ಹುನಗುಂದ ಪಟ್ಟಣದ ವಿ.ಎಂ.ಎಸ್.ಆರ್. ವಸ್ತ್ರದ ಮಹಾವಿದ್ಯಾಲಯದ ಕ್ರೀಡಾ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಡಾ. ಮಹಾಂತೇಶ ಕಡಪಟ್ಟಿ ಮಾತನಾಡಿದರು. ಪ್ರಾಚಾರ್ಯ ಡಾ. ಎಸ್.ಆರ್. ಗೋಲಗೊಂಡ, ಎಸ್.ಬಿ. ಚಳಗೇರಿ, ಡಾ. ಎಸ್.ಆರ್. ನಾಗಣ್ಣನವರ, ವಿಜಯ ದಳವಾಯಿ, ಶರಣಪ್ಪ ಹಳ್ಳೂರ, ಎಲ್.ಎನ್. ಕುಲಕರ್ಣಿ, ಡಾ.ತಿಪ್ಪೇಸ್ವಾಮಿ ಡಿ.ಎಸ್. ಇತರರಿದ್ದರು. 
ರಾಜ್ಯ

ಹಾಕಿ ಮಾಂತ್ರಿಕ ಯುವಕರಿಗೆ ಆದರ್ಶ

ಪ್ರಮುಖ ಮುಖ್ಯಾಂಶಗಳು

  • ಡಾ. ಮಹಾಂತೇಶ ಕಡಪಟ್ಟಿ ಹೇಳಿಕೆ
  • ರಾಷ್ಟ್ರೀಯ ಕ್ರೀಡಾ ದಿನ ಆಚರಣೆ

ಹುನಗುಂದ: ಕ್ರೀಡೆ ದೇಹವನ್ನು ಸದೃಢಗೊಳಿಸುವುದರ ಜೊತೆಗೆ ಮನಸ್ಸಿನಲ್ಲಿ ಆತ್ಮವಿಶ್ವಾಸ, ನಾಯಕತ್ವ, ಸಹಕಾರ, ಸಮಯ ಪಾಲನೆ ಮತ್ತು ಸೋಲನ್ನು ಸ್ವೀಕರಿಸಿ ಮತ್ತೆ ಗೆಲುವಿನತ್ತ ಸಾಗುವ ಮನೋಭಾವವನ್ನು ಬೆಳೆಸುತ್ತದೆ ಎಂದು ವಿ.ಮ.ವಿ.ವ. ಸಂಘದ ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ ಹೇಳಿದರು.

ಪಟ್ಟಣದ ವಿ.ಎಂ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದ ಕ್ರೀಡಾ ವಿಭಾಗ, ಎನ್‌ಎಸ್‌ಎಸ್. ಹಾಗೂ ಎನ್‌ಸಿಸಿ ಘಟಕಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೇಜರ್ ಧ್ಯಾನ್ ಚಂದ್ ಅವರು ಒಲಿಂಪಿಕ್ಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಮೂರು ಚಿನ್ನದ ಪದಕಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಸಾಧನೆ ಕೇವಲ ಹಾಕಿ ಕ್ಷೇತ್ರಕ್ಕೆ ಸೀಮಿತವಾಗಿರದೆ, ದೇಶದ ಯುವಜನತೆಗೆ ಪ್ರತಿಭೆಯೊಂದಿಗೆ ಪರಿಶ್ರಮ ಮತ್ತು ಶಿಸ್ತು ಸೇರಿದಾಗ ಯಶಸ್ಸು ಸಾಧ್ಯ ಎಂದರು.
ಲೆಪ್ಟಿನೆಂಟ್ ಎಸ್.ಬಿ. ಚಳಗೇರಿ ಮಾತನಾಡಿ, ಇಂದಿನ ಯುವಜನತೆ ಮೊಬೈಲ್ ಮತ್ತು ಡಿಜಿಟಲ್ ಜಗತ್ತಿನಲ್ಲಿ ಹೆಚ್ಚು ಸಮಯ ಕಳೆಯುತ್ತಿರುವ ಸಂದರ್ಭದಲ್ಲಿ, ಧ್ಯಾನ್ ಚಂದ್ ಅವರಂತಹ ಕ್ರೀಡಾಪಟುಗಳ ಜೀವನ ಮತ್ತು ಸಾಧನೆಗಳು ನಮಗೆ ಕ್ರೀಡೆಯ ಮಹತ್ವವನ್ನು ನೆನಪಿಸುತ್ತವೆ. ಕ್ರೀಡೆ ಕೇವಲ ಪದಕಕ್ಕಾಗಿ ಅಲ್ಲ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಎಂಬ ಸಂದೇಶವನ್ನು ನಾವು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.
ಪ್ರಾಚಾರ್ಯ ಡಾ. ಎಸ್.ಆರ್. ಗೋಲಗೊಂಡ ಮಾತನಾಡಿ, ಯುವಕರು ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತರಾಗಿ ಸದೃಢ ರಾಷ್ಟ್ರ ಕಟ್ಟುವ ಜವಾಬ್ದಾರಿಯನ್ನು ಹೊರುವಂತವರಾಗಬೇಕು ಎಂದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಾಲಪ್ಪ ಕಿರಸೂರ, ಮಾಜಿ ಯೋಧ ವಿಜಯ ದಳವಾಯಿ, ಶರಣಪ್ಪ ಹಳ್ಳೂರ, ಎಲ್.ಎನ್. ಕುಲಕರ್ಣಿ, ಡಾ.ತಿಪ್ಪೇಸ್ವಾಮಿ ಡಿ.ಎಸ್., ಲೆಪ್ಟಿನೆಂಟ್ ವಿ.ಪಿ. ರಾಯರ, ಡಾ. ಎಸ್.ಆರ್. ನಾಗಣ್ಣವರ ಉಪಸ್ಥಿತರಿದ್ದರು.
ವಿದ್ಯಾರ್ಥಿ ಮಾರುತಿ ಪ್ರಾರ್ಥಿಸಿ, ಡಾ. ಸಂತೋಷ ನಾಯಿಕ ನಿರೂಪಿಸಿ, ವಾಹಿದ್ ಕಡಿವಾಲ ವಂದಿಸಿದರು.