aata-paata-centre-for-nimhans-staff-children
- * ಬಾಲ್ಯಾವಸ್ಥೆಯ ಆರೈಕೆ ಕೇಂದ್ರ
- * ವಾಸ್ತುಶಿಲ್ಪಿ ಭಾವನಾ ಕುಮಾರ್ ಪರಿಕಲ್ಪನೆಯಲ್ಲಿ ವಿನ್ಯಾಸ
ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯು ವೈದ್ಯರು ಮತ್ತು ಸಿಬ್ಬಂದಿಯ ಪುಟ್ಟ ಮಕ್ಕಳಿಗಾಗಿ ‘ಆಟ-ಪಾಠ’ ಕೇಂದ್ರವನ್ನು ಆರಂಭಿಸಿದೆ.
ಇದು ಬಾಲ್ಯಾವಸ್ಥೆಯ ಆರೈಕೆ ಕೇಂದ್ರವಾಗಿದ್ದು, ಪೌಷ್ಠಿಕಾಂಶದ ಮೇಲ್ವಿಚಾರಣೆ ಜತೆಗೆ, ಮಕ್ಕಳು ಆಟ, ಅನ್ವೇಷಣೆ, ಮಾನಸಿಕ ವಿಕಾಸಕ್ಕೆ ಅನುಗುಣವಾಗುವ ಚಟುವಟಿಕೆ, ಪ್ರಕೃತಿ ಮತ್ತು ತಮ್ಮ ಸುತ್ತಲಿನ ವಾತಾವರಣದ ಕಲಿಕೆ ಸೇರಿದೆ. ಇದು ಸಾರ್ವಜನಿಕ ಸಂಸ್ಥೆಯೊಂದರಲ್ಲಿ ಮಗು-ಕೇಂದ್ರಿತ ಮತ್ತು ಸುಸ್ಥಿರ ಆರಂಭಿಕ ಬಾಲ್ಯದ ಆರೈಕೆ ಹೇಗಿರಬೇಕು ಎಂಬುದರ ಮಾದರಿಯಾಗಿದೆ ಎಂದು ನಿಮ್ಹಾನ್ಸ್ ತಿಳಿಸಿದೆ.
ನಗರ ಪ್ರದೇಶಗಳಲ್ಲಿ ಎದುರಾಗಲಿರುವ ಮಕ್ಕಳ ಸ್ನೇಹಿ ಸ್ಥಳಗಳ ಕೊರತೆ ನೀಗಿಸುವುದು, ಹಸಿರು ವಲಯ ಒದಗಿಸುವುದು ಇದರ ಉದ್ದೇಶ. ಈ ಅಂಶಗಳನ್ನು ಕೇಂದ್ರೀಕರಿಸಿ ‘ಆಟ-ಪಾಠ’ ಕೇಂದ್ರ ನಿರ್ಮಿಸಲಾಗಿದೆ. ಇದು ಮಕ್ಕಳಿಗೆ ಆಟವಾಡಲು, ಅನ್ವೇಷಿಸಲು, ಕಲಿಯಲು ಪ್ರೇರೇಪಿಸಲಿದೆ. ಅಗತ್ಯ ಗಾಳಿ ಬೆಳಕು, ಮಕ್ಕಳ ಸ್ನೇಹಿ ಸಾಮಗ್ರಿ, ದೈಹಿಕ ಚಟುವಟಿಕೆ ಮತ್ತು ಆಟವನ್ನು ಉತ್ತೇಜಿಸುವ ಒಳಾಂಗಣ ವಿನ್ಯಾಸ ಹಾಗೂ ಪ್ರಕೃತಿಯೊಂದಿಗಿನ ಸಂಪರ್ಕ ಮತ್ತು ಸಂವೇದನಾತ್ಮಕ ಅನ್ವೇಷಣೆಯ ಅವಕಾಶಗಳನ್ನು ಈ ಸ್ಥಳದಲ್ಲಿ ಅಳವಡಿಸಲಾಗಿದೆ.
ಈ ಯೋಜನೆಯನ್ನು ‘ಕುಮಾರ್ ಲಾ ನೋಸ್’ನ ವಾಸ್ತುಶಿಲ್ಪಿ ಭಾವನಾ ಕುಮಾರ್ ಪರಿಕಲ್ಪನೆಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದಕ್ಕೆ ಡಾ. ಪ್ರಭಾ ಎಸ್.ಚಂದ್ರ ಅವರ ನೇತೃತ್ವದಲ್ಲಿ ನಿಮ್ಹಾನ್ಸ್‌ನ ಮಕ್ಕಳ ಮಾನಸಿಕ ಆರೋಗ್ಯ ತಜ್ಞರ ಸಲಹೆ, ಆಂತರಿಕ ಇಂಜಿನಿಯರಿಂಗ್ ಮತ್ತು ಸ್ಟ್ರಕ್ಚರಲ್ ತಂಡಗಳ ತಾಂತ್ರಿಕ ಬೆಂಬಲ ಒದಗಿಸಲಾಗಿದೆ. ಇತರೆ ಸಂಸ್ಥೆಗಳು ಅನುಸರಿಸಬಹುದಾದ ಮಾದರಿ ಇದಾಗಿದೆ. ಮಕ್ಕಳು ಮತ್ತು ಅವರು ವಾಸಿಸುವ ಸ್ಥಳಗಳನ್ನು ಅಭಿವೃದ್ಧಿಪಡಿಸುವುದು ಭವಿಷ್ಯದ ಪೀಳಿಗೆಯ ಮಾನಸಿಕ ಆರೋಗ್ಯ ಮತ್ತು ಕ್ಷೇಮದ ಮೇಲಿನ ಹೂಡಿಕೆಯಾಗಿದೆ ಎಂದು ನಿಮ್ಹಾನ್ಸ್ ತಿಳಿಸಿದೆ.