ಕರ್ನಾಟಕ ವಿಶ್ವವಿದ್ಯಾಲಯದ ಶ್ರೀ ಬಸವ ಅಧ್ಯಯನ ಪೀಠ 
ರಾಜ್ಯ

ಕವಿವಿ ಬಸವ ಅಧ್ಯಯನ ಪೀಠದ 'ಸಂಯೋಜಕ ನೇಮಕ' ಪ್ರಹಸನ

ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯದ ಶ್ರೀ ಬಸವ ಅಧ್ಯಯನ ಪೀಠದ ಸಂಯೋಜಕ ನೇಮಕ ಮತ್ತು ಪದಗ್ರಹಣ ವಿಚಾರವಾಗಿ ಮಂಗಳವಾರ ಪ್ರಹಸನ ನಡೆಯಿತು.
ಬಸವ ಪೀಠದ ಸಂಯೋಜಕರನ್ನಾಗಿ ನಗರದ ಶ್ರೀ ಸಾಯಿ ಪದವಿ ಪೂರ್ವ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವೀಣಾ ಬಿರಾದಾರ ಅವರನ್ನು ನೇಮಿಸಲಾಗಿತ್ತು. ಅದರಂತೆ ಮಂಗಳವಾರ ಡಾ. ಬಿರಾದಾರ ಅವರು ಪದಗ್ರಹಣಕ್ಕೆ ತೆರಳಿದ್ದರು. ಆದರೆ, ಕುಲಪತಿ ಡಾ. ಎ.ಎಂ. ಖಾನ್​ ಇಲ್ಲದಿರುವುದು ಮತ್ತು ಇತರ ಕಾರಣಗಳಿಂದ ತಡೆಯೊಡ್ಡಲಾಗಿದೆ. ಪದಗ್ರಹಣವನ್ನು ತಾತ್ಕಾಲಿಕವಾಗಿ ಮುಂದೂಡಿದ್ದರಿಂದ ಡಾ. ವೀಣಾ ಬಿರಾದಾರ ವಿಶ್ವವಿದ್ಯಾಲಯದಿಂದ ಮರಳಿದ್ದಾರೆ.
* ಹಲವರ ಆಕ್ಷೇಪ: ವಿಶ್ವವಿದ್ಯಾಲಯದ ವಿವಿಧ ಪೀಠಗಳ ಸಂಯೋಜಕ ಹುದ್ದೆಗೆ ವಿಶ್ವವಿದ್ಯಾಲಯದವರನ್ನು ಬಿಟ್ಟು ಹೊರಗಿನವರನ್ನು ನೇಮಿಸಬಾರದು ಎಂದು ಶಾಸಕ ಅರವಿಂದ ಬೆಲ್ಲದ, ಕವಿವಿ ಸ್ನಾತಕೋತ್ತರ ಶಿಕ್ಷಕರ ಸಂ, ಕವಿವಿ ಎಸ್​ಸಿ& ಎಸ್​ಟಿ ಸ್ನಾತಕೋತ್ತರ ಶಿಕ್ಷಕರ ಸಂ ಆಕ್ಷೇಪ ವ್ಯಕ್ತಪಡಿಸಿದ್ದರು.
ಇತ್ತೀಚೆಗೆ ಕುಲಪತಿಗೆ ಪತ್ರ ಬರೆದಿದ್ದ ಶಾಸಕ ಬೆಲ್ಲದ, ಕವಿವಿಗೆ ಸಂಬಂಧಪಡದ ಹೊರಗಿನವರ ನೇಮಕ ಸರಿಯಲ್ಲ. ಹೀಗಾಗಿ ನೇಮಕಕ್ಕೆ ಅರ್ಹತೆಯನ್ನು ನಿಗದಿಗೊಳಿಸಿ ಪ್ರಕ್ರಿಯೆ ಮುಂದುವರಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದರು. ಅಲ್ಲದೆ, ರಾಜ್ಯಪಾಲರಿಗೂ ಪತ್ರ ಬರೆದು ಹೊರಗಿನವರ ನೇಮಕ ಬೇಡ ಎಂದು ಪ್ರಸ್ತಾಪಿಸಿ ಈ ಸಂಬಂಧ ನಿಯಮಾವಳಿ ರೂಪಿಸುವಂತೆ ಕೋರಿದ್ದರು.
ಮತ್ತೊಂದೆಡೆ ಕವಿವಿ ಸ್ನಾತಕೋತ್ತರ ಶಿಕ್ಷಕರ ಸಂ ಮತ್ತು ಕವಿವಿ ಎಸ್​ಸಿ& ಎಸ್​ಟಿ ಸ್ನಾತಕೋತ್ತರ ಶಿಕ್ಷಕರ ಸಂಗಳೂ ಕುಲಪತಿಗೆ ಪತ್ರ ಬರೆದಿದ್ದವು. ಸದರಿ ಹುದ್ದೆಗೆ ಕವಿವಿಯಲ್ಲಿ ಪ್ರಸ್ತುತ ಸೇವೆಯಲ್ಲಿರುವ ಪ್ರಾಧ್ಯಾಪಕರು ಅಥವಾ ಅನಿವಾರ್ಯವಿದ್ದರೆ ನಿವೃತ್ತ ಪ್ರಾಧ್ಯಾಪಕರನ್ನು ನೇಮಕ ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದರು.