- ಜೀವನದ ಅನಿವಾರ್ಯ ಸತ್ಯವಾದ ಸಾವಿನ ಮುಂದೆ ಅಧಿಕಾರ, ಹುದ್ದೆ, ರಾಜಕೀಯ ಎಲ್ಲವೂ ಗೌಣ
- ಚೆನ್ನಮ್ಮ ಗುಣಕ್ಕೆ ತಲೆದೂಗಿದ ಸದನ:
ನಾಲ್ಕು ಗಂಟೆಗೂ ಹೆಚ್ಚು ಕಾಲ ನಡೆದ ಸಂತಾಪ ಸೂಚನಾ ಸಭೆ!
ಮಾರ್ಗದರ್ಶಿಯಾದ ಸಿಎಂ, ಚೆನ್ನಮ್ಮ ಗುಣಕ್ಕೆ ತಲೆದೂಗಿದ ಸದನ,
ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ವಿಧಾನಸಭೆಯ ಅಧಿವೇಶನವನ್ನು ಎದುರಿಸಿದ ಡಿ.ಕೆ. ಶಿವಕುಮಾರ್ ಅವರು ಆಡಳಿತದ ಜವಾಬ್ದಾರಿಯ ಜೊತೆಗೆ ಮಾನವೀಯತೆಯ ಮೌಲ್ಯವನ್ನೂ ಎತ್ತಿ ಹಿಡಿದರು.
ಅಧಿವೇಶನದ ಆರಂಭವೇ ಸಂತಾಪ ಸಭೆಯೊಂದಿಗೆ ನಡೆದ ಕ್ಷಣ ಗಂಭೀರತೆಯಿಂದ ಕೂಡಿತ್ತು. ರಾಜಕೀಯ ಭಿನ್ನಾಭಿಪ್ರಾಯಗಳು, ಪಕ್ಷಗಳ ನಡುವಿನ ವಾಗ್ವಾದಗಳು ಎಲ್ಲವೂ ಆ ಕ್ಷಣಕ್ಕೆ ಹಿಂದೆ ಸರಿದವು. ಅಗಲಿದ ಗಣ್ಯರನ್ನು ಸ್ಮರಿಸುವ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾತುಗಳಲ್ಲಿ ಅಧಿಕಾರದ ಧ್ವನಿಗಿಂತ ಮಾನವೀಯತೆಯ ಸ್ಪರ್ಶವೇ ಹೆಚ್ಚು ಗೋಚರಿಸಿತು.
ಜೀವನದ ಅನಿವಾರ್ಯ ಸತ್ಯವಾದ ಸಾವಿನ ಮುಂದೆ ಅಧಿಕಾರ, ಹುದ್ದೆ, ರಾಜಕೀಯ ಎಲ್ಲವೂ ಗೌಣ ಎನ್ನುವ ಸಂದೇಶವನ್ನು ಅವರ ನಡೆ ಮತ್ತು ನುಡಿಗಳು ಸಾರಿದವು.
ವಿರೋಧಿಗಳಾಗಿದ್ದರೂ ಅವರ ಸೇವೆಯನ್ನು ಗೌರವಿಸುವುದು, ಕುಟುಂಬದ ದುಃಖದಲ್ಲಿ ಪಾಲುದಾರರಾಗುವುದು ಮತ್ತು ಸದನದ ಘನತೆಯನ್ನು ಕಾಪಾಡುವುದು ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯ ಎಂಬುದನ್ನು ಅವರು ಮನದಟ್ಟು ಮಾಡಿದರು.
ಮೊದಲ ಅಧಿವೇಶನವೇ ಕೇವಲ ಆಡಳಿತಾತ್ಮಕ ಪ್ರಾರಂಭವಾಗಿರಲಿಲ್ಲ. ಅದು ಮಾನವೀಯತೆ, ಸಂವೇದನೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಾಕ್ಷಿಯಾದ ಕ್ಷಣವಾಗಿತ್ತು. ರಾಜಕೀಯದ ಗದ್ದಲದ ನಡುವೆ ಮಾನವೀಯತೆಯ ಮೌನವೇ ಹೆಚ್ಚು ಘೋಷಿಸಿತು. ಅದೇ ಈ ಅಧಿವೇಶನದ ವಿಶೇಷತೆ.
ವಿಧಾನಸಭೆಯ ಸಂತಾಪ ನಿರ್ಣಯದ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾತುಗಳಲ್ಲಿ ಕೇವಲ ರಾಜಕೀಯವಷ್ಟೇ ಇರಲಿಲ್ಲ, ನೆನಪುಗಳು, ಸಂಬಂಧಗಳು ಮತ್ತು ಮಾನವೀಯತೆಯ ಮಿಡಿತವೂ ಇತ್ತು.
ಸಚಿವ ಡಿ.ಸುಧಾಕರ್ ಅವರು ಸಚಿವರಾಗಿದ್ದಾಗಿನಿಂದಲೇ ಜೊತೆಗೂಡಿ ಕೆಲಸ ಮಾಡಿದ ದಿನಗಳನ್ನು ಸ್ಮರಿಸಿದ ಅವರು, ಪ್ರತಿಯೊಬ್ಬರೊಂದಿಗಿನ ಒಡನಾಟವನ್ನು ಹೃದಯಸ್ಪರ್ಶಿಯಾಗಿ ನೆನಪಿಸಿಕೊಂಡರು. ಅವರೊಂದಿಗಿನ ಸಾರ್ವಜನಿಕ ಬದುಕಿನ ನೆನಪುಗಳನ್ನು ಹಂಚಿಕೊಂಡ ಕ್ಷಣ ಸದನವನ್ನು ಭಾವುಕಗೊಳಿಸಿತು.
ಚೆನ್ನಮ್ಮ ಗುಣಕ್ಕೆ ತಲೆದೂಗಿದ ಸದನ:
ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರ ಅಗಲಿಕೆಯನ್ನೂ ಉಲ್ಲೇಖಿಸಿದ ಮುಖ್ಯಮಂತ್ರಿ, ಒಂದು ಕುಟುಂಬದ ದುಃಖವು ಕೇವಲ ಆ ಕುಟುಂಬದ್ದಲ್ಲ, ಸಮಾಜದ ನೋವೂ ಹೌದು ಎಂಬ ಭಾವನೆಯನ್ನು ವ್ಯಕ್ತಪಡಿಸಿದರು. ರಾಜಕೀಯ ಭಿನ್ನಾಭಿಪ್ರಾಯಗಳಾಚೆಗೆ ಮಾನವೀಯ ಸಂಬಂಧಗಳು ದೊಡ್ಡವು ಎಂಬ ಸಂದೇಶ ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಮೂಡಿಬಂತು. ಸದನದಲ್ಲಿ ಮಾತನಾಡಿದ ಡಿಸಿಎಂ ಡಾ.ಜಿ.ಪರಮೇಶ್ವರ, ಸಚಿವರಾದ ಬಾಲಕೃಷ್ಣ, ಕೆ.ಎಂ.ಶಿವಲಿಂಗೇಗೌಡ ಅವರಿಂದ ಹಿಡಿದು ವಿಪಕ್ಷ ನಾಯಕ ಅಶೋಕ್, ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್‌ನ ಜಿ.ಟಿ.ದೇವೇಗೌಡರ ತನಕ ಮಾತನಾಡಿದವರೆಲ್ಲರೂ ಚೆನ್ನಮ್ಮ ಅವರೊಂದಿಗಿನ ಒಡನಾಟ, ಮನೆಯಲ್ಲಿ ನೀಡಿದ ಆತಿಥ್ಯ, ಕಜ್ಜಾಯ ತಿಂದ ಸವಿನೆನಪು ಮೆಲುಕು ಹಾಕಿದ್ದಲ್ಲದೆ, ರಾಜಕೀಯ ಹೊರತಾದ ಭಾವನೆಗಳನ್ನು ಹೊಂದಿದ ನಿಜವಾದ ಅನ್ನಪೂರ್ಣೆ ಎಂದು ಗುಣಗಾನ ಮಾಡಿದರು.
2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನೆರವಾಗಿದ್ದ ಆಗಿನ ಶಾಸಕರಾದ ಡಿ.ಸುಧಾಕರ್, ಪಾವಗಡದ ವೆಂಕಟರಮಣಪ್ಪ ಅವರ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಮೆಲುಕು ಹಾಕಿದರು. ಅದೇ ರೀತಿ ಅಂದು ಸಚಿವ ನರೇಂದ್ರಸ್ವಾಮಿ ಅವರು ಅಂದು ನಡೆದ ಕಹಿ ಘಟನೆಗಳಿಗೂ ಕನ್ನಡಿ ಹಿಡಿದರು.
ಅಧಿವೇಶನ ಪ್ರಾರಂಭಕ್ಕೂ ಮುನ್ನವೇ ಅಧಿವೇಶನಕ್ಕೆ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ಪ್ರತಿಯೊಬ್ಬ ಶಾಸಕರನ್ನು ಹೆಗಲ ಮೇಲೆ ಕೈ ಹಾಕಿ ಮಾತನಾಡಿ, ನಿಮ್ಮೆಲ್ಲರ ಬೆಂಬಲ ಸಹಕಾರ ಇರಲಿ ಎಂದು ವಿನಂತಿಸಿದರು.
ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ತಮ್ಮ ಕುರ್ಚಿ ಬಳಿಗೆ ಬಂದ ಸಿಎಂ, ಭಾವಪೂರ್ಣವಾಗಿ ತಲೆಭಾಗಿ ಮೇಜಿಗೆ ತಲೆತಾಗಿಸಿ ನಮಸ್ಕರಿಸಿದರು.
ವಿಧಾನಸಭೆ ಇತಿಹಾಸದಲ್ಲಿ ಇಷ್ಟು ಸುಧೀರ್ಘವಾದ ಸಂತಾಪ ಸೂಚಕ ಸಭೆ ನಡೆದಿರಲಿಲ್ಲ. ಹಂಗಾಮಿ ಸ್ಪೀಕರ್ ಟಿ.ಬಿ.ಜಯಚಂದ್ರ ಅವರು ಮಾತನಾಡುವುದಕ್ಕೆ ಬಯಸಿದ ಎಲ್ಲರಿಗೂ ಅವಕಾಶ ನೀಡಿದ್ದರಿಂದ ಸಂತಾಪ ಸಭೆ ಸುಧೀರ್ಘವಾಗಿ ನಡೆಯಿತು.
*ಸಂತಾಪ ನಿರ್ಣಯವು ಕೇವಲ ಔಪಚಾರಿಕ ಕಾರ್ಯಕ್ರಮವಾಗಿ ಉಳಿಯಲಿಲ್ಲ. ಜೀವನದ ಪಯಣ, ಜೊತೆಯಾಗಿ ಕಳೆದ ಕ್ಷಣಗಳು, ಅಗಲಿದವರ ಸೇವೆ ಮತ್ತು ಅವರೊಂದಿಗಿನ ಬಾಂಧವ್ಯವನ್ನು ನೆನಪಿಸಿಕೊಳ್ಳುವ ಭಾವಪೂರ್ಣ ಕ್ಷಣವಾಗಿ ಅದು ರೂಪುಗೊಂಡಿತು. ಮುಖ್ಯಮಂತ್ರಿ ಅವರ ಮಾತುಗಳು ರಾಜಕೀಯಕ್ಕೂ ಮೀರಿದ ಮಾನವೀಯತೆಯೇ ಅಂತಿಮವಾಗಿ ಉಳಿಯುವ ಮೌಲ್ಯ ಎಂಬುದನ್ನು ಮತ್ತೊಮ್ಮೆ ನೆನಪಿಸಿದವು.