ವಿಜಯವಾಣಿ ಸುದ್ದಿಜಾಲ ವಿಜಯಪುರ
ಕೃಷ್ಣಾ ನದಿಯ 40 ಟಿಎಂಸಿ ಅಡಿ ಹೆಚ್ಚುವರಿ ಪ್ರವಾಹದ ನೀರನ್ನು ಮಹಾರಾಷ್ಟ್ರದ ಭೀಮಾ ನದಿಗೆ ತಿರುಗಿಸುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ ಯೋಜನೆ ಕೈಗೆತ್ತಿಕೊಂಡಿದೆ ಎಂಬ ಆ ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿಕೆಗೆ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೃಷ್ಣಾ ನದಿಯ ಹೆಚ್ಚುವರಿ ಪ್ರವಾಹದ ನೀರನ್ನು ಮಹಾಬಳೇಶ್ವರ ಸಮೀಪದಿಂದ ಭೀಮಾ ನದಿಯ ಉಜ್ಜನಿ ಜಲಾಶಯಕ್ಕೆ ತಿರುಗಿಸಿ, ಮರಾಠವಾಡದ ಎರಡು ಜಿಲ್ಲೆಗಳು ಸೇರಿ ಸಾಂಗ್ಲಿ ಮತ್ತು ಸೋಲಾಪುರ ಜಿಲ್ಲಾ ಪ್ರದೇಶಗಳಿಗೆ ಬಳಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ಮುಂದಾಗಿರುವುದು ಕರ್ನಾಟಕದ ಹಿತಾಸಕ್ತಿಗೆ ಧಕ್ಕೆ ತರುವ ಆತಂಕ ಮೂಡಿಸಿದೆ ಎಂದು ಸಚಿವರು ಆಕ್ರೋಶ ಹೊರಹಾಕಿದ್ದಾರೆ.
ಮಹಾರಾಷ್ಟ್ರ ಸಿಎಂ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಆಘಾತಕಾರಿ ಸಂಗತಿ ಹೊರಹಾಕಿರುವ ಕುರಿತು ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು ವಿಡಿಯೋ ತುಣುಕು ಪ್ರದರ್ಶಿಸಿ ಅಸಮಾಧಾನ ಹೊರಹಾಕಿದರು. ಮಹಾರಾಷ್ಟ್ರ ಸರ್ಕಾರವು 2026ರ ಜುಲೈನಲ್ಲಿ ಯೋಜನೆಯ ವಿಸõತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ರೂ.24 ಕೋಟಿ ಮಂಜೂರು ಮಾಡಿದ್ದು, ಸುಮಾರು 84 ಕಿ.ಮೀ. ಉದ್ದದ ಮಾರ್ಗದಲ್ಲಿ ಭೂವೈಜ್ಞಾನಿಕ ಸಮೀಕ್ಷೆ ನಡೆಸುವ ಸಿದ್ಧತೆ ನಡೆದಿದೆ. 2026ರ ಅಂತ್ಯದ ವೇಳೆಗೆ ಡಿಪಿಆರ್ ಸಿದ್ಧವಾಗುವ ನಿರೀಕ್ಷೆಯಿದ್ದು, ಯೋಜನೆಗೆ ಅಂದಾಜು ರೂ.19 ಸಾವಿರ ಕೋಟಿ ವೆಚ್ಚವಾಗಲಿದೆ. ಮಾತ್ರವಲ್ಲ ವಿಶ್ವ ಸಂಸ್ಥೆಯಿಂದ ನೆರವು ಕೂಡ ಸಿಕ್ಕಿದೆ ಎಂಬ ಮಾಹಿತಿ ಲಭಿಸಿದೆ ಎಂದು ಎಂಬಿಪಿ ಹೇಳಿದರು.
ಕೆಡಬ್ಲು್ಯಡಿಟಿ-2 ತೀರ್ಪಿನ ಉಲ್ಲಂಘನೆ: ಕೃಷ್ಣಾ ಜಲವಿವಾದ ನ್ಯಾಯಮಂಡಳಿ-2 (ಕೆಡಬ್ಲು್ಯಡಿಟಿ-2) ತೀರ್ಪಿನ ಪ್ರಕಾರ, ಶೇ.65ರ ಅವಲಂಬನೀಯತೆ ಆಧಾರದ ಮೇಲೆ 2,130 ಟಿಎಂಸಿಗಿಂತ ಹೆಚ್ಚುವರಿಯಾಗಿ ಲಭ್ಯವಾಗುವ 448 ಟಿಎಂಸಿ ನೀರನ್ನು ಜಲಾನಯನ ಪ್ರದೇಶದ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಮಹಾರಾಷ್ಟ್ರಕ್ಕೆ 81 ಟಿಎಂಸಿ, ಕರ್ನಾಟಕಕ್ಕೆ 173 ಟಿಎಂಸಿ ಹಾಗೂ ಅವಿಭಜಿತ ಆಂಧ್ರಪ್ರದೇಶಕ್ಕೆ 194 ಟಿಎಂಸಿ ನೀರು ನಿಗದಿಪಡಿಸಲಾಗಿದೆ. ನ್ಯಾಯಮಂಡಳಿಯ ತೀರ್ಪಿನ 16ನೇ ಕಲಂ ಪ್ರಕಾರ, 2050ರ ಮೇ 31ರ ನಂತರ ಸಮರ್ಥ ಪ್ರಾಧಿಕಾರ ಅಥವಾ ನ್ಯಾಯಮಂಡಳಿ ತೀರ್ಪನ್ನು ಪರಿಶೀಲನೆ ಅಥವಾ ಪರಿಷ್ಕರಣೆಗೆ ಒಳಪಡಿಸಬಹುದಾಗಿದೆ.
ಅಲ್ಲಿಯವರೆಗೆ 2,578 ಟಿಎಂಸಿಗಿಂತ ಹೆಚ್ಚುವರಿಯಾಗಿ ಲಭ್ಯವಾಗುವ ನೀರನ್ನು ಬಳಸಿಕೊಳ್ಳಲು ಆಂಧ್ರಪ್ರದೇಶಕ್ಕೆ ಅವಕಾಶ ನೀಡಲಾಗಿದೆಯಾದರೂ, ಆ ನೀರಿನ ಬಳಕೆಯ ಮೇಲೆ ಶಾಶ್ವತ ಹಕ್ಕು ನೀಡಿಲ್ಲ. ಹೀಗಾಗಿ 2,578 ಟಿಎಂಸಿಗಿಂತ ಹೆಚ್ಚುವರಿಯಾಗಿ ಲಭ್ಯವಾಗುವ ನೀರಿನ ಮೇಲೆ ಯಾವುದೇ ರಾಜ್ಯವು ಶಾಶ್ವತ ಹಕ್ಕು ಸ್ಥಾಪಿಸುವ ರೀತಿಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಅವಕಾಶವಿಲ್ಲ ಎಂದು ಎಂ.ಬಿ. ಪಾಟೀಲರು ಆಕ್ಷೇಪಿಸಿದರು.
ನ್ಯಾಯಮಂಡಳಿ ವಿರೋಧ: ಈ ಮೊದಲು ಮಹಾರಾಷ್ಟ್ರ ಸರ್ಕಾರವು ಕೃಷ್ಣಾ-ಭೀಮಾ ಸ್ಥಿರೀಕರಣ ಯೋಜನೆಯಡಿ ಕೃಷ್ಣಾ ಮೇಲ್ದಂಡೆಯ ಉಪಜಲಾನಯನ ಪ್ರದೇಶದಿಂದ (ಕೆ-1) ಭೀಮಾ ಉಪಜಲಾನಯನ ಪ್ರದೇಶಕ್ಕೆ (ಕೆ-5) ಸುಮಾರು 35 ಟಿಎಂಸಿ ನೀರನ್ನು ವರ್ಗಾಯಿಸುವ ಪ್ರಸ್ತಾವನೆಯನ್ನು ಕೆಡಬ್ಲು್ಯಡಿಟಿ-2 ನ್ಯಾಯಮಂಡಳಿಯ ಮುಂದೆ ಮಂಡಿಸಿತ್ತು. ಆದರೆ, ಕೆ-1ರಿಂದ ಕೆ-5ಕ್ಕೆ ದೀರ್ಘದೂರದ ಅಂತರ್ ಜಲಾನಯನ ನೀರು ವರ್ಗಾವಣೆಗೆ ಅವಕಾಶ ನೀಡಿದರೆ ಕೆ-1 ಉಪಜಲಾನಯನ ಪ್ರದೇಶದಲ್ಲಿನ ನೀರಿನ ಹರಿವು ಮತ್ತು ಬಳಕೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂಬ ಕಾರಣ ನೀಡಿ ನ್ಯಾಯಮಂಡಳಿ ಈ ಪ್ರಸ್ತಾವನೆಗೆ ಅನುಮತಿ ನೀಡಲು ನಿರಾಕರಿಸಿತ್ತು. ಈಗ ಮತ್ತೆ ಇದೇ ರೀತಿಯ ನೀರು ವರ್ಗಾವಣೆ ಯೋಜನೆಯನ್ನು ಮಹಾರಾಷ್ಟ್ರ ಸರ್ಕಾರ ಕೈಗೆತ್ತಿಕೊಳ್ಳುತ್ತಿರುವುದು ನ್ಯಾಯಮಂಡಳಿಯ ನಿಲುವಿಗೆ ವಿರುದ್ಧವಾಗಿದೆ. ಅಲ್ಲದೆ, ಕೆಡಬ್ಲು್ಯಡಿಟಿ-2 ತೀರ್ಪು ಇನ್ನೂ ಅಧಿಕೃತವಾಗಿ ಗೆಜೆಟ್ನಲ್ಲಿ ಪ್ರಕಟವಾಗಿಲ್ಲ. ಹೀಗಿರುವಾಗ ತೀರ್ಪಿನ ವ್ಯಾಪ್ತಿಗೆ ಒಳಪಡದ ಇಂತಹ ಯೋಜನೆಯನ್ನು ಕೈಗೆತ್ತಿಕೊಳ್ಳುವುದು ಕಾನೂನುಬದ್ಧವೇ ಎಂಬ ಪ್ರಶ್ನೆಯೂ ಉದ್ಭವಿಸಿದೆ ಎಂದರು.
ಯಾವುದೇ ಕಾರಣಕ್ಕೂ ಈ ಯೋಜನೆ ಕಾರ್ಯಗತವಾಗಲು ಬಿಡಲ್ಲ. ಶೀಘ್ರದಲ್ಲೇ ಸರ್ವ ಪಕ್ಷಗಳ ಸಭೆ ಕರೆಯಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಕಾನೂನು ತಜ್ಞರ ಜೊತೆ ರ್ಚಚಿಸಿ ಕೇಂದ್ರ ಸರ್ಕಾರಕ್ಕೆ ನಿಯೋಗ ಕೊಂಡೊಯ್ಯುವ ಬಗ್ಗೆ ರ್ಚಚಿಸುವುದಾಗಿ ಎಂಬಿಪಿ ವಿವರಿಸಿದರು.
ಕೃಷ್ಣಾ ಮೇಲ್ದಂಡೆ ಉಪಜಲಾನಯನ ಪ್ರದೇಶದಲ್ಲಿ ಇಂತಹ ನಿರ್ಮಾಣ ಕಾಮಗಾರಿಗಳು ಮತ್ತು ನೀರು ವರ್ಗಾವಣೆ ಯೋಜನೆಗಳು ಜಾರಿಯಾದರೆ ಆಲಮಟ್ಟಿ ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದರಿಂದ ಕರ್ನಾಟಕ ಮಾತ್ರವಲ್ಲದೆ ಕೃಷ್ಣಾ ನದಿಯ ಕೆಳಹಂತದ ರಾಜ್ಯಗಳ ನೀರಿನ ಹಿತಾಸಕ್ತಿಗೂ ಧಕ್ಕೆಯಾಗಲಿದೆ. ಒಂದೆಡೆ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಿ ಕರ್ನಾಟಕಕ್ಕೆ ಹಂಚಿಕೆಯಾದ ನೀರನ್ನು ಬಳಸಲು ಅವಕಾಶ ಸಿಗುತ್ತಿಲ್ಲ. ಅಂಥದರಲ್ಲಿ ಮಹಾರಾಷ್ಟ್ರದ ಈ ಯೋಜನೆಗೆ ಅವಕಾಶ ಸಿಕ್ಕಿದ್ದು ಹೇಗೆ? ಎಂಬ ಪ್ರಶ್ನೆ ಎದುರಾಗಿದೆ ಎಂದರು.
ಯೋಜನೆಗೆ ವಿಶ್ವಬ್ಯಾಂಕ್ ಆರ್ಥಿಕ ನೆರವು ನೀಡುತ್ತಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿರುವುದು ಮತ್ತೊಂದು ಮಹತ್ವದ ಪ್ರಶ್ನೆ ಹುಟ್ಟುಹಾಕಿದೆ. ವಿಶ್ವಬ್ಯಾಂಕ್ನಿಂದ ಇಂತಹ ಯೋಜನೆಗೆ ಹಣಕಾಸಿನ ನೆರವು ದೊರೆಯಬೇಕಾದರೆ ಭಾರತ ಸರ್ಕಾರದ ಸಹಭಾಗಿತ್ವ ಮತ್ತು ಅಗತ್ಯ ಅನುಮತಿಗಳು ಇರಬೇಕಾಗುತ್ತದೆ. ಹಾಗಾದರೆ ಕೇಂದ್ರ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಿದೆಯೇ? ಹೂಡಿಕೆ ಅನುಮತಿಯನ್ನು ನೀಡಲಾಗಿದೆಯೇ? ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ.
ವಿಪರ್ಯಾಸವೆಂದರೆ, ಕೆಡಬ್ಲು್ಯಡಿಟಿ-2 ತೀರ್ಪು ಅಧಿಸೂಚನೆಯಾಗಿಲ್ಲ ಎಂಬ ಕಾರಣ ನೀಡಿ ಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಡಿಪಿಆರ್ ಅನ್ನು ಕೇಂದ್ರ ಸರ್ಕಾರ ಹಿಂದಿರುಗಿಸುತ್ತಿದೆ. ಕರ್ನಾಟಕದ ಯೋಜನೆಗೆ ತೀರ್ಪಿನ ಅಧಿಸೂಚನೆಯ ನೆಪವೊಡ್ಡಿ ತಡೆ ಉಂಟು ಮಾಡುತ್ತಿರುವಾಗ, ಕೆಡಬ್ಲು್ಯಡಿಟಿ-2 ವ್ಯಾಪ್ತಿಯಲ್ಲಿ ಸ್ಪಷ್ಟವಾಗಿ ಅನುಮೋದನೆ ಪಡೆಯದ ಮಹಾರಾಷ್ಟ್ರದ ಯೋಜನೆಗೆ ವಿಶ್ವಬ್ಯಾಂಕ್ ನೆರವು ದೊರೆಯುತ್ತಿರುವುದಾದರೂ ಹೇಗೆಎಂಬ ಪ್ರಶ್ನೆ ಕರ್ನಾಟಕದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ ಎಂದರು.