ವೈರಲ್ ಆಯ್ತು ಮದ್ವೆ ಆಮಂತ್ರಣ ಪತ್ರಿಕೆ ( Farmer )
- ಯಾರು ಇಲ್ಲ ಅಂದರೂ ಈ ಜಗತ್ತು ಮುನ್ನಡೆಯುತ್ತದೆ ಆದರೆ, ರೈತನಿಲ್ಲ ಅಂದರೆ ವಿನಾಶವಾಗುತ್ತದೆ
- ಇಡೀ ಜಗತ್ತಿನ ಹಸಿವು ನೀಗಿಸುತ್ತಿರುವುದರ ಹಿಂದೆ ರೈತನ ಶ್ರಮವಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ
- ಇಂದಿನ ಕೆಲ ಯುವಕರು ತಾನು ರೈತ ಹೇಳಿಕೊಳ್ಳುವುದಕ್ಕೆ ಹಿಂಜರಿಯುತ್ತಾರೆ
- ಆದರೆ, ಇಲ್ಲೊಬ್ಬ ಯುವಕ ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ರೈತ ಎಂದು ನಮೂದಿಸಿದ್ದಾನೆ
Farmer : ಯಾರು ಇಲ್ಲ ಅಂದರೂ ಈ ಜಗತ್ತು ಮುನ್ನಡೆಯುತ್ತದೆ ಆದರೆ, ರೈತನಿಲ್ಲ ಅಂದರೆ ವಿನಾಶವಾಗುತ್ತದೆ. ಇಡೀ ಜಗತ್ತಿನ ಹಸಿವು ನೀಗಿಸುತ್ತಿರುವುದರ ಹಿಂದೆ ರೈತನ ಶ್ರಮವಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಯಾವುದೇ ದೇಶವಾಗಲಿ ಅಥವಾ ಸಮಾಜವಾಗಲಿ ಆಹಾರವಿಲ್ಲದಿದ್ದರೆ ಯಾವುದೇ ಪ್ರಗತಿ, ತಂತ್ರಜ್ಞಾನ, ವ್ಯಾಪಾರ, ಶಿಕ್ಷಣ, ಕಲೆ ಹಾಗೂ ಸಂಸ್ಕೃತಿ ಏನೂ ಸಾಧ್ಯವಾಗುವುದಿಲ್ಲ. ಹೀಗಿರುವಾಗ, ಇಂದು ರೈತನನ್ನು ಕೀಳಾಗಿ ಕಾಣುವವರೇ ಹೆಚ್ಚು. ರೈತನಾದರೆ ಜೀವನದಲ್ಲಿ ಏಳಿಗೆ ಸಾಧ್ಯವಿಲ್ಲ ಎಂಬ ಕೆಟ್ಟ ಭಾವನೆ ಅನೇಕರಲ್ಲಿದೆ. ಇನ್ನು ಇಂದಿನ ಕೆಲ ಯುವಕರು ತಾನು ರೈತ ಹೇಳಿಕೊಳ್ಳುವುದಕ್ಕೆ ಹಿಂಜರಿಯುತ್ತಾರೆ. ಆದರೆ, ಇಲ್ಲೊಬ್ಬ ಯುವಕ ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ರೈತ ಎಂದು ಬರೆಯಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.
ಅಂದಹಾಗೆ, ಮದುವೆ ಪತ್ರಿಕೆಯಲ್ಲಿ ತಮ್ಮ ಸ್ಥಾನಮಾನ ಸೇರಿಸುವುದು ಒಂದು ಟ್ರೆಂಡ್ ಆಗಿದೆ. ತಮ್ಮ ಹೆಸರಿನ ಮುಂದೆ ತಾವು ಮಾಡುವ ವೃತ್ತಿಯನ್ನು ಮತ್ತು ತಾವು ಪಡೆದಿರುವ ಪದವಿಯನ್ನು ಸೇರಿಸಿಕೊಳ್ಳುತ್ತಾರೆ. ಡಾಕ್ಟರ್, ಇಂಜಿನಿಯರ್, ಪೊಲೀಸ್, ಶಿಕ್ಷಕ ಹೀಗೆ ಯಾವುದೇ ವೃತ್ತಿಯಲ್ಲಿದ್ದರೂ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರಿನ ಮುಂದೆ ಸೇರಿಸಿಕೊಳ್ಳುತ್ತಾರೆ. ಆದರೆ, ರೈತ ಎಂದು ಹೇಳಿಕೊಳ್ಳಲು ಅನೇಕರು ಹಿಂದೇಟು ಹಾಕುತ್ತಾರೆ. ಅದಕ್ಕೆ ಕಾರಣವೂ ಇದೆ.
ಇಂದು ರೈತನಿಗೆ ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ. ಯುವಕ ಎಷ್ಟೇ ಒಳ್ಳೆಯವನಾಗಿದ್ದರೂ, ಎಷ್ಟೇ ಜಮೀನು ಇದ್ದರೂ ರೈತನಿಗೆ ಹೆಣ್ಣು ಕೊಡಲು ಯಾರೂ ಬಯಸುತ್ತಿಲ್ಲ. ಏಕೆಂದರೆ, ರೈತನ ಜೀವನ ಕಷ್ಟದ ಜೀವನ ಎಂಬ ಭಾವನೆ ಇದೆ. ರೈತನ ಜೀವನ ಅನಿಶ್ಚಿತತೆಯಿಂದ ಕೂಡಿದೆ ಅನ್ನೋ ನಂಬಿಕೆ ಇದೆ ಮತ್ತು ಗ್ರಾಮೀಣ ಜೀವನದ ತೊಂದರೆಗಳನ್ನು ನೆನೆದು ಅನೇಕ ಮಂದಿ ತಮ್ಮ ಹೆಣ್ಣು ಮಕ್ಕಳನ್ನು ಹಳ್ಳಿಗಳಿಗೆ ಮದುವೆ ಮಾಡಿಕೊಡಲು ಹಿಂಜರಿಯುತ್ತಿದ್ದಾರೆ. ಒಂದು ವೇಳೆ ಮದುವೆ ಮಾಡಿಕೊಟ್ಟರೆ ತಮ್ಮ ಮಗಳು ಕೂಡ ಹೊಲ-ಗದ್ದೆಯಲ್ಲಿ ಕೆಲಸ ಮಾಡಿಕೊಂಡು ಇರಬೇಕಾಗುತ್ತದೆ ಎಂದು ನಂಬಿದ್ದಾರೆ. ಹೀಗಾಗಿಯೇ ಡಾಕ್ಟರ್, ಇಂಜಿನಿಯರ್ ಅಥವಾ ಸರ್ಕಾರಿ ಕೆಲಸದಲ್ಲಿ ಇರುವವರಿಗೆ ತಮ್ಮ ಹೆಣ್ಣು ಮಕ್ಕಳನ್ನು ಕೊಟ್ಟು ಮದುವೆ ಮಾಡಲು ಮುಗಿಬೀಳುತ್ತಾರೆ. ಹೀಗಾಗಿಯೇ ಅನೇಕರು ತಾನೊಬ್ಬ ರೈತ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಾರೆ.
ಆದರೆ, ರೈತನ ಪ್ರಾಮುಖ್ಯತೆಯನ್ನು ಅರಿತ ಕೆಲವರು ಹೆಮ್ಮೆಯ ರೈತನಾಗಿ ಇರಲು ಇಚ್ಛಿಸುತ್ತಾರೆ. ದೇಶದ ಬೆನ್ನೆಲುಬು ರೈತನಾಗಿರುವಾಗ ಆತನ ಬಗ್ಗೆ ಹೇಳಿಕೊಳ್ಳಲು ಸಂಕೋಚ ಏಕೆ ಎಂಬ ಭಾವನೆಯನ್ನು ಹೊಂದಿರುತ್ತಾರೆ. ರೈತನ ಶ್ರಮ ಅರಿತ ಕೆಲ ಯುವತಿಯರು ರೈತನನ್ನು ಮದುವೆಯಾಗಲು ಮುಂದೆ ಬರುತ್ತಾರೆ. ಅಂದಹಾಗೆ, ದುಡಿಯಲು ನಿಂತರೆ ಯಾವುದೇ ರೈತನು ಕೂಡ ಕಮ್ಮಿ ಇಲ್ಲ. ಕೃಷಿಯಲ್ಲೇ ಕೋಟ್ಯಂತರ ಆದಾಯ ತೆಗೆಯುವ ಎಷ್ಟೋ ಮಂದಿ ಇದಾರೆ. ರೈತನ ಬೆಲೆ ಗೊತ್ತಿದ್ದರೂ ಹೆಣ್ಣು ಕೊಡಲು ಹಿಂದೇಟು ಹಾಕುವವರಿಗೆ ವೈರಲ್ ಆಗುತ್ತಿರುವ ಮದುವೆ ಆಮಂತ್ರಣ ಪತ್ರಿಕೆ ಒಂದು ಉತ್ತಮ ಸಂದೇಶವಾಗಿದೆ.
ವೈರಲ್ ಆಯ್ತು ಆಮಂತ್ರಣ ಪತ್ರಿಕೆ
ರೈತ ಯುವಕನೊಬ್ಬ ತನ್ನ ಮದುವೆ ಲಗ್ನ ಪತ್ರಿಕೆಯಲ್ಲಿ ಧೈರ್ಯದಿಂದ ರೈತ ಎಂದು ಹಾಕಿಕೊಂಡಿದ್ದಾನೆ. ಇಲ್ಲಿನ ಇನ್ನೊಂದು ಅಚ್ಚರಿಯ ವಿಷಯವೇನೆಂದರೆ, ವಧು ಎಂಸಿಎ ಪದವೀಧರೆ. ಉನ್ನತ ಸ್ಥಾನದಲ್ಲಿದ್ದುಕೊಂಡು ರೈತನನ್ನು ಕೈಹಿಡಿಯಲು ಒಪ್ಪಿರುವ ವಧುವಿಗೂ ಮೆಚ್ಚುಗೆಯ ಮಹಾಪೂರ ಹರಿಬರುತ್ತಿದೆ. ವಧುವಿನ ಹೆಸರು ಆಶಾ ಹಾಗೂ ವರನ ಹೆಸರು ಚೇತನ್. ಇಬ್ಬರ ಮದುವೆ ಇಂದು (ಫೆ.22) ದಾವಣಗೆರೆಯಲ್ಲಿ ನಡೆಯುತ್ತಿದೆ. ಇದರ ನಡುವೆ ಲಗ್ನ ಪತ್ರಿಕೆ ವೈರಲ್ ಆಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಒಂದು ಮದುವೆ ನಿಜಕ್ಕೂ ಮಾದರಿ ಮದುವೆ ಆಗಲಿದೆ. ರೈತನನ್ನು ಕೀಳಾಗಿ ನೋಡುವ ಜನರಿಗೆ ಇಂದೊಂದು ಖಡಕ್ ಸಂದೇಶವಾಗಲಿದೆ. ಅಲ್ಲದೆ, ರೈತನೆಂದು ಹೇಳಿಕೊಳ್ಳಲು ಹಿಂಜರಿಯುವ ಯುವಕರಿಗೂ ಈ ಲಗ್ನ ಪತ್ರಿಕೆ ಸ್ಫೂರ್ತಿ ನೀಡಲಿದೆ.
ಅಂದಹಾಗೆ, ರೈತನನ್ನು ವರಿಸುವ ವಧುವಿಗೆ 10 ಲಕ್ಷ ರೂಪಾಯಿ ಠೇವಣಿ ಇಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ರಾಜ್ಯ ರೈತ ಸಂಘಟನೆಗಳ ಮುಖಂಡರು ಇತ್ತೀಚೆಗಷ್ಟೇ ಮನವಿ ಮಾಡಿದ್ದಾರೆ. ಬಜೆಟ್ ಪೂರ್ವಭಾವಿ ಸಭೆ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಹೀಗಿರುವಾಗ, ಈ ಲಗ್ನ ಪತ್ರಿಕೆ ವೈರಲ್ ಆಗಿರುವುದು ಸಮಾಜ ಬದಲಾಗುತ್ತಿರುವುದರ ಸೂಚನೆಯಾಗಿದೆ. ಇಂತಹ, ಮದುವೆಗಳು ಇನ್ನಷ್ಟು ಆಗಲಿ ಎಂಬುದೇ ಎಲ್ಲರ ಆಶಯವಾಗಿದೆ.