ಅರಕಲಗೂಡು ತಾಲೂಕಿನ ರುದ್ರಪಟ್ಟಣದಲ್ಲಿ ಆಯೋಜಿಸಿದ್ದ 23ನೇ ಸಂಗೀತೋತ್ಸವದಲ್ಲಿ ವಿದ್ವಾನ್ ಎಸ್. ಗಣೇಶ್ ವಿಶ್ವನಾಥ ಅವರ ಗಾಯನ ಕಛೇರಿ ನಡೆಸಿಕೊಟ್ಟರು. ವಿದ್ವಾನ್ ಬಿ.ಕೆ. ರಘು ಪಿಟೀಲು, ವಿದ್ವಾನ್ ಫಣೀಂದ್ರ ಭಾಸ್ಕರ್ ಮೃದಂಗ, ವಿದ್ವಾನ್ ಬಿ.ಎಸ್. ರಂಘುನಂದನ್ ಘಟ ನುಡಿಸಿ ಸಾತ್ ನೀಡಿದರು.
- ರುದ್ರಪಟ್ಟಣ
- 23ನೇ ವಾರ್ಷಿಕ ಸಂಗೀತೋತ್ಸವ
ಅರಕಲಗೂಡು: ತಾಲೂಕಿನ ರುದ್ರಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ 23ನೇ ವಾರ್ಷಿಕ ಸಂಗೀತೋತ್ಸವದಲ್ಲಿ ವಿವಿಧ ಕಲಾವಿದರು ವಿವಿಧ ಸಂಗೀತ ಕಛೇರಿ ಪ್ರಸ್ತುತ ಪಡಿಸುವ ಮೂಲಕ ಸಂಗೀತ ಪ್ರಿಯರ ಮನಸ್ಸಿಗೆ ಮುದ ನೀಡಿದರು.
ತಾಸುಗಟ್ಟಲೆ ನಡೆದ ವಿವಿಧ ಸಂಗೀತ ವಿದ್ವಾಂಸರ ಗೀತಗಾಯನ ಕಛೇರಿ ಸಂಗೀತಾಸಕ್ತರಿಗೆ ಅಪೂರ್ವ ರಸದೌತಣ ಉಣಬಡಿಸಿತು. ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಸಂಗೀತ ಗೀತೆಗಳ ಸೊಗಸಾದ ಸಂಯೋಜನೆ ಸಂಗೀತ ಸ್ವಾದವನ್ನು ಹೆಚ್ಚಿಸಿತು. ಪ್ರಸಿದ್ಧ ಸಂಗೀತ ವಿದ್ವಾಂಸರು ರಾಗಭಾವಪೂರ್ಣ ಕೀರ್ತನೆಗಳನ್ನು ಹಾಡಿ ಪ್ರೇಕ್ಷಕರ ಮನಸೂರೆಗೊಳಿಸಿದರು. ಕರ್ನಾಟಕ ಸಂಗೀತದ ವಿವಿಧ ರಾಗಗಳನ್ನು ಆಲಾಪಿಸಿದ ಕಲಾವಿದರು ತಮ್ಮ ಮಧುರ ಕಂಠದಿಂದ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು.
ಮೊದಲಿಗೆ ವಿದ್ವಾನ್ ಎಸ್.ಗಣೇಶ್ ವಿಶ್ವನಾಥ ಗಾಯನ ಕಛೇರಿ ನಡೆಸಿಕೊಟ್ಟರು. ಸಾಮಿ ನಿನ್ನೆ ಕೃತಿಯನ್ನು ಶ್ರೀವರ್ಣದಲ್ಲಿ, ರಘುನಾಯಕ ಹಂಸಧ್ವನಿ, ಓರಜೂಪುಜು ಕನ್ನಡೌಳ, ಶಂಭೋ ಮಹಾದೇವ ಪಂತುವಳಿ ರಾಗ, ನೀ ಭಜನಾ, ನಂದ ಗೋಪಾಲ ಯಮುನಾ ಕಲ್ಯಾಣಿ, ರಘುವೀರ ರಣಧೀರ, ದಯರಾನಿ ಮೋಹನ, ಶಾರದ ವಿಚಾರದೆ ಷಣ್ಮುಖಪ್ರಿಯ ಗೀತೆ ಪ್ರೇಕ್ಷಕರ ಮನ ರಂಜಿಸಿತು. ವಿದ್ವಾನ್ ಬಿ.ಕೆ.ರಘು ಪಿಟೀಲು, ವಿದ್ವಾನ್ ಫಣೀಂದ್ರ ಭಾಸ್ಕರ್ ಮೃದಂಗ, ವಿದ್ವಾನ್ ಬಿ.ಎಸ್. ರಂಘುನಂದನ್ ಘಟ ನುಡಿಸಿ ಸಾಥ್ ನೀಡಿದರು.
ವಿದ್ವಾನ್ ಕಲಾಂಬಿಕಾ ಸಹೋದರಿಯರ ಯುಗಳ ಗಾಯನ ಸಂಗೀತಪ್ರಿಯರನ್ನು ನಾದಲೋಕದಲ್ಲಿ ತೇಲಿಸಿತು. ವಿದ್ವಾನ್ ನಳಿನಾ ಮೋಹನ್ ಪಿಟೀಲು, ವಿದ್ವಾನ್ ಮೈಸೂರು ರಾಧೇಶ್ ಮೃದಂಗ, ವಿದ್ವಾನ್ ಶಮಿತ್ ಎಸ್ ಗೌಡ ಘಟ ನುಡಿಸಿ ಚಪ್ಪಾಳೆ ಗಿಟ್ಟಿಸಿದರು. ವಿದ್ವಾನ್ ಆದಿತ್ಯ ಮಾಧವನ್ ಗಾಯಕನಕ್ಕೆ ತಕ್ಕಂತೆ ವಿದ್ವಾನ್ ಕೇಶವ ಮೋಹನ್ ಕುಮಾರ್ ಪಿಟೀಲು, ವಿದ್ವಾನ್ ಸಿ. ಚೆಲುವರಾಜ್ ಮೃದಂಗ ಬಾರಿಸಿದರೆ ವಿದ್ವಾನ್ ಜೆ.ಎಸ್.ರಾಮಾನುಜನ್ ಘಟ ನುಡಿಸಿ ಜನಮನ ಗೆದ್ದರು.
ಭಕ್ತಿಗೀತೆಗಳ ಗಾಯನ ವೇಳೆ ಸಭಾಂಗಣದಲ್ಲಿ ಭಕ್ತಿಭಾವ ಮನೆಮಾಡಿತ್ತು. ವಯಲಿನ್, ಪಿಟೀಲು, ಘಟ ಹಾಗೂ ಮೃದಂಗ ವಾದಕರ ಸಂಗತಿಗಳು ಕಾರ್ಯಕ್ರಮದ ಮೆರುಗನ್ನು ಮತ್ತಷ್ಟು ಹೆಚ್ಚಿಸಿತು. ಸಂಗೀತ ವಿದ್ವಾಂಸರ ಗಾಯನ ಕೌಶಲ, ರಾಗಗಳ ನಿರೂಪಣೆ ಹಾಗೂ ಭಾವಪೂರ್ಣ ಪ್ರದರ್ಶನಕ್ಕೆ ಪ್ರೇಕ್ಷಕರು ಭರ್ಜರಿ ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ಒಟ್ಟಾರೆ ಸಂಗೀತ ಗೀತಗಾಯನ ಕಛೇರಿ ಸಂಗೀತಪ್ರಿಯರ ಮನದಲ್ಲಿ ಅಚ್ಚಳಿಯದ ನೆನಪು ಮೂಡಿಸಿದ ಯಶಸ್ವಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪರಿಣಮಿಸಿತು. ಕಾರ್ಯಕ್ರಮದ ಕೊನೆಯಲ್ಲಿ ಆಯೋಜಕರಾದ ವಿದ್ವಾನ್ ಆರ್.ಕೆ. ಪದ್ಮನಾಭ ಅವರು ಎಲ್ಲ ಕಲಾವಿದರನ್ನು ಸನ್ಮಾನಿಸಿ ಕಲಾವಿದರ ವಿದ್ವತ್ ಕಲಾ ಪ್ರೌಢಿಮೆಯನ್ನು ಕೊಂಡಾಡಿದರು.