ಬೆಂಗಳೂರು: ಇದು ಸರ್ಕಾರಿ ನೌಕರಿ. ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ನೇರ ಸಂದರ್ಶನ ಮತ್ತು ಅನುಭವ ಪರೀಕ್ಷೆ ನಡೆಸಲಾಗುತ್ತದೆ. ಆದರೆ, ಫೆಲೋಶಿಪ್ ಅಥವಾ ಮಾಸ್ಟರ್ ಫಿಲಾಸಫಿ ಪಡೆದಿದ್ದರೂ ಅರ್ಹತೆ ಸಿಗುವುದಿಲ್ಲ. ಏಕೆಂದರೆ ಒಂಬತ್ತು ಭಾಷೆ ಒಳಗೊಂಡ ಕಮಾಂಡಿಂಗ್ ಬಲ್ಲವರಾಗಿರಬೇಕು, ಜತೆಗೆ ಪ್ರಾಣ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸಬೇಕು!
ಹೌದು. ಇಂಥದೊಂದು ಸರ್ಕಾರಿ ನೌಕರಿಗೆ ಅರಣ್ಯ ಇಲಾಖೆ (9 ಹುದ್ದೆಗಳಿಗೆ) ಅರ್ಜಿ ಆಹ್ವಾನ ಮಾಡಿದೆ. ಅದು ಆನೆ ಕಾವಾಡಿಗ ಗ್ರೂಪ್-ಡಿ ವೃಂದದ ಹುದ್ದೆಗಳಿಗೆ ನೇರ ನೇಮಕಾತಿ ಆಗಿದೆ. ಈ ನೌಕರಿಗೆ ವಿದ್ಯಾರ್ಹತೆ ಮಾನದಂಡವಲ್ಲ. ಬದಲಿಗೆ ಆನೆಗಳ ನಿರ್ವಹಣೆಯಲ್ಲಿ ಅನುಭವ ಹೊಂದಿರುವುದು ಕಡ್ಡಾಯವಾಗಿದೆ. ಆನೆಗಳನ್ನು ಪಳಗಿಸಲು ಮತ್ತು ಕಮಾಂಡಿಂಗ್‌ಗೆ ಕನ್ನಡ, ಉರ್ದು, ಸಂಸ್ಕೃತ, ಮರಾಠಿ, ಹಿಂದಿ, ಬೆಂಗಾಳಿ ಸೇರಿ ಒಂಬತ್ತು ಭಾಷೆಗಳಲ್ಲಿ ಆಜ್ಞೆಗಳನ್ನು ಕೊಡುವ ಪರಿಣಿತಿ ಇರಬೇಕು. ಕಾವಾಡಿಗ ಮತ್ತು ಮಾವುತರ ಕುಟುಂಬ ಸದಸ್ಯರು ಮಾತ್ರ ಈ ಭಾಷೆಯಲ್ಲಿ ಹಿಡಿತ ಸಾಧಿಸಲಿದ್ದಾರೆ. ಉಳಿದವರು ಇದನ್ನು ಕಲಿಯಲು ಸಾಧ್ಯವಾಗುವುದಿಲ್ಲ. ಆದರೆ, ಆನೆಗಳ ನಿರ್ವಹಣೆ ಮತ್ತು ಆರೈಕೆ ಮಾಡುವಾಗ ಯಾವುದೇ ಕ್ಷಣದಲ್ಲಿ ಪ್ರಾಣಕ್ಕೆ ಅಪಾಯ ಬರಬಹುದು. ವರ್ಷವಿಡೀ ಆನೆಯೊಂದಿಗೆ ಇರಬೇಕಾಗುತ್ತದೆ. ಅವುಗಳ ಊಟ, ವಿಶ್ರಾಂತಿ, ಆರೋಗ್ಯ ಸೇರಿ ಪ್ರತಿಯೊಂದು ಆರೈಕೆಯ ಜವಾಬ್ದಾರಿ ಇರಲಿದೆ.
ಪಳಗಿಸಿದ ಆನೆಗಳನ್ನು ಕಾಡಿಗೆ ಬಿಟ್ಟಾಗ ಕಾಡಿನ ಆನೆ ಜತೆಯಾಗಬಹುದು. ಅಂತಹ ವೇಳೆ ಕಾಡಾನೆಯಿಂದ ಪಳಗಿಸಿದ ಆನೆಯನ್ನು ಕರೆತರುವುದು ಸಾಹಸದ ಕೆಲಸವಾಗಲಿದೆ. ಇನ್ನು ಮದವೇರಿದ ಆನೆ ಸಂಗಡ ಸೇರಿಕೊಂಡರೆ ಕವಾಡಿಗರ ಪ್ರಾಣಕ್ಕೂ ಆಪತ್ತು ಬರುವ ಸಾಧ್ಯತೆ ಹೆಚ್ಚಿರಲಿದೆ. ಆದ್ದರಿಂದ ಕಾವಾಡಿಗ ಅಥವಾ ಮಾವುತರ ಕುಟುಂಬದ ಹಿರಿಯರು ಈ ಎಲ್ಲ ಕಹಿ ಅನುಭವಗಳನ್ನು ಕಂಡು ಮಕ್ಕಳು, ಮೊಮ್ಮಕ್ಕಳಿಗೆ ಆನೆ ನಿರ್ವಹಣೆಯ ಅನುಭವ ಇದ್ದರೂ ಈ ಕೆಲಸಕ್ಕೆ ಸೇರಿಸಲು ಹಿಂಜರಿಯುತ್ತಾರೆ.
ಸಾಕಷ್ಟು ಬಾರಿ ಅರಣ್ಯ ಇಲಾಖೆ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದಾಗ ಅರ್ಹತೆ ಇದ್ದವರೂ ಅರ್ಜಿ ಸಲ್ಲಿಸುವುದಿಲ್ಲ. ಅರ್ಜಿ ಸಲ್ಲಿಸಿದವರಲ್ಲಿ ಆನೆ ಪಳಗಿಸುವ ಅನುಭವ ಇರುವುದಿಲ್ಲ. ಆಯ್ಕೆ ಸಮಯದಲ್ಲಿ ಅಭ್ಯರ್ಥಿಗಳು ಆನೆಗಳ ನಿರ್ವಹಣೆ ಮಾಡಿ ಪರೀಕ್ಷೆ ಎದುರಿಸಬೇಕು. ಈ ವೇಳೆ ಅಭ್ಯರ್ಥಿಗಳು ಗಾಯಗೊಂಡಲ್ಲಿ ಅಥವಾ ಅಪೂರ್ಣಗೊಂಡರೆ ಮತ್ತೆ ಪರೀಕ್ಷೆ ಕೊಡುವುದಿಲ್ಲ. ಈ ವೇಳೆ ವಿಡಿಯೋಗ್ರಫಿ ಅಥವಾ ಸಿಸಿ ಕ್ಯಾಮರಾದಲ್ಲಿ ಪ್ರತಿಯೊಂದು ದೃಶ್ಯವನ್ನು ಸೆರೆಹಿಡಿಯಲಾಗುತ್ತದೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅರ್ಜಿ ಸಲ್ಲಿಕೆಗೆ ಸೆ.3 ಕಡೇ ದಿನ
ಚಾಮರಾಜನಗರ ವಲಯದಲ್ಲಿ ಹಿಂಬಾಕಿ ಇರುವ 3 ಹುದ್ದೆಗಳು ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ 6 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಇದರಲ್ಲಿ ಮೂರು ಹುದ್ದೆಗೆ ಮಹಿಳಾ ಮೀಸಲಾತಿ ಒದಗಿಸಲಾಗಿದೆ. ಆಗಸ್ಟ್ 5 ರಿಂದ ಸೆಪ್ಟೆಂಬರ್ 3ರ ಒಳಗಾಗಿ ಅರ್ಜಿ ಸಲ್ಲಿಸಬಹುದು.
ಪಾಕ್, ಕೀನ್ಯಾ ವಲಸಿಗರಿಗೂ ಅವಕಾಶ
1962ಕ್ಕಿಂತ ಮೊದಲು ಭಾರತಕ್ಕೆ ಬಂದಿರುವ ಟಿಬೆಟಿಯನ್ಸ್ ನಿರಾಶ್ರಿತರೂ ಅರ್ಜಿ ಸಲ್ಲಿಸಬಹುದು. ಇವರಲ್ಲದೆ, ಪಾಕಿಸ್ತಾನ, ಮ್ಯಾನ್ಮಾರ್, ಶ್ರೀಲಂಕಾ, ಪೂರ್ವ ಆಫ್ರಿಕಾ ರಾಷ್ಟ್ರಗಳಾದ ಕೀನ್ಯಾ, ಉಗಾಂಡ, ತಾಂಜೇನಿಯ, ಸಂಯುಕ್ತ ಗಣರಾಜ್ಯ, ಮಾಲನಿ, ಜೈರ್, ಇಥಿಯೋಪಿಯಾ ಅಥವಾ ವಿಯೆಟ್ನಾಂ, ಝಂಬಿಯಾಗಳಿಂದ ವಲಸೆ ಬಂದು ಭಾರತದ ಪೌರತ್ವ ಹೊಂದಿರಬೇಕು. ತಾನು ವಾಸಿಸುವ ಜಿಲ್ಲೆಯ ಜಿಲ್ಲಾಧಿಕಾರಿ, ನ್ಯಾಯಾಧೀಶರಿಂದ ಪ್ರಮಾಣ ಪತ್ರ ಒದಗಿಸಬೇಕು. ಕನ್ನಡ ಭಾಷೆ ಕಡ್ಡಾಯ.
750 ಅರಣ್ಯ ವೀಕ್ಷಕ ಹುದ್ದೆಗೆ ಅರ್ಜಿ
ಅರಣ್ಯ ಇಲಾಖೆಯ ವಿವಿಧ ವಲಯದಲ್ಲಿ 750 ಅರಣ್ಯ ವೀಕ್ಷಕರ ಖಾಲಿ ಹುದ್ದೆಗಳ ಭರ್ತಿಗೂ ಅರ್ಜಿ ಆಹ್ವಾನ ಮಾಡಲಾಗಿದೆ. ಆ.1 ರಿಂದ 31ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.