ಕುಡಿವ ನೀರು ಸಮರ್ಪಕವಾಗಿ ಪೂರೈಸಲು ಆಗ್ರಹಿಸಿ ಶಿವಪುರ ಗ್ರಾಪಂ ಮುಂದೆ ಹೊಸಶಿವಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಧರ್ಮರಾಜ, ಮಲ್ಲಪ್ಪ, ಗಾಳೆಪ್ಪ, ಸಂತೋಷ, ಕುಳ್ಳೆಪ್ಪ, ದುರುಗಪ್ಪ, ಹನುಮೇಶ, ಬಸವರಾಜ, ಪವನ, ಅಂಜಿನಪ್ಪ, ಮಂಜುನಾಥ ಇತರರಿದ್ದರು.
- ಕುಡಿವ ನೀರಿನ ಪರ್ಯಾಯ ವ್ಯವಸ್ಥೆಗೆ ನಿರ್ಲಕ್ಷೃ
- ಹೊಸ ಶಿವಪುರ ಗ್ರಾಮಸ್ಥರ ಆರೋಪ
ಮುನಿರಾಬಾದ್: ಕುಡಿವ ನೀರಿನ ಸಮಸ್ಯೆಯನ್ನು ಬಗೆಹರಿಸಿ ಸಮರ್ಪಕವಾಗಿ ನೀರು ಪೂರೈಸಲು ಗ್ರಾಪಂ ನಿಲಕ್ಷೃವಹಿಸಿದೆ ಎಂದು ಆರೋಪಿಸಿ ಹೊಸ ಶಿವಪುರ ಗ್ರಾಮಸ್ಥರು ಶಿವಪುರ ಗ್ರಾಪಂ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ಬಹುದಿನಗಳಿಂದ ಕುಡಿವ ನೀರಿನ ಸಮಸ್ಯೆ ತೀವ್ರವಾಗಿದೆ. ಹನಿ ನೀರಿಗೂ ಪರದಾಡುವ ಪರಿಸ್ಥಿತಿಯಿದೆ. ಜನರಲ್ಲದೇ ಜಾನುವಾರುಗಳಿಗೆ ಜಲ ಸಂಕಷ್ಟ ತಟ್ಟಿದೆ. ಅಧಿಕಾರಿಗಳು ಮಾತ್ರ ವಿದ್ಯುತ್ ವ್ಯತ್ಯಯ ಹಾಗೂ ಮೋಟಾರ್ ರಿಪೇರಿಯಂತಹ ಹಾರಿಕೆ ಉತ್ತರಗಳನ್ನು ಹೇಳುತ್ತ ಜಾರಿಕೊಳ್ಳುತ್ತಿದ್ದಾರೆ. ಪರ್ಯಾಯ ವ್ಯವಸ್ಥೆ ಕಲ್ಪಿಸಿ ನೀರು ಪೂರೈಸುವ ಗೋಜಿಗೆ ಸಂಬಂಧಿಸಿದವರು ಹೋಗಿಲ್ಲ ಎಂದು ಗ್ರಾಮಸ್ಥರು ದೂರಿದರು.
ಬೇಸಿಗೆ ಹಂಗಾಮಿನಲ್ಲಿ ಸಾರ್ವಜನಿಕರಿಗೆ ನೀರಿನ ತೊಂದರೆಯಾಗದಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ, ತಾಲೂಕು ಹಾಗೂ ಗ್ರಾಪಂ ಮಟ್ಟದಲ್ಲಿ ‘ಕುಡಿಯುವ ನೀರಿನ ಸಹಾಯವಾಣಿ’ ಆರಂಭಿಸಲಾಗಿದೆ. ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ, ಹೊಸ ಶಿವಪುರದಲ್ಲಿ ಮಾತ್ರ ಸ್ಥಳೀಯ ಆಡಳಿತದ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ.
ಅಧಿಕಾರಿಗಳ ನಿರ್ಲಕ್ಷೃದ ಧೋರಣೆಯಿಂದ ಪ್ರತಿನಿತ್ಯ ನೀರು ತರಲು ಮೈಲುಗಟ್ಟಲೆ ದೂರ ಅಲೆಯಬೇಕಾದ ದುಸ್ಥಿತಿ ಎದುರಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡರು.
ನೀರಿನ ಸಮಸ್ಯೆ ಕುರಿತು ನನ್ನ ಗಮನಕ್ಕಿರಲಿಲ್ಲ. ಗ್ರಾಮಸ್ಥರು ಮನವಿ ಕೊಟ್ಟಿದ್ದು, ಆದಷ್ಟು ಶೀಘ್ರದಲ್ಲೇ ಕುಡಿವ ನೀರಿನ ಸಮಸ್ಯೆ ಬಗೆಹರಿಸುತ್ತೇನೆ.
— ಮರಿಸ್ವಾಮಿ ಪೂಜಾರ್ ಪಿಡಿಒ, ಶಿವಪುರ ಗ್ರಾಪಂ