ಯಡ್ರಾಮಿ ತಾಲೂಕಿನ ವಸ್ತಾರಿ ಸರ್ಕಾರಿ ಪ್ರೌಢಶಾಲೆಗೆ ಸಂಪರ್ಕ ಕಲ್ಪಿಸುವ ಕೆಸರಿನ ರಸ್ತೆಯಲ್ಲಿ ಮುರುಮ್ ಹಾಕಿ ದುರಸ್ತಿ ಮಾಡುತ್ತಿರುವ ಗ್ರಾಮ ಪಂಚಾಯಿತಿ ಸಿಬ್ಬಂದಿ.
- ವಸ್ತಾರಿ ಸರ್ಕಾರಿ ಸ್ಕೂಲ್ ಮಕ್ಕಳು, ಶಿಕ್ಷಕರು ಖುಷ್
- ಪತ್ರಿಕೆ ಕಾರ್ಯಕ್ಕೆ ಮೆಚ್ಚುಗೆ
ಯಡ್ರಾಮಿ: ವಸ್ತಾರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡಕ್ಕೆ ಸಂಪರ್ಕ ಕಲ್ಪಿಸುವ ಕೆಸರಿನ ರಸ್ತೆಗೆ ಮುಕ್ತಿ ಸಿಕ್ಕಿದ್ದು, ಗ್ರಾಮ ಪಂಚಾಯಿತಿ ತಾತ್ಕಾಲಿಕ ರೋಡ್ ನಿರ್ಮಿಸಿದೆ.
ವಸ್ತಾರಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಾಮದ ಹೊರವಲಯದ ಸರ್ವೇ ನಂ.99ರ ನಾಲ್ಕು ಎಕರೆ ಜಮೀನಿನಲ್ಲಿ ಆರ್ಎಂಎಸ್ಎ ಯೋಜನೆಯಡಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಆದರೆ ಶಾಲೆಗೆ ಸಮರ್ಪಕ ರಸ್ತೆ ನಿರ್ಮಿಸದಿರುವುದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರದಾಡುತ್ತಿದ್ದರು. ಮಳೆಗಾಲದಲ್ಲಿ ರೋಡ್ ಸಂಪೂರ್ಣ ಕೆಸರುಮಯವಾಗಿದ್ದರಿಂದ ಮಕ್ಕಳು ಹಾಗೂ ಟೀಚರ್ಸ್ ಕೈಯಲ್ಲಿ ಪಾದರಕ್ಷೆ ಹಿಡಿದು ಶಾಲೆಗೆ ಬರುವ ಹಾಗೂ ಮನೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿತ್ತು.
ಈ ಕುರಿತು ವಿಜಯವಾಣಿ ದಿನಪತ್ರಿಕೆ ಜು.31ರ ಸಂಚಿಕೆಯಲ್ಲಿ "ಪಾದರಕ್ಷೆ ಹಿಡಿದು ಶಾಲೆಗೆ ಬರ್ಬೇಕು' ಎಂಬ ತಲೆಬರಹದಡಿ ವಿಸತ ವರದಿ ಪ್ರಕಟಿಸಿತ್ತು. ಸುದ್ದಿ ಪ್ರಕಟವಾಗುತ್ತಿದ್ದಂತೆ ಸಚಿವ ಡಾ.ಅಜಯಸಿಂಗ್ ಅವರ ಸೂಚನೆ ಮೇರೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಅವರು ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಮಂಗಳವಾರ ಮುರುಮ್ ಹಾಕಿ ತಾತ್ಕಾಲಿಕ ರಸ್ತೆ ನಿರ್ಮಿಸಿದ್ದಾರೆ.
ಶಾಲೆಗೆ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿದ್ದಕ್ಕೆ ವಸ್ತಾರಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಸಮಸ್ಯೆಗೆ ಧ್ವನಿಯಾದ ವಿಜಯವಾಣಿ ಪತ್ರಿಕೆ ಧನ್ಯವಾದ ಹೇಳಿದ್ದಾರೆ.