ದಾಬಸ್ಪೇಟೆಯ ಹೆದ್ದಾರಿ 48 ರಲ್ಲಿ ಸಂಭವಿಸಿದ ಅಪಘಾತದಿಂದ ಈ ಭಾಗದ ಸುತ್ತಮುತ್ತ ಸಂಚಾರ ಸಿಕ್ಕು ಏರ್ಪಟ್ಟಿರುವುದು.
ದಾಬಸ್ಪೇಟೆ : ದಾಬಸ್ಪೇಟೆಯ ಹೆದ್ದಾರಿ 48ರ ಮೇಲ್ಸೇತುವೆಯಲ್ಲಿ ಬಸ್ ಮತ್ತು ಲಾರಿ ನಡುವೆ ಬುಧವಾರ ಸಂಭವಿಸಿದ ಅಪಘಾತದಿಂದ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯುದ್ದಕ್ಕೂ ಐದಾರು ಕಿ.ಮೀ ಸಂಚಾರ ಸಿಕ್ಕು ಏರ್ಪಟ್ಟು ಜನರು ಪರದಾಡಿದರು.
ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಕರೆತರಲೂ ಸಾಧ್ಯವಾಗದಂತ ಸನ್ನಿವೇಶ ನಿರ್ಮಾಣವಾಗಿತ್ತು. ಪೊಲೀಸರು ಹರಸಾಹಸ ನಡೆಸಿ ಕಡೆಗೂ ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದರು.
ದಾಬಸ್ಪೇಟೆಯಿಂದ ದೊಡ್ಡಬಳ್ಳಾಪುರ, ಶಿವಗಂಗೆ, ಆಗಳಕುಪ್ಪೆ, ಕೊರಟಗೆರೆ ರಸ್ತೆಗಳಲ್ಲಿ ಸಂಚಾರ ಸಿಕ್ಕು ಏರ್ಪಟ್ಟು ತಾಸುಗಟ್ಟಲೆ ಸವಾರರ ಜತೆಗೆ ರಸ್ತೆ ದಾಟಲು ಪಾದಚಾರಿಗಳೂ ಪರದಾಡಿದರು. 3 ಗಂಟೆಗಳ ಬಳಿಕ ಸಂಚಾರ: ಹೆದ್ದಾರಿಯ ಎರಡು ಬದಿ ರಸ್ತೆಗಳಲ್ಲಿಯೂ ವಾಹನಗಳು ಮುಂದೆ ಸಾಗಲು ಸಾಧ್ಯವಾಗದೆ ಸುಮಾರು 2 ಗಂಟೆ ಕಾಲ ಸ್ಥಗಿತಗೊಂಡಿದ್ದವು. ಸಂಚಾರ ಪೊಲೀಸರು ಸುಗಮ ಸಂಚಾರಕ್ಕೆ ಬೆವರು ಹರಿಸುವಂತಾಯಿತು. ಅಪಘಾತಕ್ಕೀಡಾಗಿದ್ದ ಲಾರಿ ಹಾಗೂ ಕಾರು ತೆರವುಗೊಳಿಸಿ ಸುಮಾರು 3 ಗಂಟೆಗಳ ಬಳಿಕ ವಾಹನಗಳು ಸಾಗಲು ಅವಕಾಶ ಮಾಡಿಕೊಡಲಾಯಿತು.
ಕುಡಿವ ನೀರಿಗೆ ಪರದಾಟ: ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಸಂಚಾರ ಸಿಕ್ಕಿನಲ್ಲಿ ಸಿಲುಕಿದ ಪ್ರಯಾಣಿಕರು ಕುಡಿವ ನೀರಿಗೂ ಪರದಾಡುತ್ತಿದ್ದ ದೃಶ್ಯ ಕಂಡುಬಂತು. ಕೆಲವು ವಾಹನಗಳಲ್ಲಿಟ್ಟುಕೊಂಡಿದ್ದ ಕುಡಿವ ನೀರನ್ನೇ ಅಕ್ಕಪಕ್ಕದ ವಾಹನಗಳ ಪ್ರಯಾಣಿಕರು ಕಾಡಿಬೇಡಿ ಪಡೆಯುತ್ತಿದ್ದ ದೃಶ್ಯ ಕಂಡುಬಂತು.
ಸಂತೆಯ ಜನರ ಪರದಾಟ : ಬುಧವಾರ ದಾಬಸ್ಪೇಟೆಯಲ್ಲಿ ವಾರದ ಸಂತೆಗೆ ಬಂದಿದ್ದ ಸಾರ್ವಜನಿಕರೂ ಸಂಚಾರ ಸಿಕ್ಕಿಗೆ ಸಿಲುಕಿ ಪರದಾಡಿದರು. ಸಾಲುಗಟ್ಟಿ ನಿಂತಿದ್ದ ಬಸ್, ಲಾರಿ ನಡುವೆ ದ್ವಿಚಕ್ರವಾಹನ ಸವಾರರು ಜಾಗ ಮಾಡಿಕೊಂಡು ವಾಹನಗಳ ನಡುವೆ ತೂರಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಇನ್ನಿತರ ವಾಹನಗಳಿಗೆ ದ್ವಿಚಕ್ರ ವಾಹನಗಳು ತಗುಲಿ ಮಾತಿನ ಚಕಮಕಿ ನಡೆದವು.
"
ಹೆದ್ದಾರಿಯಲ್ಲಿ ಯಾವುದೇ ಅಪಘಾತ ಸಂಭವಿಸಿದರೂ ಈ ಭಾಗದಲ್ಲಿ ಇಂಥ ಸನ್ನಿವೇಶ ನಿರ್ಮಾಣವಾಗುವುದು ಸಾಮಾನ್ಯ. ಅಪಘಾತದ ವೇಳೆ ಗಾಯಾಳುಗಳನ್ನು ತುರ್ತು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಸಹ ಬರಲು ಸಾಧ್ಯವಾಗುವುದಿಲ್ಲ. ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದರೆ ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ. ಸಂಚಾರ ಸಿಕ್ಕಿನಲ್ಲಿ ಸಿಲುಕಿದವರಲ್ಲಿ ಯಾರಿಗಾದರೂ ಅನಾರೋಗ್ಯ ಸಮಸ್ಯೆ ಇದ್ದರೆ ದೇವರೆ ಗತಿ ಎಂಬಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ.
— > ರತ್ನಮ್ಮ, ದಾಬಸ್ಪೇಟೆ ನಿವಾಸಿ