Tumakuru Jewelry Theft | ತುಮಕೂರಿನ ಜ್ಯುವೆಲರಿಯಲ್ಲಿನ ಚಿನ್ನ, ವಜ್ರ ಎಗರಿಸಿದ ಇಲಿರಾಯ... ಪೊಲೀಸರನ್ನೇ ಬೆರಗುಗೊಳಿಸಿತು ಆ ಸಿಸಿಟಿವಿ ದೃಶ್ಯ!
ತುಮಕೂರು: ನಗರದ ವಿಶ್ವಾಸ್ ಜ್ಯುವೆಲರಿ ಶಾಪ್‌ನಲ್ಲಿ ಸುಮಾರು 50 ಗ್ರಾಂಗೂ ಅಧಿಕ ತೂಕದ ವಜ್ರ ಮತ್ತು ಚಿನ್ನಾಭರಣಗಳು ದಿಢೀರ್ ನಾಪತ್ತೆಯಾಗಿದ್ದ (Tumakuru Jewelry Theft) ಪ್ರಕರಣಕ್ಕೆ ಕೊನೆಗೂ ರೋಚಕ ಟ್ವಿಸ್ಟ್ ಸಿಕ್ಕಿದೆ. ಆಭರಣಗಳು ಕಳುವಾಗಿವೆ ಎಂದು ಭಾವಿಸಿ ಆತಂಕಗೊಂಡಿದ್ದ ಅಂಗಡಿ ಮಾಲೀಕರು ಹಾಗೂ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದಾಗ, ಈ ಕೃತ್ಯದ ಹಿಂದಿದ್ದ ಅಸಲಿ ಕಳ್ಳ ಯಾರೆಂಬ ಸತ್ಯ ಬಯಲಾಗಿದೆ.
ಜ್ಯುವೆಲರಿ ಶಾಪ್‌ನಲ್ಲಿದ್ದ 10 ಉಂಗುರಗಳು, 3 ಚಿನ್ನದ ಸರಗಳು ಹಾಗೂ 10 ಲಕ್ಷ ರೂಪಾಯಿ ಮೌಲ್ಯದ ವಜ್ರಾಭರಣ ನಾಪತ್ತೆಯಾಗಿದ್ದವು. ಸಿಬ್ಬಂದಿ ಎಷ್ಟೇ ಹುಡುಕಾಡಿದರೂ ಆಭರಣಗಳು ಸಿಗದಿದ್ದಾಗ, ಕಳುವಾಗಿರಬಹುದು ಎಂಬ ಸಂಶಯದಿಂದ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರು ಸ್ವೀಕರಿಸಿದ ಪೊಲೀಸರು ಅಂಗಡಿಯಲ್ಲಿದ್ದ ಸಿಸಿಟಿವಿ ಫೂಟೇಜ್‌ಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಕಳ್ಳತನದ ರಹಸ್ಯ ಹೊರಬಿದ್ದಿದೆ.
ರಾತ್ರಿ ಸಮಯದಲ್ಲಿ ಇಲಿಯೊಂದು ಅಂಗಡಿಯ ಪ್ರದರ್ಶನದಲ್ಲಿದ್ದ ಬೆಲೆಬಾಳುವ ವಜ್ರ ಮತ್ತು ಚಿನ್ನಾಭರಣಗಳನ್ನು ಒಂದೊಂದಾಗಿ ತನ್ನ ಬಾಯಲ್ಲಿ ಕಚಿಕ್ಕೊಂಡು ಹೋಗಿ ತಾನು ತೋಡಿದ್ದ ಬಿಲದೊಳಗೆ ಇಡುತ್ತಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದವು. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಜ್ಯುವೆಲರಿ ಶಾಪ್‌ನ ಸಿಬ್ಬಂದಿ ಇಲಿಯ ಜಾಡು ಹಿಡಿದು ಪರಿಶೀಲಿಸಿದಾಗ, ಬಿಲದೊಳಗೆ ಅಡಗಿಸಿಟ್ಟಿದ್ದ 50 ಗ್ರಾಂಗೂ ಅಧಿಕ ತೂಕದ ಎಲ್ಲಾ ವಜ್ರಾಭರಣಗಳು ಸುರಕ್ಷಿತವಾಗಿ ಪತ್ತೆಯಾಗಿವೆ. ಮನುಷ್ಯರು ಮಾಡಿರಬಹುದಾದ ಕಳ್ಳತನವೆಂದು ಭಾವಿಸಿದ್ದ ಪ್ರಕರಣದಲ್ಲಿ ಇಲಿಯ ಕೃತ್ಯ ಬಯಲಾಗಿರುವುದು ಅಂಗಡಿ ಮಾಲೀಕರು ಹಾಗೂ ಪೊಲೀಸರಲ್ಲಿ ಆಶ್ಚರ್ಯ ಮೂಡಿಸಿದೆ.