ಕರ್ನಾಟಕ ಹೈಕೋರ್ಟ್ ಕಟ್ಟಡ ಮತ್ತು ಕಾರು ಅಪಘಾತ ಪ್ರಕರಣದ ವಿಚಾರಣೆ. 
ರಾಜ್ಯ

"ಕಾರಿನ ಸ್ಟೀರಿಂಗ್ ಮಕ್ಕಳ ಆಟಿಕೆಯಲ್ಲ"! ಅಪ್ರಾಪ್ತನಿಂದ ಆಕ್ಸಿಡೆಂಟ್​; ಮಗನಿಗೆ ಕಾರು ಕೊಟ್ಟ ತಂದೆಗೆ 'ನೋ ರಿಲೀಫ್' ಎಂದ ಹೈಕೋರ್ಟ್! Karnataka High Court

ಅಪ್ರಾಪ್ತ ಮಗ ಕಾರು ಚಲಾಯಿಸಿ ಮೂವರು ಮೃತಪಟ್ಟ ಪ್ರಕರಣದಲ್ಲಿ ತಂದೆಯ ವಿರುದ್ಧದ ನರಹತ್ಯೆ ಆರೋಪ ರದ್ದುಪಡಿಸಲು ಹೈಕೋರ್ಟ್ ನಕಾರ. "ಕಾರಿನ ಸ್ಟೀರಿಂಗ್ ಆಟಿಕೆಯಲ್ಲ" ಎಂದ ನ್ಯಾಯಪೀಠದ ಮಹತ್ವದ ಆದೇಶ ಇಲ್ಲಿದೆ.

ಬೆಂಗಳೂರು: ಅಪ್ರಾಪ್ತ ವಯಸ್ಸಿನ ಮಗ ಕಾರು ಚಲಾಯಿಸಿ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ತಂದೆಯ ವಿರುದ್ಧದ ಕೊಲೆ ಉದ್ದೇಶವಿಲ್ಲದ ಅಪರಾಧಿಕ ನರಹತ್ಯೆ ಆರೋಪವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.

ಮಗನಿಗೆ ಕಾರು ಚಲಾಯಿಸಲು ಅವಕಾಶ ನೀಡಿದ ತಂದೆಯ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ, ವಿಚಾರಣೆ ಮುಂದುವರಿಸಲು ಅಗತ್ಯವಾದ ಸಾಕ್ಷ್ಯಾಧಾರಗಳು ಆರೋಪಪಟ್ಟಿಯಲ್ಲಿವೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಅಭಿಪ್ರಾಯಪಟ್ಟಿದೆ.

“ಮಗುವಿನ ಕೈಗೆ ಸ್ಟೀರಿಂಗ್ ವೀಲ್ ಕೊಡುವ ಪೋಷಕರು, ಆ ಸಾಹಸವು ದುರಂತದಲ್ಲಿ ಅಂತ್ಯಗೊಂಡಾಗ ಮಗುವಿನ ಅಪ್ರಾಪ್ತ ವಯಸ್ಸಿನ ಹಿಂದೆ ಅಡಗಿಕೊಳ್ಳಲು ಸಾಧ್ಯವಿಲ್ಲ. ಪೋಷಕತ್ವದಲ್ಲಿ ಕೇವಲ ಪ್ರೀತಿ ಮತ್ತು ಅಧಿಕಾರವಷ್ಟೇ ಅಲ್ಲ, ಜವಾಬ್ದಾರಿಯೂ ಇರುತ್ತದೆ. ರಸ್ತೆಗಳು ಸಾರ್ವಜನಿಕರಿಗೆ ಸೇರಿದ ಸ್ಥಳಗಳೇ ಹೊರತು, ಕಾನೂನುಬಾಹಿರ ಸ್ವೇಚ್ಛಾಚಾರಕ್ಕೆ, ತರಬೇತಿ ನೀಡುವ ಮೈದಾನಗಳಲ್ಲ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ:

2020ರ ಡಿಸೆಂಬರ್ 10ರಂದು ಮೈಸೂರು–ಬೆಂಗಳೂರು ರಸ್ತೆಯಲ್ಲಿ ಈ ಅಪಘಾತ ಸಂಭವಿಸಿತ್ತು. ನದೀಮ್ ಉರ್ ರೆಹಮಾನ್ ಅವರ 14 ವರ್ಷದ ಮಗ ವೋಕ್ಸ್‌ವ್ಯಾಗನ್ ವೆಂಟೊ ಕಾರು ಚಲಾಯಿಸುತ್ತಿದ್ದಾಗ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದರು.

ಆರಂಭದಲ್ಲಿ ಪೊಲೀಸರು ಅಜಾಗರೂಕ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪಗಳಡಿ ಪ್ರಕರಣ ದಾಖಲಿಸಿದ್ದರು. ನಂತರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304ರ ಭಾಗ-II ಅನ್ನು ಸೇರಿಸಲಾಗಿತ್ತು. ಈ ಪ್ರಕರಣದಲ್ಲಿ ತಂದೆಯನ್ನು ಎರಡನೇ ಆರೋಪಿಯನ್ನಾಗಿ ಮಾಡಲಾಗಿತ್ತು. ವಿಚಾರಣಾ ನ್ಯಾಯಾಲಯವು ಆರೋಪದಿಂದ ಬಿಡುಗಡೆ ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ, ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅಪಘಾತ ನಡೆದ ದಿನ ತಂದೆಯೇ ಮಗನಿಗೆ ಕಾರಿನ ಕೀಲಿಯನ್ನು ನೀಡಿ ವಾಹನ ಚಲಾಯಿಸಲು ಅವಕಾಶ ಮಾಡಿಕೊಟ್ಟಿದ್ದರು ಹಾಗೂ ಈ ಹಿಂದೆ ಕೂಡ ಮಗನಿಗೆ ಕಾರು ಚಲಾಯಿಸಲು ಅನುಮತಿ ನೀಡಿದ್ದರು ಎಂಬುದು ಪ್ರಾಸಿಕ್ಯೂಷನ್‌ನ ಆರೋಪವಾಗಿತ್ತು. ಆದರೆ, ತಂದೆ ಈ ಆರೋಪವನ್ನು ನಿರಾಕರಿಸಿದ್ದರು. ತಮ್ಮ ಅನುಮತಿಯಿಲ್ಲದೆ ಮಗ ಕಾರನ್ನು ತೆಗೆದುಕೊಂಡು ಹೋಗಿದ್ದ ಎಂದು ಅವರು ವಾದಿಸಿದ್ದರು.

ವಾಹನಗಳು ಮಕ್ಕಳ ಆಟಿಕೆಗಳಲ್ಲ!

ಪ್ರತಿಯೊಂದು ಪ್ರಕರಣದಲ್ಲೂ ಅಪ್ರಾಪ್ತ ಮಗುವಿನಿಂದ ಅಪಘಾತ ಸಂಭವಿಸಿದರೆ ಪೋಷಕರನ್ನು ಅಪರಾಧಕ್ಕೆ ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ, ಆದರೆ, ಪೋಷಕರು ಉದ್ದೇಶಪೂರ್ವಕವಾಗಿ ವಾಹನವನ್ನು ಚಾಲನೆ ಮಾಡಲು ಅಪ್ರಾಪ್ತ ಮಗುವಿಗೆ ಒಪ್ಪಿಸಿದ್ದಾರೆ ಮತ್ತು ಇದರಿಂದ ಉಂಟಾಗಬಹುದಾದ ಅಪಾಯದ ಬಗ್ಗೆ ಅವರಿಗೆ ಅಗತ್ಯವಾದ ಅರಿವಿತ್ತು ಎಂಬ ಆರೋಪಗಳಿದ್ದರೆ, ವಿಚಾರಣೆಗೂ ಮುನ್ನವೇ ಆರೋಪವನ್ನು ರದ್ದುಗೊಳಿಸಲಾಗದು ಎಂದು ತಿಳಿಸಿದೆ.

ತಂದೆಗೆ ಅಪರಾಧದ ಸ್ವರೂಪ ಮತ್ತು ಅಪಾಯದ ಬಗ್ಗೆ ಅಗತ್ಯವಾದ ಜ್ಞಾನವಿತ್ತೇ ಎಂಬುದನ್ನು ವಿಚಾರಣೆಯ ಸಂದರ್ಭದಲ್ಲಿ ಸಾಕ್ಷ್ಯಗಳ ಆಧಾರದಲ್ಲಿ ನಿರ್ಧರಿಸಬೇಕು ಎಂದು ನ್ಯಾಯಪೀಠ ಹೇಳಿದೆ. ಮೋಟಾರು ವಾಹನದ ಸ್ಟೀರಿಂಗ್ ವೀಲ್ ಮಗುವಿನ ಕೈಯಲ್ಲಿ ಆಟಿಕೆಯಾಗಿ ಬದಲಾಗಬಾರದು; ಸಾರ್ವಜನಿಕ ರಸ್ತೆಯೂ ಇಂತಹ ಸ್ವೇಚ್ಛಾಚಾರದ ಆಟದ ಮೈದಾನವಾಗಬಾರದು ಎಂದು ಪೀಠ ಹೇಳಿದೆ. ಹೀಗಾಗಿ, ತಂದೆಯ ವಿರುದ್ಧದ ಆರೋಪವನ್ನು ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್, ಪ್ರಕರಣದಲ್ಲಿ ವಿಚಾರಣೆ ಮುಂದುವರಿಯಲು ಅವಕಾಶ ನೀಡಿದೆ.