ಕ್ರಿಸ್ ಮಸ್ ಸಂಭ್ರಮ 
ರಾಜ್ಯ

ರಾಜಧಾನಿಯಾದ್ಯಂತ ಮಸ್ತ್ ಕ್ರಿಸ್‌ಮಸ್

ಪ್ರಮುಖ ಮುಖ್ಯಾಂಶಗಳು

  • ವಿವಿಧೆಡೆ ಚರ್ಚ್‌ಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಕ್ರೈಸ್ತ ಬಾಂಧವರು
  • ಕಣ್ಮನ ಸೆಳೆದ ಅಲಂಕಾರ
  • ಕಂಗೊಳ್ಳಿಸುತ್ತಿರುವ ಮಾಲ್‌ಗಳು
ಬೆಂಗಳೂರು: ನಗರದಾದ್ಯಂತ ಕ್ರಿಸ್ ಮಸ್ ಹಬ್ಬವನ್ನು ಗುರುವಾರ ಸಂಭ್ರಮದಿಂದ ಅಚರಿಸಲಾಯಿತು. ಹಬ್ಬದ ಪ್ರಯುಕ್ತ ಚರ್ಚುಗಳು ಕ್ರಿಸ್‌ಮಸ್ ಟ್ರೀ ಹಾಗೂ ವಿದ್ಯುತ್ ದೀಪಗಳಿಂದ ಕಂಗೊಳಿಸಿದವು.
ಮುಂಜಾನೆಯಿಂದಲೇ ಸಮೀಪದ ಚರ್ಚ್‌ಗಳಿಗೆ ತೆರಳಿದ ಕ್ರೈಸ್ತ ಬಾಂಧವರು ಮೋಂಬತ್ತಿ ಬೆಳಗುವ ಮೂಲಕ ಏಸುವಿಗೆ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರುಗಳು ಶಾಂತಿ ಮಂತ್ರ ಬೋಧಿಸಿದರು. ಈ ವೇಳೆ ಮೇರಿ ಕ್ರಿಸ್‌ಮಸ್ ಸಂದೇಶದ ಕ್ರಿಸ್‌ಮಸ್ ಕಾರ್ಡ್‌ಗಳು, ಉಡುಗೊರೆಗಳು ಪರಸ್ಪರ ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು. ಹಲವರು ಅಶಕ್ತರಿಗೆ ಉಡುಗೊರೆ ರೂಪದಲ್ಲಿ ಬಟ್ಟೆ, ಹಣ ಇತ್ಯಾದಿ ದಾನ ಮಾಡಿದರು.
ಹಬ್ಬದ ಹಿನ್ನೆಲೆಯಲ್ಲಿ ಶಿವಾಜಿನಗರದ ಸೇಂಟ್ ಮೇರಿಸ್ ಬೆಸಿಲಿಕಾ ಚರ್ಚ್, ್ರೇಜರ್ ಟೌನ್‌ನ ಸೇಂಟ್ ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್ ಚರ್ಚ್, ಬ್ರಿಗೇಡ್ ರಸ್ತೆ ಬಳಿಯ ಸೇಂಟ್ ಪ್ಯಾಟ್ರಿಕ್ಸ್ ಚರ್ಚ್, ಸೇಂಟ್ ಮಾರ್ಕ್ಸ್ ಕೆಥೆಡ್ರಲ್, ಕಾರ್ಪೋರೇಷನ್ ಬಳಿಯ ಹಡ್ಸನ್ ಸ್ಮಾರಕ ಚರ್ಚ್, ಚಾಮರಾಜಪೇಟೆಯ ಸೇಂಟ್ ಜೋಸ್‌ಸೆ ಚರ್ಚ್ ಸೇರಿ ನಗರದ ಚರ್ಚುಗಳು ಗೋದಲಿ ರಚಿಸುವ ಮೂಲಕ ಯೇಸುವನ್ನು ಸಂಭ್ರಮದಿಂದ ಬರಮಾಡಿಕೊಂಡರು.
ಚರ್ಚ್‌ಗಳ ಆವರಣದಲ್ಲಿ ಏಸುವಿನ ಪ್ರತಿಕೃತಿ, ಮೇರಿ ಮಾತೆಯ ಪ್ರತಿಕೃತಿ, ಬಾಲ ಏಸುವನ್ನು ಬರಮಾಡಿಕೊಳ್ಳುವ ಗೋದಲಿಗಳು, ನಕ್ಷತ್ರ, ಚೆಂಡು, ಗಂಟೆಗಳು, ಉಡುಗೊರೆಗಳಿಂದ ಅಲಂಕೃತಗೊಂಡಿದ್ದ ಕ್ರಿಸ್‌ಮಸ್ ಟ್ರೀಗಳು ಗಮನಸೆಳೆದವು. ದಿನವಿಡೀ ಪ್ರಾರ್ಥನೆ, ಬೈಬಲ್ ಪಠಣ, ಏಸುವಿನ ಮಹಿಮೆ ಸಾರುವ ಗೀತೆಗಳ ಗಾಯನ ನಡೆದವು.
ಹಬ್ಬದ ಹಿನ್ನೆಲೆಯಲ್ಲಿ ಚರ್ಚ್‌ಗಳು ಮಾತ್ರವಲ್ಲದೆ ಮಾಲ್‌ಗಳು ಸಹ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿದ್ದವು. ಆವರಣದಲ್ಲ ಬೃಹತ್ ಕ್ರಿಸ್‌ಮಸ್ ಟ್ರೀಗಳನ್ನು ಇಡಲಾಗಿತ್ತು. ಸಾಂತಾಕ್ಲಾಸ್ ಪ್ರತಿರೂಪಗಳು ಗಮನಸೆಳೆದವು. ಕೆಲ ಮಳಿಗೆಗಳ ಮುಂಭಾಗದಲ್ಲಿ ಸಾಂತಾಕ್ಲಾಷ್ ವೇಷಧಾರಿ ಪುಟ್ಟ ಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಅಕರ್ಷಕ ಕೇಕ್‌ಗಳು

ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಅಂಗವಾಗಿ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಕೇಕ್ ಶೋಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಕೇಕ್ ಪ್ರದರ್ಶನ ವೀಕ್ಷಿಸುವುದರ ಜತೆಗೆ ರುಚಿಕರ ಕೇಕ್‌ಗಳನ್ನು ಸವಿದರು.

ಅತಿಥಿ ಸತ್ಕಾರ

ಕ್ರಿಸ್‌ಮಸ್ ಹಿನ್ನೆಲೆ ಕ್ರೈಸ್ತರ ಮನೆಗಳಲ್ಲಿ ಚಕ್ಕುಲಿ, ಕರ್ಜಿಕಾಯಿ, ಶಂಕರಪೋಳಿ ಸೇರಿ ವೈವಿಧ್ಯಮಯ ತಿಂಡಿತಿನಿಸು ಹಾಗೂ ವಿಶೇಷ ಖಾದ್ಯಗಳನ್ನು ತಯಾರಿಸಿ, ಬಂಧುಮಿತ್ರರನ್ನು ಆಹ್ವಾನಿಸಿ ಭರ್ಜರಿ ಭೋಜನ ನೀಡುವ ಮೂಲಕ ಅತಿಥಿ ಸತ್ಕಾರ ಮಾಡಿ ಹಬ್ಬವನ್ನು ಸಂಭ್ರಮಿಸಿದರು.