- 12 ಮಂದಿ ಮೇಲಿನ ಪೋಕ್ಸೊ ಕೇಸ್ ರದ್ದು
- ಯುವತಿ ಬರೆದಿದ್ದ ಲವ್ಲೆಟರ್ ಪ್ರಮುಖ ಸಾಕ್ಷಿ
ಬೆಂಗಳೂರು:
ಅಪ್ರಾಪ್ತೆಯನ್ನು ಅಪಹರಿಸಿ, ಬಲವಂತದ ಮದುವೆಯಾಗಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ದಾಖಲಾಗಿದ್ದ ಪೋಕ್ಸೊ ಪ್ರಕರಣದಲ್ಲಿ, ಸಂತ್ರಸ್ತೆ ತಾನೇ ಬರೆದಿದ್ದ ಪ್ರೇಮಪತ್ರವನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿ 12 ಆರೋಪಿಗಳನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಶಿವಮೊಗ್ಗದ ಮಹಮ್ಮದ್ ಇಬ್ರಾಹಿಂ ಸೇರಿ 10 ಮಂದಿ ಕುಟುಂಬಸ್ಥರು ಮತ್ತು ಮದುವೆ ನಡೆಸಿಕೊಟ್ಟ ಒಬ್ಬರು ಖಾಜಿಗಳನ್ನು ಪೋಕ್ಸೊ ಪ್ರಕರಣದಲ್ಲಿ ಆರೋಪಮುಕ್ತಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ದೂರುದಾರಳಾದ ಯುವತಿ ಮತ್ತು ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿ ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ್ ಮತ್ತು ಬಿ. ಪ್ರಮೋದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಆದೇಶ ನೀಡಿದೆ.
ಕೋರ್ಟ್ಗೆ ಸಲ್ಲಿಕೆಯಾಗಿದ್ದ ಪ್ರೇಮಪತ್ರಗಳನ್ನು ತಾನೇ ಬರೆದಿದ್ದೆ ಎಂದು ಯುವತಿ ಒಪ್ಪಿಕೊಂಡಿದ್ದಳು. ಆ ಪತ್ರಗಳಲ್ಲಿ ಆಕೆ ಮಹಮ್ಮದ್ ಇಬ್ರಾಹಿಂನನ್ನು ತೀವ್ರವಾಗಿ ಪ್ರೀತಿಸುತ್ತಿರುವುದು ಮತ್ತು ಪಾಲಕರ ರ್ನಿಬಂಧಗಳಿಂದಾಗಿ ತನ್ನ ಸ್ವಂತ ನಿರ್ಧಾರದ ಮೇಲೆಯೇ ಆತನೊಂದಿಗೆ ತೆರಳಿ ಮದುವೆಯಾಗಿದ್ದಾಗಿ ಬರೆದುಕೊಂಡಿದ್ದಳು. ಈ ಪತ್ರವನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿದ ನ್ಯಾಯಪೀಠ, ಇದು ಬಲವಂತದ ಅಪಹರಣವಲ್ಲ. ಬದಲಿಗೆ ಪ್ರೇಮಿಗಳಿಬ್ಬರ ಸ್ವಇಚ್ಛೆಯ ಪಲಾಯನದ ಪ್ರಕರಣ ಎಂದು ಕರೆದಿದೆ.
ಸಂತ್ರಸ್ತೆಯು ಅಪ್ರಾತ್ತೆ ಎಂದು ವಾದಿಸಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಆಕೆಯ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯ ಜೆರಾಕ್ಸ್ ಪ್ರತಿಯನ್ನು ಕೋರ್ಟ್ ಮಾನ್ಯ ಮಾಡಲಿಲ್ಲ. ಬಾಲನ್ಯಾಯ ಕಾಯ್ದೆಯ ಸೆಕ್ಷನ್ 94ರ ಅಡಿಯಲ್ಲಿ ಕಡ್ಡಾಯವಾಗಿರುವ ಪ್ರಾಥಮಿಕ ಶಾಲೆಯ ಮೂಲ ದಾಖಲಾತಿ ಅಥವಾ ಜನನ ಪ್ರಮಾಣಪತ್ರವನ್ನು ತನಿಖಾಧಿಕಾರಿ ಸಂಗ್ರಹಿಸಿರಲಿಲ್ಲ. ಆದ್ದರಿಂದ, ಪೋಕ್ಸೊ ಕಾಯ್ದೆಯ ಅನ್ವಯವನ್ನೇ ನ್ಯಾಯಪೀಠ ನಿರಾಕರಿಸಿದೆ.
ℹ️
ಕೇಕ್ ನೀಡಿ ಅಪಹರಣದ ಕಥೆ
2020ರ ಮೇ 7ರಂದು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಯುವತಿಯ ನಾಪತ್ತೆ ಬಗ್ಗೆ ದೂರು ದಾಖಲಾಗಿತ್ತು. ಜೂ.14ರಂದು ಆಕೆಯನ್ನು ಪತ್ತೆಹಚ್ಚಿದಾಗ, ತನಗೆ ಮತ್ತು ಬರುವ ಕೇಕ್ ನೀಡಿ ಅಪಹರಿಸಿ, ಬಲವಂತವಾಗಿ ಮದುವೆ ಮಾಡಿ ಸಿಕಂದರಾಬಾದ್ ಮತ್ತು ಬೆಂಗಳೂರಿನಲ್ಲಿ ಕೂಡಿಹಾಕಿ ದೌರ್ಜನ್ಯ ಎಸಗಲಾಗಿದೆ ಎಂದು ಆಕೆ ಹೇಳಿಕೆ ನೀಡಿದ್ದಳು. ಇದರ ಆಧಾರದಲ್ಲಿ ಇಬ್ರಾಹಿಂ ಸೇರಿ 12 ಮಂದಿ ವಿರುದ್ಧ ಪೋಕ್ಸೋ ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿತ್ತು.
ವಾದ ನಿರಾಕರಿಸಿದ ಪೀಠ:
ಯುವತಿಯನ್ನು ಬಲವಂತವಾಗಿ ಕರೆದೊಯ್ಯಲಾಗಿದೆ ಎಂಬ ವಾದವನ್ನು ನ್ಯಾಯಪೀಠ ತಳ್ಳಿಹಾಕಿದೆ. ಕೋವಿಡ್- ಲಾಕ್ಡೌನ್ ವೇಳೆಯಲ್ಲಿ ಶಿವಮೊಗ್ಗದಿಂದ ಸಿಕಂದರಾಬಾದ್ ಮತ್ತು ಬೆಂಗಳೂರಿಗೆ ಒಂದು ತಿಂಗಳಿಗೂ ಹೆಚ್ಚು ಕಾಲ ಪ್ರಯಾಣಿಸುವಾಗ ಯುವತಿ ಎಲ್ಲಿಯೂ ಸಹಾಯ ಕೋರಲಿಲ್ಲ. ತಂದೆಗೆ ಹಲವು ಬಾರಿ ಫೋನ್ ಮಾಡಿ ಮಾತನಾಡಿದ್ದರೂ ದೂರು ನೀಡಿರಲಿಲ್ಲ. ವೈದ್ಯಕಿಯ ಪರೀಕ್ಷೆಯಲ್ಲೂ ಲೈಂಗಿಕ ದೌರ್ಜನ್ಯ ನಡೆದಿರುವುದಕ್ಕೆ ಆಧಾರಗಳಿರಲಿಲ್ಲ ಎಂಬುದನ್ನು ಪರಿಗಣಿಸಿ ವಿಚಾರಣಾ ನ್ಯಾಯಾಲಯದ ಆದೇಶ ಎತ್ತಿಹಿಡಿದಿದೆ. High court