೆಯುವ ಮೂಲಕ ಮಾದರಿ ಯುವ ರೈತನಾಗಿ ಯಶಸ್ಸು ಸಾಧಿಸಿದ್ದಾರೆ.
ಬಯಲು ಪ್ರದೇಶದಲ್ಲೂ ಕಾಫಿ ಬೆಳೆದರು! : ಕೊಡಗಿನಂತಹ ಹೆಚ್ಚು ಮಳೆ ಬೀಳುವ ಬೆಟ್ಟ ಗುಡ್ಡ ಪ್ರದೇಶದಲ್ಲಿ ಬೆಳೆಯ ಬಹುದಾದ ಕಾಫಿಯನ್ನು ಕಡಿಮೆ ಮಳೆ ಬೀಳುವ ಪ್ರದೇಶವಾದ ಬಯಲು ಸೀಮೆಯಲ್ಲಿ ಕಾಫಿ ಕೃಷಿ ಮಾಡಿದ್ದಾರೆ. ಅದರಲ್ಲೂ ಲಾಭ ಪಡೆಯುವ ಮೂಲಕ ಹೊಸ ಪ್ರಯೋಗಕ್ಕೆ ಮುನ್ನುಡಿ ಬರೆದು ಯಶಸ್ಸು ಕಂಡುಕೊಂಡಿದ್ದಾರೆ. ಒಟ್ಟು 20 ಗುಂಟೆ ಪ್ರದೇಶದಲ್ಲಿ ಕಾಫಿ ಬೆಳೆ ಬೆಳೆಯುತ್ತಿದ್ದಾರೆ. 900 ಕ್ಕೂ ಹೆಚ್ಚು ಕಾಫಿ ಗಿಡವನ್ನು 4 ವರ್ಷದ ಹಿಂದೆ ನಾಟಿ ಮಾಡಿದ್ದಾರೆ. ಆರಂಭದ ದಿನಗಳಲ್ಲಿ ಬೆಳೆ ಬರುತ್ತದೆಯೇ ಇಲ್ಲವೋ ಎಂಬ ಆತಂಕ ಎದುರಾಗಿತ್ತು. ಆದರೆ ಎಲ್ಲವನ್ನೂ ಮೀರಿ ಸದಸ್ಯ ಕಾಫಿ ಗಿಡಗಳು ಚೆನ್ನಾಗಿ ಬೆಳೆಯುತ್ತಿದ್ದು, ರೋಗ ಭಾದೆಯಿಂದ ಮುಕ್ತವಾಗಿವೆ. ಸದ್ಯ ವರ್ಷಕ್ಕೆ ಸುಮಾರು 5 ಕ್ವಿಂಟಾಲ್‌ಗೂ ಹೆಚ್ಚು ಕಾಫಿ ಬೀಜ ದೊರೆಯುತ್ತಿದೆ. ಇದರೊಂದಿಗೆ ಕಾಫಿ ಗಿಡಗಳ ಸುತ್ತಲೂ ತೆಂಗು, ಮಾವಿನ ಮರ ಹಾಕಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ವಿಶ್ವ ಕೃಷಿಯೊಂದಿಗೆ ಮತ್ತಷ್ಟು ಸಾಧನೆ ಮಾಡಬೇಕೆಂದು ಜೇನು ಸಾಕಣೆಗೆ ಮುಂದಾಗಿದ್ದಾರೆ. ಜೇನಿನ ಮೂಲಕ ಪರಾಗಸ್ಪರ್ಶ ಕ್ರಿಯೆ ಹೆಚ್ಚಾಗಿ ಕಾಫಿ, ಮಾವು, ತೆಂಗುಗಳ ಮೂಲಕ ಹೆಚ್ಚು ಲಾಭ ಪಡೆಯುತ್ತಿದ್ದಾರೆ. ಜತೆಗೆ ಕಾಫಿ ಗಿಡಕ್ಕೆ ಬಿಸಿಲಿನ ರಕ್ಷಣೆ ಮಾಡಿ ಗಿಡವನ್ನು ಬೆಳೆಸುವ ಮೂಲಕ ಬಯಲು ಸೀಮೆಯಲ್ಲೂ ಗಿಡವನ್ನು ಬೆಳೆದು ತೋರಿಸಿದ್ದಾರೆ.
ಕೋಳಿ ಸಾಕಣೆಯಲ್ಲೂ ಯಶಸ್ಸು: ಕಡಿಮೆ ಖಚೂ ಮತ್ತು ಸುಲಭವಾಗಿ ಕೈಗೊಳ್ಳಬಹುದಾದ ಉದ್ಯೋಗವೆಂದರೆ ಕೋಳಿ ಅಥವಾ ಮಾಂಸದ ಕೋಳಿ ಸಾಕಣೆ. ಪ್ರಸುತ್ತ ಲಕ್ಷಾಂತರ ಜನರು ಈ ಉದ್ಯಮವನ್ನು ನಡೆಸುತ್ತಿದ್ದಾರೆ. ದೇಶದಲ್ಲಿನ ಆಹಾರದ ಅಗತ್ಯತೆಗೆ ಈ ಉದ್ಯಮ ಬಹು ದೊಡ್ಡ ಕೊಡುಗೆ ನೀಡುತ್ತಿದೆ. ಹೀಗಾಗಿಯೇ ಇದನ್ನು ಅರಿತು ಕೋಳಿಗಳ ಸಾಕಣೆಗೆ ಉತ್ತಮ ಜಾಗದಲ್ಲಿ ಮನೆ ನಿರ್ಮಿಸಿ ಅವಶ್ಯಕತೆಯಿರುವ ವಿದ್ಯುತ್, ನೀರಿನ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಕಿಲೋ ಕೋಳಿಗೆ 12 ರೂ. ಲಭಿಸುತ್ತದೆ. ಇವರ ಬಳಿ 5000 ಸಾವಿರ ಕೋಳಿ ಇದ್ದು 1 ಲಕ್ಷ ಕ್ಕೂ ಅಧಿಕವಾಗಿ ಆದಾಯ ಗಳಿಸುತ್ತಿದ್ದಾರೆ.
ಸ್ನಾತಕೋತ್ತರ ಪದವೀಧರ: ವಿಶ್ವ ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪೂರ್ವಿಕರಿಂದ ಬಂದ ಜಮೀನು ಎಂಬ ಕಾರಣಕ್ಕೆ ಕೃಷಿಯತ್ತ ಹೆಚ್ಚು ಆಕರ್ಷಿತರಾದರು. ಆ ಬಳಿಕ ತನ್ನ ತಂದೆಯೊಂದಿಗೆ ಆಗಾಗ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಕ್ರಮೇಣ ಇದರಿಂದ ಮತ್ತಚ್ಚು ಆಕರ್ಷಿತರಾಗಿ ಕೃಷಿಯಲ್ಲಿ ಸಾಧನೆ ಮಾಡಿದ ಹಲವರನ್ನು ಭೇಟಿ ಮಾಡಿದರು. ಹಂತ ಹಂತವಾಗಿ ಕೃಷಿ ಚಟುವಟಿಕೆಯಲ್ಲಿ ವೈಜ್ಞಾನಿಕತೆ ಅಳವಡಿಸಿಕೊಳ್ಳುವತ್ತ ಇವರ ಚಿತ್ತ ಹೆಚ್ಚು ಬೆಳೆಯಿತು. ಇದರೊಂದಿಗೆ ವಿಭಿನ್ನ ಬೆಳೆಗಳನ್ನು ಬೆಳೆಯುವ ಮೂಲಕ ಅಧಿಕ ಲಾಭ ಗಳಿಸಬಹುದು ಎಂಬುದನ್ನು ಅರಿತರು. ಪರಿಣಾಮ ತರಕಾರಿ, ಸೊಪ್ಪನ್ನು ಕೂಡ ಆದಾಯದ ಮೂಲವಾಗಿ ಮಾಡಿಕೊಂಡರು ಎಂದರೆ ತಪ್ಪಾಗಲಾರದು.
ಇನ್ನು ಆಗಾಗ ಹೊಸ ಹೊಸ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು, ಕೃಷಿ ಸಂಬಂಧಿತ ಕಾರ್ಯಕ್ರಮ, ಕೃಷಿಯಲ್ಲಿ ಸಾಧನೆ ಮಾಡಿರುವ ಸಾಧಕರ ಜಮೀನುಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಕಲೆ ಹಾಕುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡ ಇವರು, ಭ ಬಳಿಕ ಹಂತಹಂತವಾಗಿ ಅದನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡು ವಿವಿಧ ಬೆಳೆ ಬೆಳೆಯುವ ಮೂಲಕ ಕ್ರಿಯಾಶೀಲ ಯುವ ರೂಯತನಾಗಿ ಹೊರ ಹೊಮ್ಮಿದ್ದಾರೆ. ಕೆಲಸಕ್ಕೆ ಹೋಗಿಯೇ ಸಂಪಾದನೆ ಮಾಡಬೇಕೆಂದಿಲ್ಲ ಎಂಬುದನ್ನು ವಿಶ್ವ ಸಾಬೀತು ಮಾಡಿದ್ದು, ಆ ಮೂಲಕ ಕೃಷಿ ವೃತ್ತಿ ಪ್ರೇಮವನ್ನು ಸಾಬೀತುಪಡಿಸಿದ್ದಾರೆ.
ಪ್ರಸ್ತುತ ಕೃಷಿ ಲಾಭದಾಯಕವಾಗಿದೆ. ಆದರೆ ಇದರಲ್ಲಿ ವೈಜ್ಞಾನಿಕ ಕ್ರಮಗಳನ್ನು ಅನುಸರಿಸುವುದು ಬಹು ಮುಖ್ಯ. ಸಮಗ್ರ ಕೃಷಿ ಮಾಡಿದ್ದಲ್ಲಿ ಹೆಚ್ಚಿನ ಆದಾಯವನ್ನು ಪಡೆದುಕೊಳ್ಳಬಹುದು. ಇದು ಅನೇಕ ಬಾರಿ ಉದಾಹರಣೆಯೊಂದಿಗೆ ಸಾಬೀತಾಗಿದೆ. ಶ್ರಮದೊಂದಿಗೆ ತಾಂತ್ರಿಕ ಅಂಶಗಳನ್ನು ಕೃಷಿಯಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ಆದಾಯ ನಿರೀಕ್ಷೆ ಮಾಡಬಹುದು. ಯುವ ಸಮೂಹ ಈ ನಿಟ್ಟಿನಲ್ಲಿ ಗಮನ ಹರಿಸುವುದು ಅವಶ್ಯ.
ಜಮೀನಿನಲ್ಲಿ ಕೋಳಿ ಸಾಕಣೆ ಮಾಡುತ್ತಿರುವುದು.
ರೈತ ವಿಶ್ವ ತಮ್ಮ ಜಮೀನಿನಲ್ಲಿ ನಳನಳಿಸುತ್ತಿರುವ ಕಬ್ಬು.