ವಿಜಯಪುರದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ವಿಶ್ವ ದೃಶ್ಯಕಲಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ನಾಡಿನ ಶ್ರೇಷ್ಠ ಕಲಾವಿದರ ಕಲಾಕೃತಿಗಳ ಪ್ರದರ್ಶನಕ್ಕೆ ಗಣ್ಯರು ಚಾಲನೆ ನೀಡಿದರು. ಅಶೋಕ ಯಡಳ್ಳಿ, ಸಂತೋಷ ಭೋವಿ, ರಮೇಶ ಚವಾಣ್ ಮತ್ತಿತರರಿದ್ದಾರೆ. 
ರಾಜ್ಯ

ಸಾವಿರ ಪದ ಮೀರುವ ಶಕ್ತಿ ಚಿತ್ರಕ್ಕಿದೆ

ಪ್ರಮುಖ ಮುಖ್ಯಾಂಶಗಳು

  • ಕಾನಿಪ ಅಧ್ಯಕ್ಷ ಅಶೋಕ ಯಡಳ್ಳಿ ಮಾಹಿತಿ
  • ವಿಶ್ವ ದೃಶ್ಯಕಲಾ ದಿನಾಚರಣೆ
ವಿಜಯಪುರ: ಒಂದು ಕಲಾಕೃತಿ ಒಂದು ಕಾದಂಬರಿಗೆ ಸಮ. ಸಾವಿರ ಪದಗಳಿಗೂ ಮೀರುವ ಶಕ್ತಿ ಒಂದು ಚಿತ್ರಕ್ಕಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ಯಡಳ್ಳಿ ಹೇಳಿದರು.
ಕ್ಯಾನವಾಸ್ ಆರ್ಟ್ ಫೌಂಡೇಶನ್ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನ ಸಹಾಯದೊಂದಿಗೆ ವಿಶ್ವ ದೃಶ್ಯಕಲಾ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ನಗರದ ಪ್ರವಾಸೋದ್ಯಮ ಇಲಾಖೆಯ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ನಾಡಿನ ಶ್ರೇಷ್ಠ ಕಲಾವಿದರ ಕಲಾಕೃತಿಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಕಲಾವಿದರು ಸಮಾಜದ ಅಂಕುಡೊಂಕುಗಳನ್ನು ತಮ್ಮ ಕಲಾಕೃತಿಗಳ ಮೂಲಕ ಚಿತ್ರಿಸಿ ಸಮಾಜಕ್ಕೆ ಸಂದೇಶ ನೀಡುತ್ತಿರುವ ಕಾರ್ಯ ಶ್ಲಾಘನಾರ್ಹ. ಇಂತಹ ಕಲಾವಿದರಿಂದ ಸಮಾಜದ ಬೆಳವಣಿಗೆ ಸಾಧ್ಯವಿದ್ದು, ಒಂದೊಂದು ಕಲಾಕೃತಿಯು ಕೂಡ ಒಂದು ವಿಶೇಷ ಅನುಭವವನ್ನೇ ನೀಡುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಮಾತನಾಡಿ, ದೃಶ್ಯಕಲಾ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿ ವರ್ಣಶಿಲ್ಪಿ ವೆಂಕಟಪ್ಪ ಪುರಸ್ಕೃತ ಕಲಾವಿದರ ಕಲಾಕೃತಿಗಳು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದ ವಾಸುದೇವ ಕಾಮತರ ಕಲಾ ಕೃತಿ ಜತೆಗೆ ನಾಡಿನ ಹಿರಿಯ ಮತ್ತು ಯುವ ಕಲಾವಿದರ ಕಲಾಕೃತಿಗಳು ಒಂದೆಡೆ ನೋಡಲು ಲಭಿಸಿದ್ದು ಅಪರೂಪದ ಸಂಗತಿ. ಕಲಾವಿದರಿಗೆ ನಮ್ಮ ಇಲಾಖೆ ವತಿಯಿಂದ ಅನುದಾನ ನೀಡಲಾಗುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಹಿರಿಯ ಕಲಾವಿದ ಪಿ.ಎಸ್. ಕಡೇಮನಿ ಮಾತನಾಡಿ, ಕಲಾಪ್ರದರ್ಶನದಲ್ಲಿರುವ ಕಲಾಕೃತಿಗಳು ಬೇರೆಡೆ ಎಲ್ಲೂ ಪ್ರದರ್ಶನವಾಗಿಲ್ಲ. ಅತ್ಯಂತ ಶ್ರೇಷ್ಠ ಹಿರಿಯ ಕಲಾವಿದರ ಕಲಾಕೃತಿಗಳು ಇಲ್ಲಿ ಪ್ರದರ್ಶನವಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕ್ಯಾನವಾಸ್ ಆರ್ಟ್ ಫೌಂಡೇಶನ್ ಕಾರ್ಯದರ್ಶಿ ರಮೇಶ ಚವಾಣ್ ಪ್ರಾಸ್ತಾವಿಕವಾಗಿ ಮಾತನಾಡಿ, ಏ.19ರವರೆಗೆ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಕಲಾಕೃತಿಗಳ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಕಲಾಸಕ್ತರು ಅಪರೂಪದ ಕಲಾ ಪ್ರದರ್ಶನ ವೀಕ್ಷಿಸುವಂತೆ ವಿನಂತಿಸಿದರು.