A terrible tragedy 
ರಾಜ್ಯ

ಘೋರ ದುರಂತ

ಬಾಬುಪ್ರಸಾದ್​ ಮೋಡಿಸ್​
ತಾಪಮಾನ ಏರಿಕೆಯಿಂದ ನಲುಗಿದ ಬೆಂಗಳೂರಿನಲ್ಲಿ ಬುಧವಾರ ಸಂಜೆ ಬಿರುಗಾಳಿ ಸಮೇತ ಆಲಿಕಲ್ಲು ಮಳೆ ಸುರಿದಿದೆ. ಆದರೆ, ಬೇಸಿಗೆಯ ಈ ಮೊದಲ ಮಳೆಗೆ ಘೋರ ಅನಾಹುತ ಸಂಭವಿಸಿದ್ದು, ಮುಂಗಾರು ಪೂರ್ವದ ಸ್ಥಿತಿಯನ್ನು ಎದುರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳು ಸೂಕ್ತ ಸಿದ್ಧತೆಗಳು ಮಾಡಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಬೆಂಗಳೂರಿನ ಶಿವಾಜಿ ನಗರದ ಬೌರಿಂಗ್ ಆಸ್ಪತ್ರೆಯ ಶವಾಗಾರ ಬಳಿಯ ಗೋಡೆ ಕುಸಿದ ಪರಿಣಾಮ ಮೂವರು ಮಕ್ಕಳು ಸೇರಿ ಏಳು ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ತಮ್ಮದಲ್ಲದ ತಪ್ಪಿಗೆ ಏಳು ಜೀವಗಳು ಬಲಿಯಾಗಿರುವುದು ನಿಜಕ್ಕೂ ಅತ್ಯಂತ ದುರದೃಷ್ಟಕರ ಮತ್ತು ಆಘಾತಕಾರಿ ಸಂಗತಿ. ಘಟನಾಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಅಲ್ಲದೆ, ಸೂಕ್ತ ಕ್ರಮ ಕೈಗೊಳ್ಳದ, ಸಿದ್ಧತೆ ನಡೆಸದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದು ಬೇಸಿಗೆ ಮಳೆಯ ಆರಂಭಿಕ ಹಂತ. ಮೇ ತಿಂಗಳಲ್ಲಿ ಮಳೆಯ ಅಬ್ಬರ ಹೆಚ್ಚಲಿದೆ. ನಗರದಲ್ಲಿ ಮಳೆಯ ಆರ್ಭಟದ ನಡುವೆ ಇಂತಹ ದುರ್ಘಟನೆಗಳು ಮರುಕಳಿಸದಂತೆ ತಡೆಯಲು ಜಿಬಿಎ ಅಥವಾ ಮಹಾನಗರ ಪಾಲಿಕೆ ಅಧಿಕಾರಿಗಳು ತುರ್ತು ಸಿದ್ಧತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ನಗರದಾದ್ಯಂತ ಇರುವ ಹಳೆಯ ಕಟ್ಟಡಗಳು, ಶಿಥಿಲಗೊಂಡಿರುವ ಕಾಂಪೌಂಡ್​ಗಳು ಮತ್ತು ಅಪಾಯಕಾರಿ ಸ್ಥಿತಿಯಲ್ಲಿರುವ ನಿರ್ವಣಗಳ ಬಗ್ಗೆ ತಕ್ಷಣವೇ ಸಮೀಕ್ಷೆ ನಡೆಸಬೇಕು. ಬೌರಿಂಗ್ ಆಸ್ಪತ್ರೆಯಂತಹ ಹಳೆಯ ಸಾರ್ವಜನಿಕ ಸಂಸ್ಥೆಗಳ ಮೂಲಸೌಕರ್ಯಗಳ ಸದೃಢತೆಯನ್ನು ತಾಂತ್ರಿಕವಾಗಿ ತಪಾಸಣೆ ಮಾಡಬೇಕು. ಅಪಾಯಕಾರಿ ಎನಿಸುವ ಗೋಡೆಗಳ ಬಳಿ ಅಥವಾ ತಗ್ಗು ಪ್ರದೇಶಗಳಲ್ಲಿ ಮಳೆ ಬಂದಾಗ ಜನರು ನಿಲ್ಲದಂತೆ ಮುನ್ನೆಚ್ಚರಿಕೆ ಫಲಕಗಳನ್ನು ಹಾಕಬೇಕು. ಬೌರಿಂಗ್ ಆಸ್ಪತ್ರೆಯ ಘಟನೆಯಲ್ಲಿ ಜನರು ಮಳೆಯಿಂದ ರಕ್ಷಿಸಿಕೊಳ್ಳಲು ಗೋಡೆಯ ಪಕ್ಕ ನಿಂತಿದ್ದಾಗ ಈ ಅವಘಡ ಸಂಭವಿಸಿದೆ. ಹೀಗಾಗಿ, ಜನರಿಗೆ ಇಂತಹ ಅಪಾಯಗಳ ಬಗ್ಗೆ ಅರಿವು ಮೂಡಿಸುವುದು ಮುಖ್ಯ. ಪ್ರತಿ ವಲಯ ಮಟ್ಟದಲ್ಲಿ ಎನ್​ಡಿಆರ್​ಎಫ್ ಮಾದರಿಯ ತುರ್ತು ಸ್ಪಂದನಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸುವುದು ಅವಶ್ಯ.
ಒಂದು ಗಂಟೆ ಸುರಿದ ಮಳೆಗೆ ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಮರಗಳು ಧರೆಗುರುಳಿವೆ. ಹಲವು ಮಳಿಗೆಗಳಿಗೆ ನೀರು ಹೊಕ್ಕಿದೆ. ಹಾಗಾಗಿ, ಮಳೆ ನೀರು ಸರಾಗವಾಗಿ ಹರಿದು ಹೋಗಲು ರಾಜಕಾಲುವೆ ಮತ್ತು ಪಕ್ಕದ ಚರಂಡಿಗಳಲ್ಲಿ ತುಂಬಿರುವ ಕಸ ಹಾಗೂ ಹೂಳನ್ನು ಆದ್ಯತೆಯ ಮೇಲೆ ತೆರವುಗೊಳಿಸಬೇಕು. ಚರಂಡಿ ಕಟ್ಟಿಕೊಂಡಾಗ ನೀರು ಗೋಡೆಗಳ ಬುಡಕ್ಕೆ ನುಗ್ಗಿ ಅವುಗಳ ಅಡಿಪಾಯ ದುರ್ಬಲಗೊಳ್ಳುವ ಸಾಧ್ಯತೆ ಇರುತ್ತದೆ. ನೀರು ಹರಿಯುವ ದಾರಿಯಲ್ಲಿನ ಅಕ್ರಮ ಒತ್ತುವರಿಗಳನ್ನು ಮುಲಾಜಿಲ್ಲದೆ ತೆರವುಗೊಳಿಸಬೇಕು. ಅಧಿಕಾರಿಗಳು ಕೇವಲ ನೆರೆ ಪರಿಹಾರಕ್ಕೆ ಸೀಮಿತವಾಗದೆ, ಮುನ್ನೆಚ್ಚರಿಕೆ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಮೃತರ ಕುಟುಂಬಗಳಿಗೆ ಸರ್ಕಾರ ಈಗಾಗಲೇ ಪರಿಹಾರ ಘೊಷಿಸಿದೆ, ಆದರೆ ಇಂತಹ ಜೀವಹಾನಿಗಳನ್ನು ತಡೆಯುವುದೇ ವ್ಯವಸ್ಥೆಯ ಮೊದಲ ಆದ್ಯತೆಯಾಗಬೇಕು.