ಉಡುಪಿ: ಉಡುಪಿಯ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದಲ್ಲಿ ಸಿಹಿನೀರಿನ ಏಡಿ ಹೊಸ ಪ್ರಭೇದವೊಂದು ಪತ್ತೆಯಾಗಿದೆ. ಇದು ಕೊಲ್ಲೂರು ಸಮೀಪದ ಮಾವಿನಕಾರು ಪ್ರದೇಶದಲ್ಲಿ ಕಂಡುಬಂದಿದ್ದು, ಈ ನೂತನ ಪ್ರಭೇದಕ್ಕೆ ಘಾಟಿಯಾನ ಕರ್ನಾಟಕ ಎಸ್.ಪಿ.ನವ್ (Ghatiana Karnataka) ಎಂದು ನಾಮಕರಣ ಮಾಡಲಾಗಿದೆ.
ಈ ಸಿಹಿನೀರಿನ ಏಡಿ ಪ್ರಭೇದವನ್ನು ಗಸ್ತು ಅರಣ್ಯ ಪಾಲಕ ಅಜ್ಮೀರ್. ಕೆ ಎನ್ನುವವರು ಪತ್ತೆ ಹಚ್ಚಿದ್ದಾರೆಂದು ತಿಳಿದು ಬಂದಿದೆ. ಈ ಹೊಸ ಪ್ರಭೇದ ಪಶ್ಚಿಮ ಘಟ್ಟದಲ್ಲಿರುವ ವೈಶಿಷ್ಟ ಹಾಗೂ ಸ್ಥಳೀಯ ಸಿಹಿನೀರಿನ ಏಡಿ ವೈವಿಧ್ಯಕ್ಕೆ ನೂತನ ಸೇರ್ಪಡೆಯಾಗಿದೆ.
ಘಾಟಿಯಾನ ಕುಲದಲ್ಲಿ ಈವರೆಗೆ 14 ಪ್ರಭೇದಗಳನ್ನು ಗುರುತಿಲ್ಪಟ್ಟಿದ್ದು, ಕರ್ನಾಟಕದಲ್ಲಿ ಈ ಪ್ರಭೇದದ ಸಂಖ್ಯೆ 8 ಕ್ಕೆ ತಲುಪಿದೆ. ಈ ಮೂಲಕ ವಿಶಿಷ್ಟ ಜೀವಿಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಮತ್ತೊಮ್ಮೆ ಸಾಬೀತಾಗಿದೆ.
ಏನಿದು ಘಾಟಿಯಾನಾ ಕರ್ನಾಟಕ?
ಘಾಟಿಯಾನಾ ಕರ್ನಾಟಕ ಎಂದು ಗುರುತಿಸಿರುವ ಈ ಏಡಿ ಪ್ರಭೇದವು ಕೊಲ್ಲೂರು ವನ್ಯಜೀವಿ ವಲಯದ ಮೇಗಿನಿ ವ್ಯಾಲಿ, ಮಾದಿಬರೆ, ಮುರ್ಕೊಡಿಹೊಲ, ಗುಂಡು ಬೇರು, ಕೊರತಿಕಲ್ ಬರೆ, ಕೊರಕೊಪ್ಪದ ಹೊಲ, ಜನ್ನಲಾಣೆ, ಅಬ್ಬಿಗುಡ್ಡೆ ಹಾಗೂ ಚಿತ್ತೂರು ಸುತ್ತಮುತ್ತಲಿನ 35 ಕಿ.ಮೀ ವ್ಯಾಪ್ತಿಯಲ್ಲಿ ಗುರುತಿಸಲಾಗಿದೆ. ಇವು ಸಮುದ್ರಮಟ್ಟದಿಂದ ಸುಮಾರು 60 ರಿಂದ 250 ಮೀಟರ್ ಎತ್ತರದ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಏಡಿ ಗಾತ್ರ ಮತ್ತು ಆಕಾರ
ಹೋಲೋಟೈಪ್ ಗಂಡು ಏಡಿಯ ಕ್ಯಾರಪೇಸ್ (ಕವಚ) ಅಗಲ ಸರಿಸುಮಾರು 21.3 ಮಿಮೀ ಆಗಿರುತ್ತದೆ. ಅದರ ಉದ್ದ 13.8 ಮಿಮೀ ಆಗಿದೆ. ಕವಚದ ಉದ್ದ ಮತ್ತು ಅಗಲದ ಅನುಪಾತ ಸುಮಾರು 1.54 ಆಗಿದೆ. ಪ್ಯಾರಾಟೈಪ್ ಹೆಣ್ಣು ಏಡಿಯ ಕ್ಯಾರಪೇಸ್‌ನ ಅಗಲ 24.4 ಮಿಮೀ ಹಾಗೂ ಉದ್ದ 15.4 ಮಿಮೀ ಆಗಿದ್ದು, ಕವಚದ ಉದ್ದ ಮತ್ತು ಅಗಲದ ಅನುಪಾತ ಸುಮಾರು 1.58 ಆಗಿದೆ.
ಗಂಡು ಏಡಿ, ಗಾಢ ನೇರಳೆ ಬಣ್ಣ ಮತ್ತು ಮುಂಭಾಗ ‘ವಿ’ ಆಕಾರದ ತಿಳಿ ಗುಲಾಬಿ ಬಣ್ಣದಿಂದ ಕೂಡಿರುತ್ತದೆ. ಹೆಣ್ಣು ಏಡಿ ಬೂದು, ನೇರಳೆ ಹಾಗೂ ಗಾಢ ಬೂದು, ಕಂದು ಬಣ್ಣಗಳ ಮಿಶ್ರಣದಿಂದ ಕೂಡಿರುತ್ತದೆ. ಇವು ಮಳೆಗಾಲದಲ್ಲಿ ಸಂತಾನೋತ್ಫತ್ತಿ ನಡೆಸುತ್ತವೆ ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ, (ಏಜನ್ಸೀಸ್).