ದೇವರಹಿಪ್ಪರಗಿ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕಾನಿಪ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ನೋಟ್‌ಬುಕ್ ವಿತರಣಾ ಕಾರ್ಯಕ್ರಮ ಜರುಗಿತು. ಅಶೋಕ ಯಡಳ್ಳಿ, ಶಶಿಕಾಂತ ಮೆಂಡೆಗಾರ, ಸಂಗಮೇಶ ಉತ್ನಾಳ ಮತ್ತಿತರರಿದ್ದರು. 
ರಾಜ್ಯ

ಜನರ ಸಮಸ್ಯೆಗೆ ಪರಿಹಾರ ಕಲ್ಪಿಸುವಲ್ಲಿ ಪಾತ್ರ ಮಹತ್ವ

ಮಾರುತಿ ತಳ್ಳಳ್ಳಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಹೇಳಿಕೆ
  • ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

ದೇವರಹಿಪ್ಪರಗಿ :

ಮಾಧ್ಯಮ, ಸಮಾಜದ ನ್ಯೂನತೆ ತಿದ್ದುವ ಪ್ರಬಲ ಅಸ್ತ್ರವಾಗಿದ್ದು, ಜನರ ಸಮಸ್ಯೆಗಳನ್ನು ಆಡಳಿತದ ಪಕ್ಷದ ಗಮನಕ್ಕೆ ತಂದು ಪರಿಹಾರ ಕಲ್ಪಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗಬೇಕು. ಪತ್ರಿಕಾರಂಗದ ದಿಗ್ಗಜ ಮೊಹರೆ ಹನುಮಂತರಾಯರ ನಾಡಿನಲ್ಲಿ ಎಲ್ಲಾ ಪತ್ರಕರ್ತರು ಒಳ್ಳೆಯ ಕೆಲಸ ಮಾಡುವ ಜತೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡುವ ಮೂಲಕ ಪತ್ರಿಕಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ತಾಲೂಕಿನಲ್ಲಿ ಪತ್ರಕರ್ತರಿಗಾಗಿ ಪತ್ರಿಕೆ ಭವನ ನಿರ್ಮಾಣ ಮಾಡಲು ತಾಲೂಕು ಆಡಳಿತ ನಿವೇಶನ ಒದಗಿಸಬೇಕೆಂದು ಮನವಿ ಮಾಡಿದರು.
ತಹಸೀಲ್ದಾರ್ ನಿಂಗಣ್ಣ ಬಿರಾದಾರ ಮಾತನಾಡಿ, ಪತ್ರಿಕೋದ್ಯಮವು ಸಮಾಜದ ಅಭಿವೃದ್ಧಿಗೆ ಪೂರಕವಾದ ಶಕ್ತಿಯಾಗಿದೆ. ನಿಷ್ಪಕ್ಷಪಾತ ಹಾಗೂ ಜವಾಬ್ದಾರಿಯುತ ವರದಿಗಾರಿಕೆ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲ ಪಡಿಸುತ್ತದೆ. ಅಭಿವೃದ್ಧಿ ಪರ ಮತ್ತು ಜನಪರವಾದ ವರದಿಗಳಿಗೆ ಪತ್ರಕರ್ತರು ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಜಡಿಮಠದ ಜಡಿ ಸಿದ್ಧೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ಪತ್ರಕರ್ತರು ಸಮಾಜದ ಬಗ್ಗೆ ಪ್ರಾಮಾಣಿಕ ಕಳಕಳಿ ಹೊಂದಿ, ಜನಪರ ಧೋರಣೆಯಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ಪತ್ರಿಕೋದ್ಯಮಕ್ಕೆ ನಿಜವಾದ ಗೌರವ ದೊರೆಯುತ್ತದೆ ಎಂದರು.
ಕಾನಿಪ ತಾಲೂಕು ಅಧ್ಯಕ್ಷ ಸಂಗಮೇಶ ಉತ್ನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ಮೆಂಡೆಗಾರ, ತಾ.ಪಂ ಇಒ ಭಾರತಿ ಚೆಲುವಯ್ಯ, ಪ.ಪಂ. ಮುಖ್ಯಾಕಾರಿ ಅಪ್ರೋಜ ಅಹ್ಮದ ಪಟೇಲ, ಪಿಎಸ್‌ಐ ಸಚಿನ್ ಆಲಮೇಲಕರ, ಕಾನಿಪ ಸಂಘದ ಪದಾಧಿಕಾರಿಗಳಾದ ಶಿವಾನಂದ ಕುಂಬಾರ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಮಂಜುನಾಥ ಬ್ಯಾಕೋಡ, ಹುಸೇನ ಕೊಕಟನೂರ, ಮಳೆಪಗೌಡ ಬಿರಾದಾರ, ಶ್ರೀಧರ ನಾಡಗೌಡ, ಈರನಗೌಡ ಪಾಟೀಲ, ಭೀಮಣ್ಣ ದಿಡ್ಡಿಮನಿ, ಪ್ರವೀಣ ಕುಲಕರ್ಣಿ, ಹಸನ್ ನದಾ, ಅಶೋಕ ಗೊಲ್ಲರ, ಶಂಕರಲಿಂಗ ಬಿರಾದಾರ, ನಬಿರಸೂಲ ಗುಡ್ನಾಳ, ಸೋಮನಾಥ ನಡಗೇರಿ, ಮಲ್ಲಿಕಾರ್ಜುನ ಕಬ್ಬಿನ, ಅಣ್ಣಸಾಹೇಬ ಹೂಗಾರ, ಅಹಮದ್‌ಅಲಿ ಮುಲ್ಲಾ, ಯಲ್ಲಾಲಿಂಗ ಉಮರಾಣಿ ಮತ್ತಿತರರಿದ್ದರು.