ಹಾಸನ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಜಿಲ್ಲಾ ಸಮಗ್ರ ಪ್ರಶಸ್ತಿಯನ್ನು ಸ್ನೇಹಮಯಿ ವಿವೇಕಾನಂದ ಯೋಗ ಮಂದಿರದ ಯೋಗಪಟುಗಳು ತಮ್ಮದಾಗಿಸಿಕೊಂಡಿರುವುದು. 
ರಾಜ್ಯ

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸಾಧನೆ

ಪ್ರಮುಖ ಮುಖ್ಯಾಂಶಗಳು

  • 6ನೇ ಹಾಸನ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ
  • ಸ್ನೇಹಮಯಿ ವಿವೇಕಾನಂದ ಯೋಗ ಮಂದಿರದ ಯೋಗಪಟುಗಳು ವಿಜೇತ
ಚನ್ನರಾಯಪಟ್ಟಣ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ 6ನೇ ಹಾಸನ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸ್ನೇಹಮಯಿ ವಿವೇಕಾನಂದ ಯೋಗ ಮಂದಿರದ ಯೋಗಪಟುಗಳು ವಿಜೇತರಾಗುವ ಮೂಲಕ ಹಾಸನ ಜಿಲ್ಲಾ ಸಮಗ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಸ್ನೇಹಮಯಿ ವಿವೇಕಾನಂದ ಯೋಗ ಮಂದಿರದ ವ್ಯವಸ್ಥಾಪಕ ಮಂಜುನಾಥ್ ಕೆ.ಅಡಗೂರು ತಿಳಿಸಿದರು.
ನಮ್ಮ ಸಂಸ್ಥೆಯ ಯೋಗಪಟುಗಳು ಪಟ್ಟಣದ ಗಣಪತಿ ಪೆಂಡಾಲ್ನಲ್ಲಿ ಆಯೋಜಿಸಿದ್ದ ಸಾಮೂಹಿಕ ಕಾರ್ಯದಲ್ಲಿ ಭಾಗವಹಿಸಿದ ನಂತರ ತಾಲೂಕು ಕ್ರೀಡಾಂಗಣದಲ್ಲಿ ನ್ಯಾಯಾಂಗ ಇಲಾಖೆ ಹಾಗೂ ಪೂರ್ಣಚಂದ್ರ ಪಬ್ಲಿಕ್ ಶಾಲೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸ ಹಯೋಗದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಉತ್ತಮವಾದ ಪ್ರದರ್ಶನ ನೀಡಿದರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
12 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಯು.ಕೀರ್ತತಾ ದ್ವಿತೀಯ ಸ್ಥಾನ, ವಂಶಿತಾ ತೃತೀಯ ಸ್ಥಾನ ಪಡೆದಿದ್ದಾರೆ. 12 ರಿಂದ 15 ವರ್ಷದ ಬಾಲಕರ ವಿಭಾಗದಲ್ಲಿ ಜಿ.ಎಸ್.ವಿಷ್ಣು ದ್ವಿತೀಯ ಸ್ಥಾನ, 30 ರಿಂದ 40 ವರ್ಷದ ಪುರುಷ ವಿಭಾಗದಲ್ಲಿ ಚೇತನ್ ದ್ವಿತೀಯ ಸ್ಥಾನ, ವಿ.ಜಿ.ಪ್ರಸನ್ನ ತೃತೀಯ ಸ್ಥಾನ ಮತ್ತು ಮಹಿಳೆಯರ ವಿಭಾಗದಲ್ಲಿ ಟಿ.ರಾಧಿಕಾ ತೃತೀಯ ಸ್ಥಾನ ಪಡೆದಿದ್ದಾರೆ ಎಂದರು.
40 ರಿಂದ 50 ವರ್ಷದ ಮಹಿಳೆಯರ ವಿಭಾಗದಲ್ಲಿ ಕೋಮಲಾ ತೃತೀಯ ಸ್ಥಾನ ಪಡೆದು ಯೋಗ ಕೇಂದ್ರದ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸ್ಪರ್ಧೆಗೂ ಮುನ್ನ ಸಂಸ್ಥೆಯ ಯೋಗ ಪಟು ಎಸ್.ಎಂ.ವಿಸ್ಮಿತಾ ಬಾಕ್ಸ್ ಯೋಗ ಪ್ರದರ್ಶನ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು ಎಂದು ತಿಳಿಸಿದರು.
ಯೋಗ ಮಂದಿರದ ಅಧ್ಯಕ್ಷ ಮಂಜುನಾಥ್ ಶೆಟ್ಟಿಹಳ್ಳಿ, ಮಹಿಳಾ ಯೋಗ ಶಿಕ್ಷಕಿ ಚೇತನ, ಯೋಗ ಪಟುಗಳಾದ ಟಿ.ರಾಧಿಕಾ, ಪ್ರಸನ್ನ ಸುದ್ದಿಗೋಷ್ಠಿಯಲ್ಲಿದ್ದರು.