ಹುನಗುಂದ ತಾಲೂಕು ಇದ್ದಲಗಿ ಗ್ರಾಮದಲ್ಲಿ ನಡೆಸುತ್ತಿರುವ 31ನೇ ದಿನದ ಸಂತ್ರಸ್ತರ ಧರಣಿಗೆ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಬೆಂಬಲ ಸೂಚಿಸಿ ಮಾತನಾಡಿದರು. ರಾಜು ಚಿತ್ತವಾಡಗಿ, ಕುಮಾರ ಗಿರಿಜಾ, ಬಸವರಾಜ ಬಡ್ಡಿ, ಕಲ್ಲಪ್ಪ ಆನೆಹೊಸೂರ ಇದ್ದರು. 
ರಾಜ್ಯ

ಸಂತ್ರಸ್ತರ ಪರ ಸದನದಲ್ಲಿ ಧ್ವನಿ

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಬೆಂಬಲ
  • 31ನೇ ದಿನಕ್ಕೆ ಕಾಲಿಟ್ಟ ಇದ್ದಲಗಿ ಸಂತ್ರಸ್ತರ ಧರಣಿ
ಹುನಗುಂದ: ತಾಲೂಕಿನ ಇದ್ದಲಗಿ ಗ್ರಾಮದ ಮುಳುಗಡೆ ಸಂತ್ರಸ್ತರ ಮೂಲ ಸೌಲಭ್ಯ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯು ಶುಕ್ರವಾರ 31ನೇ ದಿನಕ್ಕೆ ಕಾಲಿಟ್ಟಿತು, ಶುಕ್ರವಾರ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಸಂತ್ರಸ್ತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾರಾಯಣಪೂರ ಹಿನ್ನೀರು ಮತ್ತು ಪ್ರವಾಹ ಬಾಧಿತ ಪ್ರದೇಶಗಳ ಪೈಕಿ ಇದ್ದಲಗಿ ಗ್ರಾಮ ಸೇರಿ 10 ಗ್ರಾಮಗಳ ಮುಳುಗಡೆ ಗ್ರಾಮಗಳು ಅಂತ ಘೋಷಣೆ ಮಾಡಲಾಯಿತು. ಸಂತ್ರಸ್ತರ ಕಳೆದುಕೊಂಡ ಜಮೀನು ಮತ್ತು ಮನೆಗಳಿಗೆ ಯೋಗ್ಯ ಪರಿಹಾರ ಜೊತೆಗೆ ಸಮರ್ಪಕ ಪುನರ್ವಸತಿ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯ. ದಶಕ ಕಳೆದರು ಇವರ ಸಮಸ್ಯೆ ಇತ್ಯರ್ಥವಾಗಿಲ್ಲ ಎನ್ನುವುದು ದುರಂತ ಸಂಗತಿ.
ಇದಕ್ಕೆ ಧ್ವನಿಯಾಗಿ ಸದನದಲ್ಲಿ ಪ್ರಶ್ನೆ ಮಾಡುತ್ತೇನೆ. ಸರ್ಕಾರ ಮಟ್ಟದಲ್ಲಿ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು. ಮುಳುಗಡೆ ಸಂತ್ರಸ್ತರ ನೋವು ಹತ್ತಿರದಿಂದ ನೋಡಿದ್ದೇನೆ. ಅದನ್ನು ಸ್ವತಃ ನಾನು ಕೂಡ ಅನುಭವಿಸಿದ್ದೇನೆ. ಸಾಕಷ್ಟು ಸಾರಿ ಸಂತ್ರಸ್ತರ ಪರವಾಗಿ ಸದನದಲ್ಲಿ ಧ್ವನಿ ಎತ್ತಿದ್ದೇನೆ. ಸರಿಯಾದ ನ್ಯಾಯ ಸಿಕ್ಕಿದೆ ಎನ್ನುವಂತಹ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದು ಇಲ್ಲಿವರೆಗೆ ಯಾವೊಬ್ಬ ಸಂತ್ರಸ್ತರನ್ನು ನಾನು ಕಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಸನಸಾಬ ಪಿಂಜಾರ ಮತ್ತು ಮಹಾಂತೇಶ ನಾಡಗೌಡ, ಶರಣಪ್ಪ ಮುಳ್ಳೂರ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ವಿವರವಾಗಿ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಅವರಿಗೆ ತಿಳಿಸಿದರು.
ರಾಜು ಚಿತ್ತವಾಡಗಿ, ಕುಮಾರ ಗಿರಿಜಾ, ರಾಜು ಬಡಿಗೇರ, ಬಸವರಾಜ ಬಡ್ಡಿ, ಕಲ್ಲಪ್ಪ ಆನೇಹೊಸೂರ, ಸಂಗಪ್ಪ ಚಿಕ್ಕೋಡಿ, ಬಸಪ್ಪ ಹಳೆಪೇಟೆ, ಬಸವರಾಜ ಮುಳ್ಳೂರ, ಮಲ್ಲಮ್ಮ ಗಡ್ಡಿಮಠ, ಮುತ್ತವ್ವ ಬೇನಾಳ, ಹಬಿಸಾಬ್ ಮುಲ್ಲಾ, ಯಮನಪ್ಪ ಅಂಬಿಗೇರ, ಬಸಯ್ಯ ಹಿರೇಮಠ, ರಹೀಮಾನಸಾಬ ಮುಲ್ಲಾ, ಸಂಗಪ್ಪ ಆನೆಹೊಸೂರ, ಮಹಾದೇವಿ ತೋಟಗೇರಿ ಇತರರಿದ್ದರು.
"

ಶೇ. 95ರಷ್ಟು ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ. ಸರ್ಕಾರ ಕೊಟ್ಟ ಪರಿಹಾರದಲ್ಲಿ ಬದುಕು ಕಟ್ಟಿಕೊಳ್ಳುವುದಕ್ಕೆ ಆಗಿಲ್ಲ. ಒಂದು ಸಾರಿ ಪರಿಹಾರದಿಂದ ಸಂತ್ರಸ್ತರ ಬದುಕು ಹಸನಗೊಳ್ಳುವುದಿಲ್ಲ. ಸಂತ್ರಸ್ತರ ಕೈಯಲ್ಲಿ ಹಣ ಇಲ್ಲದಂತಾಗಿದೆ. ಸಂತ್ರಸ್ತರು ಕಳೆದುಕೊಂಡ ಲವತ್ತಾದ ಭೂಮಿಗೆ ಸರಿಯಾದ ಪರಿಹಾರ ಕೂಡಾ ಸರ್ಕಾರ ನೀಡಿಲ್ಲ.

ಪಿ.ಎಚ್. ಪೂಜಾರ ವಿ.ಪ. ಸದಸ್ಯ.