ಬಾಣಾವರ ಹೋಬಳಿಯ ಬಿ.ವಿ.ಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೊಟ್ರೇಶ್ ಅವರು ತಮ್ಮ ಮಕ್ಕಳನ್ನು ಹೆಂಜಗೊಂಡನಹಳ್ಳಿ ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಅರಸೀಕೆರೆ ಗ್ರಾಮಾಂತರ: ಸರ್ಕಾರಿ ಉದ್ಯೋಗಕ್ಕಾಗಿ ಹಾತೊರೆಯುವ ಜನರು ಅದೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಹಿಂದೇಟು ಹಾಕುವ ಈ ಕಾಲದಲ್ಲಿ ತಾಲೂಕಿನ ಬಾಣಾವರ ಹೋಬಳಿಯ ಬಿ.ವಿ.ಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೊಟ್ರೇಶ್ ಅವರು ತಮ್ಮ ಮಕ್ಕಳನ್ನು ಹೆಂಜಗೊಂಡನಹಳ್ಳಿ ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಹೆಂಜಗೂಂಡನಹಳ್ಳಿ ಶಾಲೆಯಲ್ಲಿರುವ ಇಬ್ಬರು ಶಿಕ್ಷಕರು ಇಂಗ್ಲಿಷ್ ಚೆನ್ನಾಗಿ ಬೋಧಿಸುತ್ತಿದ್ದು, ಅದನ್ನು ಗಮನಿಸಿ ಈ ಶಾಲೆಗೆ ದಾಖಲಿಸಿದ್ದೇನೆ ಎಂದು ಸೋಮವಾರ ಮಾಧ್ಯಮದವರಿಗೆ ತಿಳಿಸಿದರು.
ಈ ಮಕ್ಕಳನ್ನು ಶಿಕ್ಷಣ ಸಂಯೋಜಕ ಬಿ.ಮಲ್ಲೇಶ್, ಬಿಆರ್‌ಪಿ ಪುಷ್ಪಾವತಿ ಹಾಗೂ ಮುಖ್ಯ ಶಿಕ್ಷಕಿ ಹೇಮಲತಾ ಅವರು ಶಾಲೆಗೆ ಬರಮಾಡಿಕೊಂಡು ಪಠ್ಯಪುಸ್ತಕ ನೀಡಿ ಶುಭ ಕೋರಿದರು. ಬಳಿಕ ಮಾತನಾಡಿದ ಬಿ. ಮಲ್ಲೇಶ್ ಅವರು ಸರ್ಕಾರಿ ಶಾಲೆಗಳೆಂದರೆ ಸರ್ಕಾರಿ ನೌಕರರನ್ನೊಳಗೊಂಡಂತೆ ಎಲ್ಲರೂ ಮೂಗು ಮುರಿಯುತ್ತಾರೆ. ಆದರೆ ಕೊಟ್ರೇಶ್ ಅವರು ತಾವು ಸರ್ಕಾರಿ ಶಾಲೆಯ ಶಿಕ್ಷಕರಾಗಿ ತಮ್ಮ ಮಕ್ಕಳನ್ನೂ ಸಹ ಸರ್ಕಾರಿ ಶಾಲೆಗೆ ಸೇರಿಸಿ ಇತರರಿಗೆ ಮಾದರಿಯಾಗಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಬಹಳ ಉತ್ತಮವಾಗಿ ಕನ್ನಡ ಮತ್ತು ಆಂಗ್ಲ ಭಾಷೆಯನ್ನು ಕಲಿಸುವುದರಲ್ಲಿ ತಮ್ಮ ಚಾಣಕ್ಯತೆಯನ್ನು ತೋರುತ್ತಿದ್ದಾರೆ. ಹೀಗಾಗಿ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೆಂದು ಮನವಿ ಮಾಡಿದರು. ಜತೆಗೆ ಮಕ್ಕಳಿಗೆ ಹಲವು ಸರ್ಕಾರಿ ಸೌಲಭ್ಯಗಳು ದೊರೆಯಲಿದ್ದು, ಉಚಿತ ಪಠ್ಯಪುಸ್ತಕ ಸಮವಸ್ತ್ರ, ಶೂ ಬಿಸಿಊಟ, ಪೌಷ್ಟಿಕ ಆಹಾರವಾಗಿ ಮೊಟ್ಟೆ,ಬಾಳೆಹಣ್ಣು ನೀಡಲಾಗುತ್ತಿದೆ. ಜತೆಗೆ ವರ್ಷದಲ್ಲಿ ಎರಡು ಮೂರು ಬಾರಿ ಮಕ್ಕಳ ಆರೋಗ್ಯವನ್ನು ತಪಾಸಣೆ ಮಾಡಿಸಲಾಗುತ್ತದೆ ಇಂತಹ ಸೌಲಭ್ಯಗಳನ್ನು ನೀವು ಬೇರೆ ಶಾಲೆಗಳಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.