ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ಫಾಸ್ಟ್ ಮೀಟಿಂಗ್: ಸಿಎಂ ಸಿದ್ದರಾಮಯ್ಯ ಕಾಲಿಗೆ ಬಿದ್ದ ಡಿಸಿಎಂ ಡಿಕೆಶಿ! DK Shivakumar
- ಸಿಎಂ ಸಿದ್ದರಾಮಯ್ಯ ಆಯೋಜನೆ ಮಾಡಿರುವ ಬ್ರೇಕ್ಫಾಸ್ಟ್ ಮೀಟಿಂಗ್ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ
- ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು
- ಉಭಯ ನಾಯಕರು ಪರಸ್ಪರ ಅಪ್ಪಿಕೊಂಡು ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ ಎಂಬ ಸಂದೇಶ ಸಾರಿದ್ದಾರೆ
- ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಕಾಲಿಗೆ ಬಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗುತ್ತಿವೆ
D K Shivakumar: ರಾಜ್ಯ ರಾಜಕಾರಣದಲ್ಲಿ ಹಠಾತ್ ತಲ್ಲಣ ಸೃಷ್ಟಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಲಿದ್ದಾರೆ ಎಂಬ ಸುಳಿವು ಸಿಗುತ್ತಿದ್ದಂತೆ ಮುಖ್ಯಮಂತ್ರಿ ಬದಲಾವಣೆಯ ವದಂತಿಗಳು ದಟ್ಟವಾಗಿವೆ. ದೆಹಲಿಯಲ್ಲಿ ಹೈಕಮಾಂಡ್ ಜೊತೆ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆಸಿದ ದಿಢೀರ್ ಮಾತುಕತೆಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಒಪ್ಪಂದದ ಪ್ರಕಾರ ಅರ್ಧ ಅವಧಿ ಮುಗಿದ ಹಿನ್ನೆಲೆ ಸಿದ್ದರಾಮಯ್ಯ ಅವರು ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಡಿಕೆಶಿ ಬೆಂಬಲಿಗರು ಈಗಾಗಲೇ ಸಂಭ್ರಮಾಚರಣೆ ಆರಂಭಿಸಿದ್ದರೆ, ಇತ್ತ ಸಿದ್ದರಾಮಯ್ಯ ಆಪ್ತ ವಲಯ ಹಾಗೂ ಹಿಂದುಳಿದ ವರ್ಗಗಳ ನಾಯಕರು ನಾಯಕತ್ವ ಬದಲಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದು ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇದೆಲ್ಲದರ ನಡುವೆ ಇಂದು ಸಿಎಂ ಸಿದ್ದರಾಮಯ್ಯ ತಮ್ಮ ಕಾವೇರಿ ನಿವಾಸದಲ್ಲಿ ಬ್ರೇಕ್ಫಾಸ್ಟ್ ಮೀಟಿಂಗ್ ಏರ್ಪಡಿಸಿದ್ದು, ಡಿಸಿಎಂ ಡಿಕೆಶಿ ಸೇರಿದಂತೆ ಸಚಿವರ ದಂಡ ಆಗಮಿಸುತ್ತಿದೆ.
ವಿಶೇಷ ಕ್ಷಣವೊಂದಕ್ಕೆ ಸಾಕ್ಷಿ
ಸಿಎಂ ಸಿದ್ದರಾಮಯ್ಯ ಆಯೋಜನೆ ಮಾಡಿರುವ ಬ್ರೇಕ್ಫಾಸ್ಟ್ ಮೀಟಿಂಗ್ಗೂ ಮುನ್ನ ವಿಷೇಶ ಕ್ಷಣವೊಂದು ಜರುಗಿತು. ಅದೇನೆಂದರೆ, ಕಾವೇರಿ ನಿವಾಸಕ್ಕೆ ಆಗಮಿಸಿದ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಬಳಿಕ ಪರಸ್ಪರ ಅಪ್ಪಿಕೊಂಡು ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ ಎಂಬ ಸಂದೇಶವನ್ನು ಸಿದ್ದು ಮತ್ತು ಡಿಕೆಶಿ ರವಾನಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಪ್ರತ್ಯೇಕ ಸಭೆ
ಬ್ರೇಕ್ಫಾಸ್ಟ್ ಮೀಟಿಂಗ್ಗೂ ಮುನ್ನ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಪ್ರತ್ಯೇಕ ಸಭೆ ನಡೆಸಿದರು. ಸುಮಾರು ಅರ್ಧ ಗಂಟೆಯ ಕಾಲ ಉಭಯ ನಾಯಕ ಸಭೆಯಲ್ಲಿ ಚರ್ಚಿಸಿದರು. ಯಾವ ವಿಚಾರವನ್ನು ಮಾತನಾಡಿದ್ದಾರೆ ಎಂಬುದು ಸದ್ಯಕ್ಕೆ ನಿಗೂಢವಾಗಿದೆ. ಆದರೆ, ಇಬ್ಬರು ಜೋಡೆತ್ತುಗಳಂತೆ ಒಟ್ಟಿಗೆ ಇರುವುದು ರಾಜ್ಯದ ಜನತೆಗೆ ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ ಎಂಬ ಸಂದೇಶ ರವಾನೆ ಆದಂತಿದೆ.
ಸಚಿವರ ಆಗಮನ
ಇನ್ನು ಬ್ರೇಕ್ ಫಾಸ್ಟ್ ಸಲುವಾಗಿ ಸಿಎಂ ಕಾವೇರಿ ನಿವಾಸಕ್ಕೆ ಡಿಸಿಎಂ ಸೇರಿದಂತೆ ಸಚಿವರ ದಂಡೇ ಆಗಮಿಸಿದೆ. ಎಂ.ಬಿ. ಪಾಟೀಲ್, ಸಂತೋಷ್ ಲಾಡ್, ಎಚ್. ಸಿ.ಮಹದೇವಪ್ಪ, ಕೆ.ಎಚ್. ಮುನಿಯಪ್ಪ, ಬೈರತಿ ಸುರೇಶ್, ಶಿವಾನಂದ ಪಾಟೀಲ್, ರಾಮಲಿಂಗಾ ರೆಡ್ಡಿ, ರಾಯರಡ್ಡಿ, ಅಶೋಕ್ ಪಟ್ಟಣ್ ಹಾಗೂ ಪುಟ್ಟರಂಗ ಶೆಟ್ಟಿ ಉಪಾಹಾರ ಕೂಟದಲ್ಲಿ ಭಾಗಿಯಾಗಿದ್ದಾರೆ.
ಇಂದು ರಾಜೀನಾಮೆ ಅನುಮಾನ!
ರಾಜ್ಯಪಾಲರ ಈ ದಿಢೀರ್ ಪ್ರವಾಸದಿಂದಾಗಿ ಸಿಎಂ ರಾಜೀನಾಮೆ ಸಲ್ಲಿಕೆ ಪ್ರಕ್ರಿಯೆ ತಡವಾಗುವ ಸಾಧ್ಯತೆ ದಟ್ಟವಾಗಿದೆ. ಸದ್ಯದ ಮಾಹಿತಿ ಪ್ರಕಾರ, ರಾಜ್ಯಪಾಲರು ಬೆಂಗಳೂರಿಗೆ ವಾಪಸ್ ಬರುವ ಅಧಿಕೃತ ವೇಳಾಪಟ್ಟಿ ಇನ್ನೂ ಖಚಿತವಾಗಿಲ್ಲ. ಅವರು ಇಂದು ಸಂಜೆಯ ವೇಳೆಗೆ ರಾಜಧಾನಿಗೆ ಮರಳುವ ನಿರೀಕ್ಷೆಯಿದೆಯಾದರೂ, ನಿಖರ ಸಮಯ ನಿಗದಿಯಾಗಿಲ್ಲ. ನಿಯಮಗಳ ಪ್ರಕಾರ ಮುಖ್ಯಮಂತ್ರಿಗಳು ರಾಜ್ಯಪಾಲರನ್ನು ಖುದ್ದಾಗಿ ಭೇಟಿಯಾಗಿಯೇ ರಾಜೀನಾಮೆ ಪತ್ರ ಸಲ್ಲಿಸಬೇಕಾಗುತ್ತದೆ. ಹೀಗಾಗಿ ರಾಜ್ಯಪಾಲರು ಬೆಂಗಳೂರಿಗೆ ಬಂದರಷ್ಟೇ ಇಂದು ರಾಜೀನಾಮೆ ಪ್ರಕ್ರಿಯೆ ನಡೆಯಲಿದೆ, ಇಲ್ಲದಿದ್ದರೆ ಈ ಸಮಯ ಮತ್ತಷ್ಟು ಮುಂದಕ್ಕೆ ಹೋಗುವ ಲಕ್ಷಣಗಳು ಕಾಣಿಸುತ್ತಿವೆ.