ಸಿಂದಗಿ ನಗರದಲ್ಲಿ ಡಾ.ಚನ್ನಪ್ಪ ಕಟ್ಟಿ ಅವರ ಅಭಿನಂದನ ಸಮಾರಂಭದಲ್ಲಿ ಡಾ.ಕಟ್ಟಿ ಸಾಹಿತ್ಯ ಮುಖಾಮುಖಿ ವಿಚಾರ ಸಂಕೀರ್ಣದಲ್ಲಿ ಡಾ. ಬಾಳಾಸಾಹೇಬ ಲೋಕಾಪೂರ ಮಾತನಾಡಿದರು. ಹ.ಮ. ಪೂಜಾರ, ಎ.ಆರ್. ಲಲಿತಾಂಬಾ, ಡಾ.ಎ್.ಟಿ.ಹಳ್ಳಿಕೇರಿ ಮತ್ತಿತರರಿದ್ದರು. 
ರಾಜ್ಯ

ಚನ್ನಪ್ಪ ಕಟ್ಟಿಯ ಶುದ್ಧ ದೇಸಿ ಕಥನ

ಪ್ರಮುಖ ಮುಖ್ಯಾಂಶಗಳು

  • ಡಾ. ಬಾಳಾಸಾಹೇಬ ಲೋಕಾಪೂರ ಅಭಿಪ್ರಾಯ
  • ಅಭಿನಂದನ ಗ್ರಂಥ ಬಿಡುಗಡೆ
ಸಿಂದಗಿ: ಸೃಜನಶೀಲ ಪ್ರಕಾರಗಳಿಗೆ ಒಗ್ಗಿಕೊಂಡಿ ರುವ ಅಪೂರ್ವ ಕತೆಗಾರ ಡಾ. ಚನ್ನಪ್ಪ ಕಟ್ಟಿ ಅವರ ನೈಜ ಕಥನದ ಶಕ್ತಿ ಶುದ್ಧ ದೇಸಿ ನೆಲೆಯನ್ನು ಬೆಸೆದುಕೊಂಡಿದೆ ಎಂದು ಅಥಣಿಯ ಕತೆ, ಕಾದಂಬರಿಕಾರ ಡಾ. ಬಾಳಾಸಾಹೇಬ ಲೋಕಾಪೂರ ಹೇಳಿದರು.
ನಗರದ ಮಾಂಗಲ್ಯ ಭವನದಲ್ಲಿ ಶುಕ್ರವಾರ ನಡೆದ ಡಾ. ಚನ್ನಪ್ಪ ಕಟ್ಟಿ ಅವರ ಅಭಿನಂದನ ನೆಲೆ ಗ್ರಂಥ ಬಿಡುಗಡೆ, ಸಾಹಿತ್ಯ ಮುಖಾಮುಖಿ ವಿಚಾರ ಸಂಕೀರ್ಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಡಾ. ಕಟ್ಟಿ ಅವರಿಗೆ ಎರಡು ಬಗೆಯ ಕಥನ ಶಕ್ತಿ ದೊರಕಿದೆ. ಒಂದು ದತ್ತವಾಗಿ ಇನ್ನೊಂದು ಅವರ ಸ್ವಂತಿಕೆಯ ಶಕ್ತಿ. ಇವುಗಳ ಕೂಡಿಕೆಯಿಂದ ಅವರು ಅನನ್ಯ ಕತೆಗಾರರಾಗಿದ್ದಾರೆ ಎಂದರು.
ಚರಗದಿಂದ ಆರಂಭವಾದ ಅವರ ಕತೆಯ ದಾರಿ ಅಪೂರ್ವವಾದದ್ದು. ಅವರ ಆಯ್ಕೆಯ ಕತೆ, ಕಾವ್ಯ, ಸಂಶೋಧನೆಗಳೆಲ್ಲದರಲ್ಲೂ ಅವರಿಗೆ ದಕ್ಕಿದ ಶಕ್ತಿಯನ್ನು ಕ್ರಿಯಾಶೀಲಗೊಳಿಸಿ, ಹದವಾಗಿಸಿ, ನಿಶ್ಚಿತವಾದ ನೋಟಗಳಿಂದ ಸೃಷ್ಟಿಸಿದ್ದಾರೆ. ಅವರ ಬರಹ ಅಕ್ಷರಗಳಲ್ಲಿ ಕಟ್ಟಿ, ಅಪರೂಪದ ಭಾಷಾ ಸಂವೇದನೆ ಅನಾವರಣಗೊಳಿಸುತ್ತವೆ ಎಂದು ಹೇಳಿದರು.
ಬೆಂಗಳೂರಿನ ವಿಮರ್ಶಕಿ ಡಾ. ಎನ್.ಆರ್. ಲಲಿತಾಂಬಾ ಮಾತನಾಡಿ, ಡಾ. ಕಟ್ಟಿ ಅವರು ಬರೆದ ಆರು ಕಾವ್ಯಯಾನ ಪರಿಪಕ್ವತೆ, ದಾರ್ಶನಿಕತೆ, ತಾತ್ವಿಕತೆಯ ಹಂತಕ್ಕೆ ನಡೆದ ಡಾ. ಕಟ್ಟಿ ಅವರ ಕಾವ್ಯಗಳು ಬಂಡಾಯದ ಧ್ವನಿಯೊಂದಿಗೆ ಸಮಾಜದ ಎಲ್ಲಾ ಬಗೆಯ ಶೋಷಣೆಗಳ ವಿರುದ್ಧದ ಧ್ವನಿಯನ್ನು ಗಟ್ಟಿಗೊಳಿಸಿವೆ. ಅವರ ಸ್ವಚ್ಛ ಮತ್ತು ಸತ್ಯದ ದೃಷ್ಟಿಕೋನ, ಲೋಕದೃಷ್ಟಿಯ ಬಗೆ ಮತ್ತು ಸುಲಭವಾಗಿ ಅರ್ಥವಾಗುವ ಭಾವನೆಗಳ ಹೊರ ಹೊಮ್ಮುವಿಕೆಗೆ ಸಾಕ್ಷಿಯಾಗಿ ನಿಂತಿವೆ. ಅವರ ಕಾವ್ಯದ ಅಶಯಗಳಲ್ಲಿ ಯುವಭಾವ, ಪ್ರೀತಿ, ಜಾತಿ, ಸಮಾಜ, ಯುದ್ಧ, ತಲ್ಲಣ, ಜನರನ್ನು ಎಚ್ಚರಿಸುವ ಸಾಮಾಜಿಕ ಜಾಗೃತಿ, ಜಾಗತಿಕ ಪ್ರಜ್ಞೆ, ಕೊನೆಗೊಂದು ಶಾಂತಿ, ಎಲ್ಲ ಬಗೆಯ ಶೋಷಣೆ, ಕೊನೆಗೆ ನೆಮ್ಮದಿಯನ್ನೂ ವಸ್ತುವಾಗಿಸಿ, ಭಾಷಿಕ ನೈಪುಣ್ಯತೆ ಬಳಸಿರುವುದು ಅಪರೂಪದಲ್ಲಿಯೇ ಅಪರೂಪ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊ. ಡಾ. ಎ್.ಟಿ. ಹಳ್ಳಿಕೇರಿ ಡಾ. ಕಟ್ಟಿ ಸಂಶೋಧನೆಗಳ ಕುರಿತು ಮಾತನಾಡಿ, ದಾಖಲೆ, ಆಕರ ಗ್ರಂಥ ಗಳಿಲ್ಲದ ಹಾಲುಮತದ ಅಮೋಘಸಿದ್ಧ ಸಂಪ್ರದಾಯದ ಸಂಶೋಧನೆ ಸೃಜನಶೀಲತೆಯಿಂದ ಕೂಡಿದೆ. ಅದರ ಪರಂಪರೆ, ಪರಿವಾರ, ಜಾತ್ರೆ, ಆಚರಣೆಗಳ ಕುರಿತು ನಡೆಸಿದ ಅವರ ಅಧ್ಯಯನವು ಅಪರಿಚಿತವನ್ನು ಪರಿಚಯಿಸುವುದೇ ಸಂಶೋಧನೆ ಎಂಬ ಮಾತುಗಳನ್ನಾಡಿದ್ದ ಡಾ.ಎಂ.ಎಂ.ಕಲಬುರ್ಗಿ ಅವರ ಸಂಶೋಧನಾ ಮಾರ್ಗ ಅವರಲ್ಲಿ ಸ್ಪಷ್ಟವಾಗಿದೆ. ಅವರ ಸಂಶೋಧನೆಯಲ್ಲಿ ಮೂಡಿದ ಕುರುಬ ಪರಂಪರೆಯ ನಾಯಕರಾದ ಹುಲ್ಲಪ್ಪ ಹಾಗೂ ಚಂದಪ್ಪ ಅವರ ಕುರಿತಾದ ಹೆಚ್ಚಿನ ಅಧ್ಯಯನ ಡಾ. ಕಟ್ಟಿ ಅವರು ನಡೆಸಲಿ ಎಂದು ಆಶಿಸಿದರು.
ತಿಪಟೂರಿನ ಅನುವಾದಕ ಎಸ್.ಗಂಗಾಧರಯ್ಯ ಮಾತನಾಡಿದರು. ಚಾಣಕ್ಯ ಕರಿಯರ್ ಅಕಾಡೆಮಿಯ ಸಂಸ್ಥಾಪಕ ಎನ್.ಎಂ.ಬಿರಾದಾರ, ಡಾ. ಚನ್ನಪ್ಪ ಕಟ್ಟಿ ಡಾ. ಶ್ರೀರಾಮ ಇಟ್ಟಣ್ಣವರ, ಡಾ.ಎಂ.ಎಂ.ಪಡಶೆಟ್ಟಿ ಮತ್ತಿತರರಿದ್ದರು.