ಕೇರಳ ಕುರಿತು ಛಾಯಚಿತ್ರ ಪ್ರದರ್ಶನ
ಬೆಂಗಳೂರು:ಕೇರಳ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಕೊಚ್ಚಿ ಬಿನಾಲೆ ಫೌಂಡೇಷನ್, ನಗರದ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನಲ್ಲಿ ಆಯೋಜಿಸಿದ್ದ 2 ದಿನಗಳ ‘ಅಖಿಲ ಭಾರತ ಛಾಯಾಚಿತ್ರ ಪ್ರದರ್ಶನ’ ನೋಡುಗರ ಗಮನ ಸೆಳೆಯಿತು.
ಕೇರಳದ ಸಂಸ್ಕೃತಿ, ಸೌಂದರ್ಯ, ಸೊಬಗು ಮತ್ತು ಸಾಂಸ್ಕೃತಿಕ ಪರಂಪರೆ ಕುರಿತು ಸೆರೆಹಿಡಿದಿರುವ ಚಿತ್ರಗಳನ್ನು ಸಾರ್ವಜನಿಕರು ವೀಕ್ಷಿಸಿ ಕಣ್ತುಂಬಿಸಿಕೊಂಡರು. ವನ್ಯಜೀವಿ ಛಾಯಾಗ್ರಾಹಕ ಬಾಲನ್ ಮಾಧವನ್ ಸೇರಿ ಹಲವು ಛಾಯಗ್ರಾಹಕರು, ಕೇರಳದಾದ್ಯಂತ ಸಂಚರಿಸಿ ಪ್ರಕೃತಿ, ವನ್ಯಜೀವಿ, ಪರಂಪರೆ, ಗ್ರಾಮೀಣ ಬದುಕು, ವಾಸ್ತುಶಿಲ್ಪ, ಹಬ್ಬಗಳು, ಆಧ್ಯಾತ್ಮಿಕತೆ ಸೇರಿ ವಿವಿಧ ವಿಷಯಗಳ ಮೇಲೆ ಸೆರೆಹಿಡಿದ ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು.
ಪ್ರದರ್ಶನವನ್ನು ಉದ್ಘಾಟಿಸಿ ಕೇರಳ ಪ್ರವಾಸೋದ್ಯಮ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ಮಾತನಾಡಿ, ದೇಶ ಮತ್ತು ವಿದೇಶದ ಜನರನ್ನು ಆಕರ್ಷಿಸುವ ಬೆಂಗಳೂರಿನಲ್ಲಿ ಕೇರಳದ ಸಂಸ್ಕೃತಿ ಬಿಂಬಿಸುವ ಛಾಯಚಿತ್ರ ಪ್ರದರ್ಶನ ಏರ್ಪಡಿಸಿರುವುದು ಖುಷಿ ತಂದಿದೆ. ಪ್ರದರ್ಶನದಲ್ಲಿ ಹಸಿರು ಪ್ರಕೃತಿ, ವಾಸ್ತು ಶಿಲ್ಪ ವಿಸ್ಮಯ, ಕೇರಳದ ಕಥೆ ಒಳಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇರಳದ ಮಾಜಿ ಮುಖ್ಯ ಕಾರ್ಯದರ್ಶಿ ಡಾ. ವಿ.ವೇಣು, ಎನ್ಜಿಎಂಎ ಬೆಂಗಳೂರು ನಿರ್ದೇಶಕರಾದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಖ್ಯಾತ ಕಲಾ ವಿಮರ್ಶಕಿ ಉಮಾ ನಾಯರ್ ಮತ್ತಿತರರಿದ್ದರು.
ಇಡೀ ತಿಂಗಳು ವಿವಿಧ ನಗರಗಳಲ್ಲಿ ಛಾಯಚಿತ್ರ ಪ್ರದರ್ಶನ:
ದೆಹಲಿಯಲ್ಲಿ ಆರಂಭವಾದ ಛಾಯಚಿತ್ರ ಪ್ರದರ್ಶನವು ಈಗಾಗಲೇ ವಡೋದರ, ಅಹಮದಾಬಾದ್, ಮುಂಬೈ, ಪುಣೆ ಮತ್ತು ಬೆಂಗಳೂರಿನಲ್ಲಿ ನಡೆದಿದೆ. ಮಾ.4ರಿಂದ ಮಾ.7ವರೆಗೆ ಚೆನ್ನೈ, ಮಾ.12 ರಿಂದ ಮಾ.14ವರೆಗೆ ಹೈದರಾಬಾದ್, ಮಾ.19ರಿಂದ ಮಾ.21ವರೆಗೆ ಸೂರತ್ ಮತ್ತು ಮಾ.27 ರಿಂದ ಮಾ.29ರವರೆಗೆ ಕೋಲ್ಕತ್ತಾದಲ್ಲಿ ‘ಲೆನ್ಸ್ಕೇಪ್ ಕೇರಳ’ ಛಾಯಾಚಿತ್ರ ಪ್ರದರ್ಶನ’ ಏರ್ಪಡಿಸಲಾಗಿದೆ.