ಅಫಜಲಪುರದ ಸ್ಫೂರ್ತಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ರೈತ ಮುಖಂಡ ಶ್ರೀಮಂತ ಬಿರಾದಾರ ಉದ್ಘಾಟಿಸಿದರು. ಭೀಮರಾವ ಗೌರ, ರಮೇಶ ಪಾಟೀಲ್​, ಬಸವರಾಜ ವಾಲಿ, ನೂರ್​ ಅಹ್ಮದ್​ ಇತರರಿದ್ದರು. 
ರಾಜ್ಯ

ಶಾಶ್ವತ ನೀರಾವರಿಗಾಗಿ ಸಂಘಟಿತ ಹೋರಾಟ ಅಗತ್ಯ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಶ್ರೀಮಂತ ಬಿರಾದಾರ ಅನಿಸಿಕೆ
  • ಅಫಜಲಪುರದಲ್ಲಿ ಸಮಿತಿ ರಚನೆ, ಪದಾಧಿಕಾರಿಗಳ ನೇಮ
ಅಫಜಲಪುರ: ತಾಲೂಕಿನಲ್ಲಿ ಸಮಗ್ರ ಹಾಗೂ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಲು ರೈತರು ಸಂಘಟಿತರಾಗಿ ಹೋರಾಟ ನಡೆಸಲು ತಾಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ ರಚಿಸಲಾಗಿದೆ ಎಂದು ಹಿರಿಯ ರೈತ ಮುಖಂಡ ಶ್ರೀಮಂತ ಬಿರಾದಾರ ಹೇಳಿದರು.
ಸ್ಫೂರ್ತಿ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಸಮಗ್ರ ಶಾಶ್ವತ ನೀರಾವರಿ ಹೋರಾಟ ಸಮಿತಿ ರಚನೆ, ಪದಾಧಿಕಾರಿಗಳ ನೇಮಕ ಸಭೆ ಉದ್ಘಾಟಿಸಿ ಮಾತನಾಡಿ, ಭೀಮಾ ನದಿಯಿಂದ ಸಮಗ್ರ ನೀರಾವರಿ ಅನುಷ್ಠಾನ ಹಾಗೂ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಸಮರ್ಪಕ ಪರಿಹಾರ ದೊರಕಿಸುವುದು ಜವಾಬ್ದಾರಿಯಾಗಿದೆ. ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಬಚಾವತ್​ ತೀರ್ಪಿನಂತೆ ಭೀಮಾ ನದಿಗೆ 15 ಟಿಎಂಸಿ ನೀರು ಹರಿಸುವಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಉಜನಿ ಜಲಾಶಯದಿಂದ ಕರ್ನಾಟಕದ 15 ಟಿಎಂಸಿ ನೀರಿಗಾಗಿ ಕಾನೂನು ಹೋರಾಟ ಮಾಡಬೇಕು. ಭೀಮಾ ಏತ ನೀರಾವರಿ ಯೋಜನೆ ಕಾಲುವೆಗಳನ್ನು ಸ್ವಚ್ಛಗೊಳಿಸಿ ಕಡೆಯ ಹಳ್ಳಿಗೂ ನೀರು ತಲುಪಿಸಬೇಕು. ಬೆಳೆ ವಿಮೆಯಲ್ಲಿ ರೈತರಿಗಾಗುತ್ತಿರುವ ಅನ್ಯಾಯ ತಡೆಗಟ್ಟಲು ಕ್ರಮವಹಿಸಬೇಕು. ಬಚಾವತ್​ ತೀರ್ಪಿನ 15 ಟಿಎಂಸಿ ನೀರು ಬಂದ ನಂತರ ಆಳಂದ ಕೆರೆ ತುಂಬುವ ಯೋಜನೆ ಪ್ರಾರಂಬಿಸಬೇಕು. ತಾಲೂಕಿನ ಎಲ್ಲ ಕೆರೆಗಳ ಹೂಳೆತ್ತಬೇಕು. ನದಿ ನೀರಿನ ಕುರಿತು ಪ್ರತಿ ಹಳ್ಳಿಯಲ್ಲಿ ರೈತರಿಗೆ ಜಾಗೃತಿ ಮೂಡಿಸಿ ಗ್ರಾಮ ಘಟಕಗಳನ್ನು ಮಾಡಬೇಕು. ಭೀಮಾ ನದಿಗೆ ಸಂಬಂಧಿಸಿದ ಆರು ಜನ ಶಾಸಕರನ್ನೊಳಗೊಂಡು ಮುಖ್ಯಮಂತ್ರಿಗಳ ಹತ್ತಿರ ನಿಯೋಗ ಹೋಗಿ ಭೀಮಾ ನದಿಯ ಕರ್ನಾಟಕದ ನೀರಿನ ಪಾಲು ತೆಗೆದುಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಸೊನ್ನ ಬ್ಯಾರೇಜ್​ ನೀರಿನ ಸಂಗ್ರಹ ಹೆಚ್ಚಿಸಲು ಸರ್ಕಾರಕ್ಕೆ ಒತ್ತಡ ಹೇರಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ: ಭೀಮರಾವ ಗೌರ (ಗೌರವ ಅಧ್ಯಕ್ಷ), ರಮೇಶ ಪಾಟೀಲ್​ (ಅಧ್ಯಕ್ಷ), ಬಸವರಾಜ ವಾಳಿ, ನೂರ್​ ಅಹ್ಮದ್​, ನಾಮದೇವ ಕಡಕೋಳ, ಗುರುದತ್ತ ಪೂಜಾರಿ, ಈರಪ್ಪ ತೇಲಿ (ಉಪಾಧ್ಯಕ್ಷರು), ಶ್ರೀಮಂತ ಬಿರಾದಾರ (ಪ್ರಧಾನ ಕಾರ್ಯದರ್ಶಿ), ಶಿವಪುತ್ರ ಬುರಲಿ, ಬಸವರಾಜ ಮಂಗಳೂರ, ಚಂದಪ್ಪ ಬನ್ನೆಟ್ಟಿ, ದೌಲತಗೌಡ ಪಾಟೀಲ್​, ಆನಂದ ಪಾಟೀಲ್​ (ಸಹ ಕಾರ್ಯದರ್ಶಿಗಳು), ಮುರುಂದ್ರ ಮಸಳಿ (ಖಜಾಂಚಿ), ಲತೀಪ್​ ಪಟೇಲ್​, ಅಮೃತರಾವ ಸೂರ್ಯವಂಶಿ, ಮಹಿಬೂಬ್​ ನದಾಫ್​, ಶಾಂತಮಲ್ಲಪ್ಪ ಹೊನ್ನುಂಗುರ, ಯಶ್ವಂತ ಪಟ್ಟೇದಾರ (ಸಂಘಟನಾ ಕಾರ್ಯದರ್ಶಿ), ರಮೇಶ ಶೆಟ್ಟಿ, ಕೆ.ಜಿ.ಪೂಜಾರಿ, ಶಂಕರರಾವ ಹುಲ್ಲೂರ, ಗುರು ಚಾಂದಕವಟೆ, ಚಂದ್ರಶೇಖರ ಕರಜಗಿ, ಸೋಮಶೇಖರ ರೇವೂರ, ಸಿದ್ದರಾಮ ದೇವರನಾವದಗಿ (ಸಲಹಾ ಸಮಿತಿ ಸದಸ್ಯರು) ಹಾಗೂ 22 ಜನರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಯಿತು.