ಕನಕಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಹಾಗೂ ವಚನಕಾರ ನುಲಿಯ ಚಂದಯ್ಯನವರ ಜಯಂತಿಯಲ್ಲಿ ಶಿವನಹಳ್ಳಿ ಶಿವಲಿಂಗಯ್ಯ, ಜಯಶ್ರೀ, ಕೂಗಿ ಗಿರಿಯಪ್ಪ, ಮಂಜುನಾಥ್ ಇದ್ದರು.
ಸಂತ ಹಾಗೂ ಸಮಾಜ ಸುಧಾರಕ ಶ್ರೀ ನಾರಾಯಣಗುರು ಹಾಗೂ ಕಾಯಕಯೋಗಿ ಶರಣ ನುಲಿಯ ಚಂದಯ್ಯನವರು ಸಮಾಜ ಸುಧಾರಣೆಗೆ ಶ್ರಮಿಸಿದ ಶರಣರಾಗಿದ್ದಾರೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ನಾರಾಯಣಗುರು ಹಾಗೂ ನುಲಿಯ ಚಂದಯ್ಯ ಅವರ ಜಯಂತಿ ಆಚರಣೆಯಲ್ಲಿ ಮಾತನಾಡಿ, ಶ್ರೇಷ್ಠ ವಚನಕಾರರು. ತಮ್ಮ ವಚನಗಳ ಮೂಲಕ ಕಾಯಕದ ಮಹತ್ವ ಸಾರಿದ್ದಾರೆ.
ನಾರಾಯಣಗುರು ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ಮಾನವ ಕುಲಕ್ಕೆ ಸಂದೇಶ ಸಾರಿದ್ದಾರೆ. ಅದೇ ರೀತಿ ಕಾಯಕ ಯೋಗಿ ಶರಣ ನುಲಿಯ ಚಂದಯ್ಯನವರು ಒಂದೇ ದೇಶ, ಒಂದೇ ಸಂವಿಧಾನದೆಂಬ ಮಂತ್ರದಡಿ 12ನೇ ಶತಮಾನದಲ್ಲಿಯೇ ಬಸವಾದಿ ಶರಣರನ್ನು ನೆನೆದು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದವರು ಎಂದರು.
ಗ್ರೇಡ್-2 ತಹಸೀಲ್ದಾರ್ ಜಯಶ್ರೀ, ಸಾಹಿತಿ ಕೂ.ಗಿ.ಗಿರಿಯಪ್ಪ, ಬಿಜೆಪಿ ಮುಖಂಡ ಕೋಟೆ ಮಂಜುನಾಥ್ ಇದ್ದರು.