ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಆಧಾರ್ ಕಾರ್ಡ್ನಲ್ಲಿ ಹೆಸರು, ಫೋಟೋ, ವಿಳಾಸ ಎಡಿಟ್ ಮಾಡಿ ವಂಚಿಸುವ ಕಳ್ಳರ ಪತ್ತೆಗೆ ಯುಐಡಿಎಐ ವತಿಯಿಂದ ಆಧಾರ್ ಕ್ಯೂರ್ ಕೋಡ್ ಸ್ಕ್ಯಾನರ್ ಮೊಬೈಲ್ ಅಪ್ಲಿಕೇಷನ್ ಪರಿಚಯಿಸಲಾಗಿದೆ. ಇದನ್ನು ಇಂಟರ್ನೆಟ್ ಸಹಾಯ ಇಲ್ಲದೆಯೂ ಬಳಸಬಹುದಾಗಿದೆ.
ಆಧಾರ್ನಲ್ಲಿನ ಕ್ಯೂರ್ ಕೋರ್ಡ್ ಸ್ಕ್ಯಾನ್ ಮಾಡಿದರೆ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಮತ್ತು ಫೋಟೋ ತೋರಿಸಲಿದೆ. ಇದರಿಂದ ಆಧಾರ್ ನಕಲಿಯೋ ಅಸಲಿಯೋ ಎಂಬುದನ್ನು ದೃಢೀಕರಿಸಬಹುದು. ಸಾಮಾನ್ಯ ಜನರೂ ಇದನ್ನು ಉಪಯೋಗ ಮಾಡಬಹುದು. ಇತ್ತೀಚೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಭೆ ಕರೆದು ಎಲ್ಲ ಇಲಾಖೆಗಳು ಕಡ್ಡಾಯವಾಗಿ ಮೊಬೈಲ್ ಅಪ್ಲಿಕೇಷನ್ ಬಳಸುವಂತೆ ಸೂಚಿಸಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆಯಲ್ಲಿ ದೈನಂದಿನ ಕರ್ತವ್ಯದ ವೇಳೆ ಬಳಸುವಂತೆ ರಾಜ್ಯ ಅಪರಾಧ ಪ್ರಕರಣಗಳ ದಾಖಲಾತಿ ವಿಭಾಗ ಸುತ್ತೋಲೆ ಹೊರಡಿಸಿದೆ. ಇದರಿಂದ ಪೊಲೀಸ್ ತನಿಖೆಗೆ ಸಾಕಷ್ಟು ಅನುಕೂಲವಾಗಲಿದೆ.
ವೃತ್ತಿಪರ ಕಳ್ಳರು ಸೆರೆ ಸಿಕ್ಕಾಗ ಪೊಲೀಸರಿಗೆ ನಕಲಿ ಆಧಾರ್ ಕೊಟ್ಟು ವಂಚಿಸುತ್ತಿದ್ದರು. ಪರಿಣಾಮ ಸಿಸಿಟಿಎನ್ಎಸ್ನಲ್ಲಿ ಹಳೆಯ ಅಪರಾಧಿಗಳ ದತ್ತಾಂಶಕ್ಕೆ ಹೋಲಿಕೆ ಆಗದೆ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದರು. ಜತೆಗೆ ಹಳೆಯ ಪ್ರಕರಣಗಳೂ ಗೊತ್ತಾಗುತ್ತಿರಲಿಲ್ಲ. ನ್ಯಾಯಾಲಯದಲ್ಲೂ ನಕಲಿ ದಾಖಲೆ ಕೊಟ್ಟು ಜಾಮೀನು ಪಡೆದು ತಲೆಮರೆಸಿಕೊಳ್ಳುತ್ತಿದ್ದರು. ಬೇರೆ ಜಿಲ್ಲೆ ಅಥವಾ ರಾಜ್ಯಕ್ಕೆ ಹೋಗಿ ಅಪರಾಧ ಎಸಗಿ ನಕಲಿ ಆಧಾರ್ ಕೊಟ್ಟು ವಂಚಿಸುತ್ತಿದ್ದರು. ಇತ್ತ ಕೋರ್ಟ್ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದರು. ಇದಲ್ಲದೆ, ಆರೋಪಿಗಳಿಗೆ ಜಾಮೀನು ಕೊಡುವಾಗ ಜಾಮೀನುದಾರರು ನಕಲಿ ಆಧಾರ್ ಸಲ್ಲಿಕೆ ಮಾಡಿ ಆರೋಪಿಗಳು ತಪ್ಪಿಸಿಕೊಳ್ಳಲು ಅನುಕೂಲ ಮಾಡುತ್ತಿದ್ದರು. ಜಾಮೀನು ಕೊಟ್ಟವರೂ ಸಿಗುತ್ತಿರಲಿಲ್ಲ. ಇದರಿಂದ ಪೊಲೀಸರಿಗೆ ತಲೆನೋವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಗ್ಲಾ ವಲಸಿಗ, ಉಗ್ರರ ಪತ್ತೆಗೂ ಅನುಕೂಲ: ಬಾಂಗ್ಲಾದೇಶದಿಂದ ಕೆಲವರು ಅಕ್ರಮವಾಗಿ ಭಾರತಕ್ಕೆ ಬಂದು ನಕಲಿ ಆಧಾರ್ ಸೃಷ್ಟಿಸಿಕೊಂಡು ಅಕ್ರಮವಾಗಿ ವಾಸವಾಗಿದ್ದಾರೆ. ಇದೀಗ ಆಧಾರ್ ಕ್ಯೂರ್ ಕೋಡ್ ಸ್ಕ್ಯಾನ್ ಅಪ್ಲಿಕೇಷನ್ನಿಂದ ಆಧಾರ್ ಅಸಲಿತನ ಸುಲಭವಾಗಿ ಪತ್ತೆ ಮಾಡಬಹುದು. ಇನ್ನು ಉಗ್ರ ಕೃತ್ಯ ಎಸಗಿ ಬೇರೆ ಬೇರೆ ಹೆಸರಿನಲ್ಲಿ ಆಧಾರ್ ಸೃಷ್ಟಿಸಿಕೊಂಡು ತಲೆಮರೆಸಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಹೋಟೆಲ್, ಬಾಡಿಗೆ ಮನೆ, ಪೇಯಿಂಗ್ ಗೆಸ್ಟ್ನಲ್ಲಿಯೂ ಅನುಮಾನ ಬಂದಾಗ ಆಧಾರ್ ಅಸಲಿತನ ಪತ್ತೆ ಹಚ್ಚಬಹುದು.
ಆಧಾರ್ ಸೆಕ್ಯೂರ್ ಕ್ಯೂ ಆರ್ ಕೋಡ್ ಎಂಬುದು ಆಧಾರ್ ಅಕ್ಷರಗಳು. ಪಿವಿಸಿ ಕಾರ್ಡ್ ಮತ್ತು ಇ-ಆಧಾರ್ ದಾಖಲೆಗಳಲ್ಲಿ ಮುದ್ರಿಸಲಾದ, ಟ್ಯಾಂಪರಿಂಗ್-ನಿರೋಧಕ, ಡಿಜಿಟಲ್ ಸಹಿ ಮಾಡಿದ ಕೋಡ್ ಆಗಿದೆ. ಇದನ್ನು ಯುಐಡಿಎಐನ ಅಧಿಕೃತ ಕ್ಯೂಆರ್ ಕೋಡ್ ಸ್ಕ್ಯಾನರ್ ಅಪ್ಲಿಕೇಶನ್ ಬಳಸಿ ಮಾತ್ರ ಓದಬಹುದು.