ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ
ಬೆಂಗಳೂರು : ರಾಜ್ಯದಲ್ಲಿ 150 ನಾಡ ಕಚೇರಿಗಳಿಗೆ ಹೊಸ ಕಟ್ಟಡ ನಿರ್ಮಾಣ ಮಾಡಲು ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಮಂಗಳವಾರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಮೊದಲ ಹಂತದಲ್ಲಿ 94 ಕಚೇರಿ ಮತ್ತು 2ನೇ ಹಂತದಲ್ಲಿ 56 ಕಚೇರಿ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದರು.
ರಾಜ್ಯದಲ್ಲಿ 771 ಹೋಬಳಿ ಮಟ್ಟದ ನಾಡ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ 54 ಸೇವೆಗಳು ಸಿಗಲಿದ್ದು, ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ. ಜತೆಗೆ ಉಪ ತಹಸೀಲ್ದಾರ್, ಕಂದಾಯ ನಿರೀಕ್ಷಕರು(ಆರ್‌ಐ), ಗ್ರಾಮ ಆಡಳಿತ ಅಧಿಕಾರಿಗಳ(ವಿಎ) ಬಳಿ ಕೆಲಸಕ್ಕಾಗಿ ಪ್ರತಿದಿನ ಸಾರ್ವಜನಿಕರು ಬರಲಿದ್ದಾರೆ. ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಕೊಂಡಿಯಾಗಿ ನಾಡಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.
ಈ ಮೊದಲು ಕಟ್ಟಡ ನಿರ್ಮಿಸಲು 18 ಲಕ್ಷ ರೂ. ಮಾತ್ರ ಒದಗಿಸಲಾಗುತ್ತಿತ್ತು. ಪ್ರಸ್ತುತ ಕಟ್ಟಡದ ವಿನ್ಯಾಸವನ್ನೇ ಬದಲಿಸಿ, ಸುಸಜ್ಜಿತವಾದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ. ನಗರ ಪ್ರದೇಶಗಳಲ್ಲಿ 75 ಲಕ್ಷ ರೂ. ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 55 ಲಕ್ಷ ರೂ. ವೆಚ್ಚದಲ್ಲಿ ನಾಡ ಕಚೇರಿಗಳನ್ನು ನಿರ್ಮಿಸಲು ಕೃಷ್ಣಬೈರೇಗೌಡ ಮಂಜೂರಾತಿ ನೀಡಿದರು.