ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ತುಪ್ಪrain ದಕೋಣ ಗೊಲ್ಲರಹಟ್ಟಿಯ ಗ್ರಾಮಸ್ಥರು ಕತ್ತೆಗಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸಿದರು.
ಬುಕ್ಕಾಪಟ್ಟಣ :ದೇಶಾದ್ಯಂತ ಮುಂಗಾರು ಮಳೆ ಕ್ಷೀಣಿಸಿದ್ದು, ಕೃಷಿ ಚಟುವಟಿಕೆಗಳಿಗೆ ತೀವ್ರ ಅಡಚಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ವರುಣದೇವನ ಕೃಪೆಗಾಗಿ ತುಪ್ಪದಕೋಣ ಗೊಲ್ಲರಹಟ್ಟಿಯ ಗ್ರಾಮಸ್ಥರು ಕತ್ತೆಗಳ ಮದುವೆ ಮಾಡಿ ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ.
ಗ್ರಾಮದ ಎರಡು ಕತ್ತೆಗಳಿಗೆ ಗುರು-ಹಿರಿಯರ ಸಮ್ಮುಖದಲ್ಲಿ ಮದುವೆ ನಿಶ್ಚಯಿಸಿ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಮಂತ್ರಣ ಪತ್ರಿಕೆ ನೀಡಿ ಮೆರವಣಿಗೆಯ ಮೂಲಕ ಮದುವೆಗೆ ಆಹ್ವಾನಿಸಲಾಗಿತ್ತು. ಸೋಮವಾರ ಸಂಜೆ ಗ್ರಾಮದ ಅಜ್ಜಪ್ಪನ ದೇವಸ್ಥಾನದಲ್ಲಿ ಮನುಷ್ಯರ ಮದುವೆಯಂತೆಯೇ ಕತ್ತೆಗಳನ್ನು ಮಧುಮಕ್ಕಳಂತೆ ಶೃಂಗರಿಸಿ ಎಲ್ಲ ಧಾರ್ಮಿಕ ಸಂಪ್ರದಾಯಗಳೊಂದಿಗೆ ಸಾವಿರಾರು ಜನರ ಸಮ್ಮುಖದಲ್ಲಿ ಮದುವೆ ಕಾರ್ಯವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಗ್ರಾಮದ ಮುಖಂಡ ಗಜೇಂದ್ರ ಮಾತನಾಡಿ, ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಮಳೆಯನ್ನೇ ಅವಲಂಬಿಸಿವೆ. ಹಿಂದೂ ಸಂಪ್ರದಾಯದಲ್ಲಿ ಮಳೆಯನ್ನು ಆಹ್ವಾನಿಸಲು ಹಲವು ವಿಶೇಷ ಆಚರಣೆಗಳಿವೆ. ಮಳೆರಾಯನ ಪೂಜೆ, ಕತ್ತೆಗಳ ಮದುವೆ ಹಾಗೂ * ಹೋತಿಕ್ಯಾತಗಳ ಶವ ಸಂಸ್ಕಾರದಂತಹ ಆಚರಣೆಗಳು ರೂಢಿಯಲ್ಲಿವೆ. ನಮ್ಮ ಗ್ರಾಮದಲ್ಲಿ ಪೂರ್ವಜರ ಕಾಲದಿಂದಲೂ ಕತ್ತೆಗಳ ಮದುವೆ ಮಾಡುವ ಪದ್ಧತಿಯಿದ್ದು, ಹೀಗೆ ಮಾಡಿದ ತಕ್ಷಣ ಮಳೆ ಬರುತ್ತದೆ ಎಂಬುದು ನಮ್ಮ ನಂಬಿಕೆ ಎಂದರು.
ರಾಮಲಿಂಗಾಪುರ ಗ್ರಾಪಂ ಮಾಜಿ ಸದಸ್ಯ ಕರಿಯಪ್ಪ, ಮುಖಂಡ ಮಹಾಲಿಂಗೇಗೌಡ, ಪೂಜಾರಿ ಜಡಿಯಪ್ಪ, ಪುಟ್ಟೆಗೌಡ, ನಾರಗುಂಟೆ, ರಮೇಶ್, ಉಮೇಶ್, ರಾಜೇಶ್, ಧನಂಜಯ ಇದ್ದರು.