ಅರಕಲಗೂಡಿನಲ್ಲಿ ಪೌರ ಕಾರ್ಮಿಕರು ಮನೆಯೊಂದರ ಮುಂದೆ ಕಸ ಸುರಿದಿರುವುದು.
- ರಸ್ತೆ ಹಾಗೂ ಬೀದಿಗಳಲ್ಲಿ ಕಸ ಎಸೆಯುತ್ತಿದ್ದ ವ್ಯಕ್ತಿ
- ಪಟ್ಟಣ ಪಂಚಾಯಿತಿ ಸಿಬ್ಬಂದಿ ಅದೇ ಕಸ ತಂದು ಹಾಕುವ ಮೂಲಕ ಎಚ್ಚರಿಕೆ
ಅರಕಲಗೂಡು: ರಸ್ತೆ ಹಾಗೂ ಬೀದಿಗಳಲ್ಲಿ ಕಸ ಎಸೆಯುತ್ತಿದ್ದ ವ್ಯಕ್ತಿಯೊಬ್ಬರ ಮನೆ ಮುಂದೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ಅದೇ ಕಸ ತಂದು ಹಾಕುವ ಮೂಲಕ ಎಚ್ಚರಿಕೆಯ ಪಾಠ ಕಲಿಸಿದ್ದಾರೆ.
ಪಟ್ಟಣ ಪಂಚಾಯಿತಿಯಿಂದ ನಿತ್ಯ ಪ್ರತಿ ಮನೆಗೆ ತೆರಳಿ ಕಸ ಸಂಗ್ರಹಿಸಲಾಗುತ್ತಿದೆ. ಆದರೂ ಕೆಲವರು ಕಸವನ್ನು ವಾಹನಕ್ಕೆ ನೀಡದೆ ರಸ್ತೆ, ಬೀದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುತ್ತಿದ್ದರು. ಇದರಿಂದ ಸ್ವಚ್ಛತೆ ಹದಗೆಡುವುದರ ಜತೆಗೆ ದುರ್ವಾಸನೆ, ಸೊಳ್ಳೆಗಳ ಕಾಟ ವಿಪರೀತವಾಗಿತ್ತು. ಈ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ಕಸ ಎಸೆದಿದ್ದ ವ್ಯಕ್ತಿಯನ್ನು ಗುರುತಿಸಿದ ಪಟ್ಟಣ ಪಂಚಾಯಿತಿ ಸಿಬ್ಬಂದಿ, ಅಲ್ಲಿದ್ದ ಕಸವನ್ನು ಸಂಗ್ರಹಿಸಿ ಅದೇ ವ್ಯಕ್ತಿಯ ಮನೆಯ ಮುಂದೆ ಹಾಕುವ ಮೂಲಕ ಸ್ವಚ್ಛತೆ ಕಾಪಾಡುವ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಈ ಘಟನೆ ಸ್ಥಳೀಯರ ಗಮನ ಸೆಳೆದಿದ್ದು, ಹಲವರು ಪಟ್ಟಣ ಪಂಚಾಯಿತಿಯ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಸವನ್ನು ಕಸ ಸಂಗ್ರಹಣ ವಾಹನಕ್ಕೆ ನೀಡಬೇಕು. ರಸ್ತೆ, ಚರಂಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ತಪ್ಪಿಸಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸ್ವಚ್ಛ ಪಟ್ಟಣ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು. ಗಾಡಿ ಬರದಿದ್ದರೆ ನಿವಾಸಿಗಳು ಮೊಬೈಲ್ ಕಾಲ್ ಮಾಡಿ ತಿಳಿಸಿದರೆ ಮತ್ತೆ ಕಳುಹಿಸುತ್ತೇವೆ ಎಂದು ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿ ಚೇತನ್‌ಕುಮಾರ್ ತಿಳಿಸಿದರು.