ರಬಕವಿ ಬನಶಂಕರಿ ದೇವಸ್ಥಾನದ ಸಮುದಾಯ ಭವನದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಜರುಗಿತು. ಸಿದ್ದು ಕೊಣ್ಣೂರ, ಡಾ.ಎಸ್.ಬಿ. ಸುಗ್ಗಮದ, ಮ.ಕೃ. ಮೇಗಾಡಿ, ಚನ್ನಬಸು ಬಿಜಾಪುರ, ಪ್ರಭು ಉಮದಿ ಇತರರಿದ್ದರು. 
ರಾಜ್ಯ

ಸಮಾಜ ಮೆಚ್ಚುವಂತೆ ಸಾಧನೆ ಮಾಡಿ

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿಕೆ
  • ಪ್ರತಿಭಾ ಪುರಸ್ಕಾರ ಸಮಾರಂಭ
ರಬಕವಿ/ಬನಹಟ್ಟಿ: ವಿದ್ಯಾರ್ಥಿಗಳು ಶ್ರದ್ಧೆ, ನಿಷ್ಠೆ, ಪರಿಶ್ರಮದಿಂದ ಸಾಧನೆ ಮಾಡುವ ಮೂಲಕ ಪಾಲಕರಿಗೆ, ಸಮಾಜಕ್ಕೆ ಕೀರ್ತಿ ತರಬೇಕು. ಆಧುನಿಕ ಯುಗದಲ್ಲಿ ಶಿಕ್ಷಣ ಮಹತ್ವ ಅರಿತು ಹೆಚ್ಚಿನ ಸಾಧನೆ ಮಾಡುವುದರ ಮೂಲಕ ವಿದ್ಯಾರ್ಥಿಗಳು ಬೆಳೆಯಬೇಕು ಎಂದು ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.
ರಬಕವಿ ಬನಶಂಕರಿ ದೇವಸ್ಥಾನ ದೈವ ಮಂಡಳಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಸಕ್ತ ವರ್ಷದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಸಾಧನೆಗೈದ ನೇಕಾರ, ಹಟಗಾರ, ದೇವಾಂಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮುದಾಯದ ಮಕ್ಕಳು ಮಾಡಿದ ಸಾಧನೆ ಗುರುತಿಸಿ ಅವರನ್ನು ಸನ್ಮಾನಿಸುವುದರಿಂದ ಇನ್ನಷ್ಟು ಉತ್ತಮ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಎಂದರು.
ದೈವ ಮಂಡಳಿ ಚೇರ್ಮನ್ ಚನ್ನಬಸು ಬಿಜಾಪುರ ಮಾತನಾಡಿ, ನಮ್ಮ ಸಮುದಾಯ ಕಡಿಮೆ ಜನಸಂಖ್ಯೆ ಇದ್ದರೂ ನಮ್ಮ ಮಕ್ಕಳ ಸಾಧನೆ ಉತ್ತಮವಾಗಿದೆ. ಅವರ ಸಾಧನೆಗೆ ಸಮಾಜದ ಬಾಂಧವರಿಗೆ ಹೆಮ್ಮೆಯಿದೆ ಎಂದರು.
ನಿವೃತ್ತ ಪ್ರಾಚಾರ್ಯ ಡಾ. ಎಸ್.ಬಿ. ಸುಗ್ಗಮದ, ಕಸಾಪ ತಾಲೂಕು ಅಧ್ಯಕ್ಷ ಮ.ಕೃ. ಮೇಗಾಡಿ ಮಾತನಾಡಿ, ವಿದ್ಯಾರ್ಥಿಗಳು ಗುರಿ ಹೊಂದಿ ಸಾಧನೆಯತ್ತ ಸಾಗಬೇಕು. ಇಂದಿನ ಆಧುನಿಕ ಜಗತ್ತಿನಲ್ಲಿ ಶಿಕ್ಷಣದ ಮಹತ್ವ ಅರಿತು ಜ್ಞಾನ ಸಂಪತ್ತು ಗಳಿಸಬೇಕು, ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ, ಸಾಧಿಸುವ ಛಲ ಇರಬೇಕು. ಮುಂದೆ ಗುರಿಯಿರಲಿ ಹಿಂದೆ ಗುರುಗಳ ಮಾರ್ಗದರ್ಶನ, ಗುರು ಹಿರಿಯರ ಮಾರ್ಗದರ್ಶನ ಇದ್ದೇ ಇರುವುದು ಎಂದರು.
ಪ್ರಭು ಉಮದಿ, ಡಾ. ಸಂಗಮೇಶ ಹತಪಾಕಿ, ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ ಎಂ.ಎಸ್. ಬಾದಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿ.ಎಚ್. ಚಿತ್ತರಗಿ, ಉದ್ಯಮಿ ಸೋಮಶೇಖರ ಕೊಟ್ರಶೆಟ್ಟಿ, ಮಲ್ಲಿಕಾರ್ಜುನ ನಾಶಿ ಇದ್ದರು.
ಬನಶಂಕರಿ ಮಹಿಳಾ ಮಂಡಳದ ಸಹೋದರಿಯರು ಪ್ರಾರ್ಥಿಸಿದರು. ವಿರುಪಾಕ್ಷಪ್ಪ ಕೀರಪೂರ ಸ್ವಾಗತಿಸಿದರು. ಶಿಕ್ಷಕ ಸಾಗರ ಬಾಪೂರೆ ನಿರೂಪಿಸಿದರು. ಅನೀಲ ಹುಲ್ಲೂರ ವಂದಿಸಿದರು.