ರಾಜ್ಯ

ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ನಿಖರ ಅಂಕಿ-ಅಂಶ ದಿಕ್ಸೂಚಿ : ರಾಹುಲ್ ಸಂಕನೂರ

ಕಲಬುರಗಿ : ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಒದಗಿಸಲು ತಳಮಟ್ಟದ ನಿಖರವಾದ ಅಂಕಿ-ಅಂಶಗಳ ವರದಿಗಳು ಹೆಚ್ಚು ಸಹಕಾರಿಯಾಗಲಿವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಸಂಕನೂರ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಾನವ ಅಭಿವೃದ್ಧಿ ವರದಿ-2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ-2031 ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಅಧಿಕಾರಿಗಳು ಈ ಡೇಟಾವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ ಮುಂದಿನ ಯೋಜನೆಗಳನ್ನು ರೂಪಿಸಬೇಕು ಎಂದು ಸೂಚಿಸಿದರು.
ಈ ವರದಿಯು ಶಾಲೆಯಿಂದ ಹೊರಗುಳಿದ ಮಕ್ಕಳು, ಕುಡಿಯುವ ನೀರಿನ ಸಮಸ್ಯೆ, ಶಿಶು ಮರಣ ಮತ್ತು ತಾಯಂದಿರ ಮರಣ ಪ್ರಮಾಣ ನಿಯಂತ್ರಣಕ್ಕೆ ಉತ್ತಮ ಮಾರ್ಗದರ್ಶಿಯಾಗಿದೆ. ಪ್ರಗತಿ ಕುಂಠಿತವಾಗಿರುವ ಗ್ರಾಮ ಪಂಚಾಯತ್‌ಗಳ ಸುಧಾರಣೆಗೆ ಇದು ಸೂಕ್ತ ಆಧಾರವಾಗಿದ್ದು, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನೆರವಾಗಲಿದೆ ಎಂದ ಅವರು, ತಾಲೂಕು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿನ‌ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ಕಾರ್ಯಕ್ರಮ‌ ಹಮ್ಮಿಕೊಳ್ಳಬೇಕು ಎಂದರು.
ತಾಂತ್ರಿಕ ಬೆಂಬಲ ಸಂಸ್ಥೆಯ ಸಂಯೋಜಕರು ಮತ್ತು ರಾಜ್ಯ ಮಟ್ಟದ ತಾಂತ್ರಿಕ‌ ಸಮಿತಿ ಸದಸ್ಯೆ ಡಾ.ಛಾಯಾ ದೇಗಾಂವಕರ್ ಮಾತನಾಡಿ, ಜಿಲ್ಲೆಯಲ್ಲಿ 2030ರ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು 5ನೇ ಮಾನವ ಅಭಿವೃದ್ಧಿ ವರದಿಯನ್ನು ಅಂತಿಮಗೊಳಿಸಲಾಗುತ್ತಿದ್ದು, ಇದನ್ನು ಗ್ರಾಮ ಪಂಚಾಯತ್ ಮಟ್ಟದ ಯೋಜನೆಗಳಿಗೂ ಅನ್ವಯಿಸಲಾಗುವುದು. ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೆ ತಂದಿರುವ ಪಂಚಾಯತ್ ಮಟ್ಟದ ಸುಸ್ಥಿರ ಸೂಚ್ಯಂಕದ ಪ್ರಕಾರ, ಸರ್ಕಾರದ ಗುಣಮಟ್ಟದ ಶಿಕ್ಷಣ ವಿಭಾಗದಲ್ಲಿ ಕಲಬುರಗಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿ ಐತಿಹಾಸಿಕ ಸಾಧನೆ ಮಾಡಿದೆ ಎಂದು ಹೇಳಿದರು.ಈ ವರದಿಯು ಕೇವಲ ತಲಾ ಆರ್ಥಿಕ ಆದಾಯವನ್ನಷ್ಟೇ ಪರಿಗಣಿಸದೆ ಶಿಕ್ಷಣ, ಆರೋಗ್ಯ ಮತ್ತು ಜೀವನಮಟ್ಟ ಸುಧಾರಣ ಹೀಗೆ ವಿವಿಧ ಅಂಶಗಳನ್ನು‌ ಪರಿಗಣಿಸಿ ರೂಪಿಸಿದೆ. ಹೆಣ್ಣುಮಕ್ಕಳ ಶಾಲಾ ಡ್ರಾಪ್‌ಔಟ್ ತಡೆಗಟ್ಟುವುದು, ತಾಯಂದಿರ ಮತ್ತು ಮಕ್ಕಳ ಮರಣ ಪ್ರಮಾಣ ತಗ್ಗಿಸುವುದು ಹಾಗೂ ಸ್ವಯಂ ಉದ್ಯೋಗದ ಮೂಲಕ ತಲಾ ಆದಾಯ ಹೆಚ್ಚಿಸುವುದು ಪ್ರಮುಖ ಗುರಿಯಾಗಿದೆ. ಪರಿಸರ ಅಸಮತೋಲನದಿಂದ ಉಂಟಾಗುವ ಬರಗಾಲ ಎದುರಿಸಲು 17 ಸುಸ್ಥಿರ ಗುರಿಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈ ವರದಿಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅಧ್ಯಕ್ಷತೆಯಲ್ಲಿ ನಡೆದ‌ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಧುಮತಿ, ಯೋಜನಾ ನಿರ್ದೇಶಕ ಜಗದೇವಪ್ಪ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.