ಬೆಂಗಳೂರು: ಪ್ರಿಯಕರನ ವ್ಯಾಮೋಹಕ್ಕೆ ಬಿದ್ದ ಹಡೆದ ತಾಯಿಯೇ ತನ್ನ ಐದು ವರ್ಷದ ಮುಗ್ಧ ಹೆಣ್ಣು ಮಗಳನ್ನು ಭೀಕರವಾಗಿ ಕೊಲೆ(Crime) ಮಾಡಿರುವ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಮಗುವಿನ ತಂದೆ ನೀಡಿದ ದೂರಿನ ಮೇರೆಗೆ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಗುವಿನ ತಾಯಿಯ ಪ್ರಿಯಕರನನ್ನು ಬಂಧಿಸಿದ್ದಾರೆ. ಆರೋಪಿ ತಾಯಿ ಸದ್ಯ ತಲೆಮರೆಸಿಕೊಂಡಿದ್ದಾಳೆ.
ಮೂರು ತಿಂಗಳ ಬಳಿಕ ಬಯಲಾದ ರಹಸ್ಯ!
ದಾವಣಗೆರೆ ಮೂಲದ ಪ್ರವೀಣ್ ಹಾಗೂ ಬೆಂಗಳೂರಿನ ಪ್ರಿಯಾಂಕಾ ಎಂಬುವವರಿಗೆ 2007ರಲ್ಲಿ ಮದುವೆಯಾಗಿದ್ದು, ಇವರಿಗೆ 17 ಮತ್ತು 5 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ, ಪ್ರಿಯಾಂಕಾ ತನ್ನ ಕಾಲೇಜು ದಿನಗಳ ಸ್ನೇಹಿತ ಮೋಹನ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇದೇ ವಿಚಾರವಾಗಿ ಪತಿ-ಪತ್ನಿ ನಡುವೆ ಜಗಳ ನಡೆದು, ಪ್ರಿಯಾಂಕಾ ವಿಚ್ಛೇದನಕ್ಕೆ ಪಟ್ಟು ಹಿಡಿದು ಪ್ರಿಯಕರನೊಂದಿಗೆ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ಇರಲು ಶುರು ಮಾಡಿದ್ದಳು. ಈ ವೇಳೆ 5 ವರ್ಷದ ಕಿರಿಯ ಮಗಳು ವೆನ್ನಿಲಾ ತಾಯಿಯೊಂದಿಗೇ ವಾಸವಾಗಿದ್ದಳು.
ಕಳೆದ ಮಾರ್ಚ್ 24 ರಂದು ಮಗು ವೆನ್ನಿಲಾ ಇದ್ದಕ್ಕಿದ್ದಂತೆ ನಿಗೂಢವಾಗಿ ಸಾವನ್ನಪ್ಪಿತ್ತು. ಆಗ ಪ್ರಿಯಾಂಕಾ ತನ್ನ ಕುಟುಂಬದವರಿಗೆ ಒಂದೊಂದು ಬಾರಿ ಒಂದೊಂದು ಕಥೆ ಹೇಳಿ ನಂಬಿಸಲು ಯತ್ನಿಸಿದ್ದಾಳೆ. "ಮಗಳಿಗೆ ಬಿರಿಯಾನಿ ತಿನ್ನಿಸಿದ್ದೆ", "ಐಸ್‌ಕ್ರೀಮ್ ಕೊಟ್ಟು ಎಸಿ ಕಾರಿನಲ್ಲಿ ಮಲಗಿಸಿದ್ದೆ, ಆಮೇಲೆ ಬಂದು ನೋಡುವಾಗ ಮೃತಪಟ್ಟಿದ್ದಾಳೆ" ಎಂದು ಹಾರಿಕೆ ಉತ್ತರ ನೀಡಿದ್ದಾಳೆ.
ಪೋಸ್ಟ್‌ಮಾರ್ಟಂ ರಿಪೋರ್ಟ್ ತಂದ ಟ್ವಿಸ್ಟ್:
ಮಗುವಿನ ಸಾವಿನ ಬಗ್ಗೆ ತಂದೆ ಪ್ರವೀಣ್‌ಗೆ ತೀವ್ರ ಅನುಮಾನವಿತ್ತು. ಹೀಗಾಗಿ ಅವರು ಮಗುವಿನ ಮರಣೋತ್ತರ ಪರೀಕ್ಷೆಯ (Post-Mortem) ವರದಿಯನ್ನು ವಿದೇಶದಲ್ಲಿ ವೈದ್ಯರಾಗಿರುವ ತಮ್ಮ ಸಂಬಂಧಿಕರೊಬ್ಬರಿಗೆ ಕಳುಹಿಸಿ ಪರಿಶೀಲಿಸಿದ್ದಾರೆ. ವರದಿಯನ್ನು ನೋಡಿದ ವೈದ್ಯರು, ಮಗುವಿಗೆ ತೀವ್ರವಾಗಿ ಹಲ್ಲೆ ಮಾಡಿ, ಉಸಿರುಗಟ್ಟಿಸಿ ಕೊಲೆ ಮಾಡಲಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಕೂಡಲೇ ಎಚ್ಚೆತ್ತ ತಂದೆ ಪ್ರವೀಣ್, ಪತ್ನಿ ಪ್ರಿಯಾಂಕಾ ಮತ್ತು ಆಕೆಯ ಪ್ರಿಯಕರ ಮೋಹನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಪ್ರಿಯಕರ ಮೋಹನ್‌ನನ್ನು ಬಂಧಿಸಿದ್ದು, ಪರಾರಿಯಾಗಿರುವ ಪ್ರಿಯಾಂಕಾಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ನ್ಯಾಯದ ವಿಜ್ಞಾನ ಪ್ರಯೋಗಾಲಯದ (FSL) ವರದಿ ಬಂದ ಬಳಿಕ ಮಗುವಿನ ಸಾವಿನ ಹಿಂದಿನ ಸಂಪೂರ್ಣ ಸತ್ಯ ಹೊರಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).