A young man from Bagepalli died of a heart attack in Dubai.
ಬಾಗೇಪಲ್ಲಿ: ದುಬೈನಲ್ಲಿ ಮಾ.19ರಂದು ಹೃದಯಾಘಾತವಾಗಿ ಮೃತಪಟ್ಟಿದ್ದ ಬಾಗೇಪಲ್ಲಿ ತಾಲೂಕಿನ ಬಿಳ್ಳೂರು ಗ್ರಾಮದ ಎಸ್.ರವಿತೇಜ (25) ಅವರ ಅಂತ್ಯಸಂಸ್ಕಾರವನ್ನು ಭಾನುವಾರ ಸ್ವಗ್ರಾಮದಲ್ಲಿ ನೆರವೇರಿಸಲಾಯಿತು.
ದುಬೈ ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಸ್.ರವಿತೇಜ ಯುದ್ಧದ ಆರ್ಭಟಕ್ಕೆ ಬೆಚ್ಚಿಬಿದ್ದು, ಮಾ.19ರಂದು ಹೃದಯಾಘಾತವಾಗಿ ಮೃತಪಟ್ಟಿದ್ದರು. ಯುಗಾದಿ ಆಚರಣೆಯಲ್ಲಿದ್ದ ತಂದೆ&ತಾಯಿಗೆ ಮಗನ ಸಾವಿನ ಸುದ್ದಿ ತಿಳಿದು ದಿಕ್ಕು ತೋಚದ ಪರಿಸ್ಥಿತಿ ಎದುರಾಗಿತ್ತು.
ಸುಧಾಕರ್ ಶ್ರಮ ಅಪಾರ: ಕೊಲ್ಲಿ ರಾಷ್ಟ್ರಗಳ ಯುದ್ಧ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ಸೇವೆಗಳು ರದ್ದಾಗಿದ್ದು, ರವಿತೇಜ ಪಾರ್ಥಿವ ಶರೀರವನ್ನು ಭಾರತ ದೇಶಕ್ಕೆ ತರಲು ಸಾಧ್ಯವಾಗದಂತಾಗಿತ್ತು. ಮತ್ತೊಂದು ಕಡೆ ಕುಟುಂಬ ಸದಸ್ಯರು ದುಬೈಗೆ ತೆರಳಿ ಮಗನ ಅಂತ್ಯಕ್ರಿಯೆ ನಡೆಸಲು ಸಾಧ್ಯವಿಲ್ಲದ ಪರಿಸ್ಥಿತಿ ಇತ್ತು. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ರವಿತೇಜ ತಂದೆ, ತಾಯಿ ಮಗನ ಮೃತದೇಹವನ್ನು ತರಲು ಸ್ಥಳಿಯ ಎನ್ಡಿಎ ಮುಖಂಡರಾದ ಹರಿನಾಥರೆಡ್ಡಿ, ಟಿ.ಕೋನಪರೆಡ್ಡಿ, ಜೆ.ಪಿ.ಚಂದ್ರಶೇಖರರೆಡ್ಡಿ, ಎಸ್.ಆರ್.ಲ್ಮನಾರಾಯಣ ಮುಖಾಂತರ ಸಂಸದ ಡಾ.ಕೆ.ಸುಧಾಕರ ಬಳಿ ಸಹಾಯಕ್ಕಾಗಿ ಮನವಿ ಮಾಡಿದ್ದರು.
ವಿಷಯ ತಿಳಿಸಿದ ಡಾ.ಕೆ.ಸುಧಾಕರ್, ಪ್ರಧಾನ ಮಂತ್ರಿ ಕಚೇರಿ ಅಧಿಕಾರಿಗಳು, ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರೊಂದಿಗೆ ಚರ್ಚಿಸಿ ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿ ದುಬೈನ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿದ್ದ ರವಿತೇಜ ಪಾರ್ಥಿವ ಶರೀರರವನ್ನು ವಿಮಾನದ ಮೂಲಕ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರವಾನಿಸುವ ವ್ಯವಸ್ಥೆ ಮಾಡಿದರು. ಮಾ.22ರಂದು ಬೆಳಗಿನ ಜಾವ ಮೃತ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಒಪ್ಪಿಸಿದ್ದು, ಆಂಬುಲೆನ್ಸ್ ಮೂಲಕ ಪಾರ್ಥಿವ ಶರೀರವನ್ನು ಸ್ವಗ್ರಾಮ ಬಿಳ್ಳೂರಿಗೆ ಸಾಗಿಸಿ ಅಂತ್ಯಸಂಸ್ಕಾರ ಮಾಡಲಾಯಿತು.
ರವಿತೇಜ 6 ತಿಂಗಳ ಹಿಂದೆಯಷ್ಟೇ ದುಬೈಗೆ ತೆರಳಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ. ಮಾ.19 ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಡಾ.ಕೆ.ಸುಧಾಕರ್ ಆಸ್ಪತ್ರೆ ಖರ್ಚು ಸೇರಿ ಎಲ್ಲ ರೀತಿ ವೆಚ್ಚಗಳನ್ನು ಭಾರತ ಸರ್ಕಾರ ಭರಿಸುವ ವ್ಯವಸ್ಥೆ ಮಾಡಿದ್ದು, ಕುಟುಂಬ ಸದಸ್ಯರಿಗೆ ಮಗನ ಪಾರ್ಥಿವ ಶರೀರ ಹಸ್ತಾಂತರಿಸಿದ್ದಾರೆ. ಸಂಸದರ ಕಾರ್ಯಕ್ಕೆ ಪಾಲಕರು, ಸಂಬಂಧಿಕರು ಧನ್ಯವಾದ ಸಲ್ಲಿಸುತ್ತಿದ್ದೇವೆ.
> ಎಸ್.ಆರ್.ಲ್ಮನಾರಾಯಣಮೃತ ಯುವಕನ ಸಂಬಂಧಿ