Bengaluru influencer Vanitha arrestedBengaluru influencer Vanitha arrested
- ಉದ್ಯಮಿಗಳಿಗೆ ಆನ್‌ಲೈನ್‌ನಲ್ಲಿ ಗಾಳ ಹಾಕುತ್ತಿದ್ದ 31 ವರ್ಷದ ಮಹಿಳೆ ಬಂಧನ
- ರೀಲ್ಸ್ ತೋರಿಸಿ ನಂಬಿಕೆ ಗಳಿಸಿ, ಹಣ ಪೀಕುತ್ತಿದ್ದ ಸುಂಕದಕಟ್ಟೆಯ ಮಹಿಳೆ ವನಿತಾ
- ಸಿಸಿಟಿವಿ ಇರದ ಏಕಾಂತ ಪ್ರದೇಶಗಳಲ್ಲಿ ನಗದು ಪಡೆದು ಬಳಿಕ ಸಂಪರ್ಕಕ್ಕೆ ಸಿಗದೆ ವಂಚನೆ
Bengaluru influencer Vanitha arrested: ಮಹಿಳೆಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಶ್ರೀಮಂತ ಉದ್ಯಮಿಗಳನ್ನು ಪರಿಚಯ ಮಾಡಿಕೊಂಡು, ಅವರೊಂದಿಗೆ ಆತ್ಮೀಯವಾಗಿ ಚಾಟ್ ಮಾಡಿ, ಸಾಲ ಎಂದು ಹಣ ಪಡೆದು ವಂಚಿಸುತ್ತಿದ್ದ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿ ಬೆಳಕಿಗೆ ಬಂದಿದೆ.
ಶ್ರೀಮಂತ ಉದ್ಯಮಿಗಳಿಗೆ ವಂಚಿಸುತ್ತಿದ್ದ 31 ವರ್ಷದ ಸುಂಕದಕಟ್ಟೆ ನಿವಾಸಿ ವನಿತಾ ಎಂಬುವವರನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿಗಳಿಗೆ ಗಾಳ
ವನಿತಾ ಸೋಶಿಯಲ್ ಮೀಡಿಯಾದ ಮೂಲಕ ಉದ್ಯಮಿಗಳನ್ನು ಹುಡುಕಿ ಫಾಲೋ ರಿಕ್ವೆಸ್ಟ್ ಕಳುಹಿಸಿ, ತಾನು ಮಾಡಿದ್ದ ರೀಲ್ಸ್ ಹಾಗೂ ವಿಡಿಯೋಗಳನ್ನು ಅವರಿಗೆ ಕಳುಹಿಸುತ್ತಿದ್ದಳು. ಈ ಮೂಲಕ ಅವರ ಸಂಪೂರ್ಣ ನಂಬಿಕೆ ಗಳಿಸುತ್ತಿದ್ದಳು. ಆಕೆಯ ಜೊತೆಗೆ ಆತ್ಮೀಯವಾಗಿ ಮಾತನಾಡಲು ಶುರು ಮಾಡಿದ ನಂತರ ತನ್ನ ಚಾಲಾಕಿ ತನವನ್ನು ತೋರಿಸುತ್ತಿದ್ದಳು.
ಎಮೆರ್ಜೆನ್ಸಿ ಎಂದು ನಾಟಕ
'ನನಗೆ ಹಣದ ತುರ್ತು ಅಗತ್ಯವಿದೆ. ಒಡವೆ ಅಡವಿಟ್ಟಿದ್ದೇನೆ, ಸಾಲ ಕೊಡಿ ಅದನ್ನು ಎರಡರಿಂದ ಮೂರು ದಿನದೊಳಗೆ ವಾಪಸ್ ಕೊಡುತ್ತೇನೆ' ಎಂದು ಹೇಳಿ ನಂಬಿಸುತ್ತಿದ್ದಳು. ಹಣ ಪಡೆಯುವಾಗ, ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ನಿರ್ಜನ ಪ್ರದೇಶಗಳಿಗೆ ಉದ್ಯಮಿಗಳನ್ನು ಕರೆಸಿಕೊಂಡು ನಗದನ್ನು ಪಡೆದುಕೊಳ್ಳುತ್ತಿದ್ದಳು. ಹಣ ಕೈ ಸೇರಿದ ನಂತರ ಸಂತ್ರಸ್ತರ ಕರೆ ಸ್ವೀಕರಿಸುತ್ತಿರಲಿಲ್ಲ. ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ. ಫೋನ್, ಮೆಸೇಜ್, ರೀಲ್ಸ್ ಕಳಿಸುವುದುನ್ನು ಸಂಪೂರ್ಣವಾಗಿ ನಿಲ್ಲಿಸಿ ವಂಚಿಸುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಿರತಾಕಿ ಅರೆಸ್ಟ್
ಹಣ ಕಳೆದುಕೊಂಡ ಸಂತ್ರಸ್ತ ಯುವಕನೊಬ್ಬ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಆತನ ದೂರಿನ ಮೇರೆಗೆ ತನಿಖೆ ನಡೆಸಿ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಈಕೆಯ ವಿರುದ್ಧ ಗೋವಿಂದರಾಜನಗರ ಮತ್ತು ಜ್ಞಾನಭಾರತಿ ಪೊಲೀಸ್ ಠಾಣೆಗಳಲ್ಲೂ ಇದೇ ರೀತಿಯ ವಂಚನೆ ಪ್ರಕರಣಗಳು ದಾಖಲಾಗಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ, (ಏಜೆನ್ಸೀಸ್)