ಗಂಧದ ಮರಗಳ ಕಳ್ಳರನ್ನು ದೊಡ್ಡಬಳ್ಳಾಪುರ ಇನ್​ಸ್ಪೆಕ್ಟರ್​ ಮುತ್ತುರಾಜು ನೇತೃತ್ವದಲ್ಲಿ ಬಂಧಿಸಿರುವುದು. ಸಿಬ್ಬಂದಿ ಶಿವಾನಂದ, ಹುಸೇನ್​, ಪಾಂಡುರಂಗ, ರೂಪೇಶ್​, ಮುನಿರಾಜು ಇತರರು ಇದ್ದರು. 
ರಾಜ್ಯ

254 ಕೆಜಿ ತೂಕದ ಗಂಧದ ತುಂಡು ವಶ / DODABALLAPUR

ದೊಡ್ಡಬಳ್ಳಾಪುರ : ನಗರ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಗಂಧದ ಮರ ಕಳ್ಳತನದ ಪ್ರಕರಣವನ್ನು ಪೊಲೀಸರು ಭೇದಿಸಿ ಇಬ್ಬರನ್ನು ಬಂಧಿಸಿದ್ದು, ಒಟ್ಟು 254 ಕೆಜಿ ತೂಕದ ಗಂಧದ ಮರದ ತುಂಡುಗಳು, ಪೆಟ್ರೋಲ್​ ಚಾಲಿತ ಗರಗಸ ಹಾಗೂ ಒಂದು ಸ್ಯಾಂಟ್ರೋ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ವೆಂಕಟೇಶ್​ (26), ತುಮಕೂರಿನ ಅರುಣ್​ (34) ಬಂಧಿತರು. ಈ ಇಬ್ಬರೂ ಬಿದಿರು ಬುಟ್ಟಿ ತಯಾರಿಕೆ ಕೆಲಸ ಮಾಡುತ್ತಿದ್ದು, ಕುರುಬರಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ವೆಂಕಟೇಶ್​ ವಿರುದ್ಧ ಈ ಹಿಂದೆ ಎಲೆಕ್ಟ್ರಾನಿಕ್​ ಸಿಟಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ.
ಸಿಸಿ ಕ್ಯಾಮರಾ ಆಧರಿಸಿ ಕಾರ್ಯಾಚರಣೆ: ಜೂ.13ರಂದು ಮಧ್ಯರಾತ್ರಿ ನಗರ ಠಾಣಾ ವ್ಯಾಪ್ತಿಯ ಕಛೇರಿಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿದ್ದ ಒಂದು ಗಂಧದ ಮರ ಹಾಗೂ ದರ್ಗಾ ಮೊಹಲ್ಲಾದ ಸ್ಮಶಾನದಲ್ಲಿದ್ದ ಮತ್ತೊಂದು ಗಂಧದ ಮರವನ್ನು ಕಡಿದು ಕಳವು ಮಾಡಿದ್ದರು. ಈ ಸಂಬಂಧ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಸಿಸಿ ಕ್ಯಾಮರಾ ಆಧರಿಸಿ ಆರೋಪಿಗಳ ಚಲನವಲನ ಪತ್ತೆಹಚ್ಚಿದರು. ಕಳವು ಮಾಡಿದ್ದ ಗಂಧದ ಮರದ ತುಂಡುಗಳನ್ನು ಸ್ಯಾಂಟ್ರೋ ಕಾರಿನಲ್ಲಿ ಸಾಗಿಸಿ ಕುರುಬರಹಳ್ಳಿ ಸಮೀಪ ಅಡಗಿಸಿಟ್ಟಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.