AAP party is the voice of the public 
ರಾಜ್ಯ

ಎಎಪಿ ಪಕ್ಷ ಸಾರ್ವಜನಿಕರ ಧ್ವನಿ

ಪಾವಗಡ: ದೇಶದಲ್ಲಿ ಗಟ್ಟಿ ನಾಯಕತ್ವದ ಕೊರತೆಯಿದ್ದು, ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಆಮ್​ ಆದ್ಮಿ ಪಕ್ಷವು ಜನಸಾಮಾನ್ಯರಿಗೆ ಧ್ವನಿಯಾಗಿ, ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಎಎಪಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಪಟ್ಟಣದ ರೈನ್​ ಗೇಜ್​ ಬಡಾವಣೆಯಲ್ಲಿ ಆಯೋಜಿಸಿದ್ದ ಆಮ್​ ಆದ್ಮಿ ಪಕ್ಷದ ನೂತನ ತಾಲೂಕು ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ದೇಶದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷದ ನಾಯಕರನ್ನು ಅಕ್ರಮವಾಗಿ ಬಂಧಿಸುತ್ತಿದೆ. ದೇಶದ ಸಂಪತ್ತನ್ನು ಲೂಟಿ ಮಾಡಿ ವಿದೇಶಕ್ಕೆ ಓಡಿಹೋದವರನ್ನು ಹಿಡಿಯದ ಸರ್ಕಾರ, ನ್ಯಾಯಾಲಯದಿಂದ ಕ್ಲೀನ್​ ಚಿಟ್​ ಪಡೆದಿದ್ದ ಅರವಿಂದ್​ ಕೇಜ್ರಿವಾಲ್​ ಅವರನ್ನು ಬಂಧಿಸಿರುವುದು ಅತ್ಯಂತ ಖಂಡನೀಯ ಎಂದು ಕಿಡಿಕಾರಿದರು.
ನಮ್ಮದು ಕುಟುಂಬ ರಾಜಕಾರಣ ಮಾಡುವ ಪಕ್ಷವಲ್ಲ, ಇದು ಸಾಮಾನ್ಯ ಜನರ ಪಕ್ಷ. ಪಾವಗಡ ತಾಲೂಕಿನಲ್ಲಿ ರಾಮಾಂಜಿನಪ್ಪ ಅವರ ನೇತೃತ್ವದಲ್ಲಿ ಪಕ್ಷವು ಈಗಾಗಲೇ ಉತ್ತಮವಾಗಿ ಕೆಲಸ ಮಾಡುತ್ತಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಕಚೇರಿಗೆ ಭೇಟಿ ಮಾಡಿ ನಮೂದಿಸಬಹುದು ಪರಿಹಾರಕ್ಕಾಗಿ ಹೋರಾಡಲು ನಾವು ಬದ್ಧರಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಾಂಜಿನಪ್ಪ ಮಾತನಾಡಿ, ಪಾವಗಡದ ಜನತೆಯ ಸೇವೆಗೆ ನಾನು 24 ಗಂಟೆಯೂ ಲಭ್ಯವಿದ್ದೇನೆ. ಯಾವುದೇ ಸಮಸ್ಯೆಗಳಿದ್ದರೂ ಕಚೇರಿಗೆ ಬಂದು ಮಾಹಿತಿ ನೀಡಿದರೆ ಅವುಗಳ ಪರಿಹಾರಕ್ಕಾಗಿ ಹಾಗೂ ಸೊಲಾರ್​ ಪಾರ್ಕ್​ನಲ್ಲಿ ವಿದ್ಯಾವಂತ ಯುವಕರಿಗೆ ಉದ್ಯೋಗಕ್ಕಾಗಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದೆಂದು ತಿಳಿಸಿದರು.
ತಾಲೂಕು ಅಧ್ಯಕ್ಷ ಬ್ಯಾಡನೂರು ತಿಪ್ಪೇಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.ಸಂಘಟನಾ ಕಾರ್ಯದರ್ಶಿ ಬಸವರಾಜ್​ ಮುದ್ದಿಗೌಡರ್​, ಉಪಾಧ್ಯಕ್ಷ ಲಕ್ಷಿ$್ಮಕಾಂತ್​ ರಾವ್​, ಜಿಲ್ಲಾಧ್ಯಕ್ಷ ಜಯರಾಮಯ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ನಾರಾಯಣ ಇದ್ದರು.