ಸುರಪುರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಜಾಸೇವಾ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಚಾಲನೆ ನೀಡಿದರು. ಶಾಸಕ ರಾಜಾ ವೇಣುಗೋಪಾಲ ನಾಯಕ, ಮದ್ಯಪಾನ ಸಂಯಮ ಮಂಡಳಿ ರಾಜ್ಯಾಧ್ಯಕ್ಷ ಶರಣಪ್ಪ ಸಲಾದಪುರ, ಡಿಸಿ ರಾಹುಲ್ ಪಾಂಡ್ವೆ, ಎಸ್‌ಪಿ ಪೃಥ್ವಿಕ್ ಶಂಕರ್ ಇತರರಿದ್ದರು. 
ರಾಜ್ಯ

ಜನರ ಸ್ವಾಭಿಮಾನ ಬದುಕು ಧ್ಯೇಯ

ಸುರಪುರ: ಸಮಾಜದ ಕಟ್ಟಕಡೆಯ ಬಡ ಹಾಗೂ ಸಾಮಾನ್ಯ ಜನರಿಗೆ ಸ್ವಾಭಿಮಾನದ ಬದುಕು ರೂಪಿಸಿಕೊಡಲು ರಾಜ್ಯ ಸರ್ಕಾರ ಸದಾ ಸಿದ್ಧವಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಹೇಳಿದರು.
ತಿಮ್ಮಾಪುರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಪ್ರಜಾಸೇವಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೊಸ ಕಲ್ಪನೆಯ ಪ್ರಜಾಸೇವಾ ಇಲಾಖೆಯನ್ನೇ ಹುಟ್ಟು ಹಾಕಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದ ಅಭಿಯಾನದಡಿ ನಿರಂತರ ಕೆಲಸ ನಡೆಯಲಿದೆ ಎಂದರು.
ರಾಜ್ಯದ ಎಲ್ಲ ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿ ಮೊದಲ ಮತ್ತು ಮೂರನೇ ಶನಿವಾರ ಸಂಬಧಿತ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರಜಾಸೇವಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಜಿಲ್ಲೆಯ ಸಾರ್ವಜನಿಕರು ಸಹ ನಿಗದಿತ ತಾಲೂಕು ಕೇಂದ್ರಗಳಲ್ಲಿ ತಮ್ಮ ಸಮಸ್ಯೆಗಳ ಕುರಿತ ಅರ್ಜಿ ಸಲ್ಲಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇತರ ಶನಿವಾರಗಳಂದು ಹೋಬಳಿ ಮಟ್ಟದಲ್ಲೂ ಸಮಸ್ಯೆಗಳಿಗೆ ಪರಿಹಾರ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿ, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಕಾಳಜಿಯಿಂದ ರಾಜ್ಯದಾದ್ಯಂತ ಪ್ರಜಾಸೇವಾ ಇಲಾಖೆ ಮೂಲಕ ಜನರ ಅಹವಾಲುಗಳಿಗೆ ಸ್ಪಂದಿಸಲಾಗುವುದು ಎಂದು ಹೇಳಿದರು.
ಜನರು ತಮ್ಮ ಕುಂದುಕೊರತೆಗಳು ಏನೇ ಇದ್ದರೂ ಪ್ರತಿ ಶನಿವಾರ ನಡೆಯುವ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು. ಆನ್‌ಲೈನ್‌ನಲ್ಲೂ ಅರ್ಜಿ ಸಲ್ಲಿಸಲು ಅವಕಾಶವಿದೆ. ರಾಜ್ಯದ ಸಚಿವ-ಶಾಸಕರು ಜನರೊಂದಿಗೆ ಸದಾ ಇರಲಿದ್ದು, ಬಡವರ ಏಳಿಗೆಯೇ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಸುರಪುರ ಕ್ಷೇತ್ರದಲ್ಲಿ ಜಿಲ್ಲೆಯ ಪ್ರಥಮ ಅಭಿಯಾನ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದರು.
ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ್ ಯಾದವ, ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ, ಸಹಾಯಕ ಆಯುಕ್ತ ಶ್ರೀಧರ್ ಗೋಟುರ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಕಾಶ ಗುತ್ತೇದಾರ್ ಇತರರಿದ್ದರು.

ಉತ್ತಮ ಸ್ಪಂದನೆ

ಸುರಪುರದಲ್ಲಿ ಶನಿವಾರ ನಡೆದ ಪ್ರಜಾಸೇವಾ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ತಾಲೂಕಿನ ವಿವಿಧ ಹಳ್ಳಿಗಳಿಂದ ನೂರಾರು ಜನರು ಆಗಮಿಸಿ ಸಚಿವರಿಗೆ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಿ ಸ್ಥಳದಲ್ಲಿಯೇ ಪರಿಹಾರ ಕಂಡುಕೊಂಡರು. ಮುಖ್ಯವಾಗಿ ಗ್ರಾಮಗಳಲ್ಲಿ ರಸ್ತೆ, ಹೊಲಗಳಿಗೆ ದಾರಿ, ವಿದ್ಯುತ್, ನೀರು, ಪಡಿತರ ಕಾರ್ಡ್ ಹೀಗೆ ವಿವಿಧ ಬೇಡಿಕೆಗಳನ್ನು ಮಂಡಿಸಿದರು. ಪ್ರತಿ ಅರ್ಜಿ ಕೂಲಂಕಷ ಪರಿಶೀಲಿಸಿದ ಸಚಿವರು, ಅಧಿಕಾರಿಗಳಿಗೆ ಕೂಡಲೇ ಸ್ಪಂದಿಸುವಂತೆ ಸೂಚಿಸಿದರು.

೨೫೯ ಅರ್ಜಿ ನೋಂದಣಿ

ಪ್ರಜಾಸೇವೆ ಸಭೆಯಲ್ಲಿ ವಿವಿಧ ಇಲಾಖೆಗೆ ಸಂಬಂಧಿಸಿದ ೨೫೯ ಅರ್ಜಿ ಸಲ್ಲಿಕೆಯಾಗಿವೆ. ೧೯ ಅರ್ಜಿ ವಿಲೇವಾರಿ ಮಾಡಿದ್ದು, ೨೪೦ ಅರ್ಜಿಗಳನ್ನು ಬುಧವಾರ ತಹಸೀಲ್ದಾರ್, ಎಸಿ, ಡಿಸಿ ಹಂತದಲ್ಲಿ ಪರಿಶೀಲಿಸಿ ವಿಲೇವಾರಿ ಮಾಡುವಂತೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ನಿರ್ದೇಶನ ನೀಡಿದರು. ಕಂದಾಯ ಇಲಾಖೆ ೬೫, ವಸತಿ ೩೪, ಗ್ರಾಮೀಣಾಭಿವೃದ್ಧಿ ೫೩, ಆಹಾರ ೧೩, ನಗರಾಭಿವೃದ್ಧಿ ೨೩, ಇಂಧನ ೭, ಪಂಚಾಯತ್ ರಾಜ್ ಇಂಜಿನಿಯರಿಂಗ್ ೩೧, ಕೃಷಿ ೩, ಮಹಿಳಾ ಮತ್ತು ಮಕ್ಕಳ ಕಲ್ಯಾಣ ೧೩, ಜಲಸಂಪನ್ಮೂಲ ೫, ಸಾರಿಗೆ ೫, ಸಮಾಜ ಕಲ್ಯಾಣ ೪, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ೬ ಅರ್ಜಿ ಸಲ್ಲಿಕೆಯಾಗಿವೆ.
"

ರಾಜ್ಯ ಸರ್ಕಾರ ಜನಸ್ನೇಹಿಯಾಗಿದೆ. ಜನರು ಮತ್ತು ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮುಖ್ಯ ಉದ್ದೇಶ ಈ ಅಭಿಯಾನ ಹೊಂದಿದೆ. ಚುನಾವಣೆಗೆ ಮುನ್ನ ನೀಡಿದ ಭರಸವಸೆಯಂತೆ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ. ಹಾಲಿ ಸಿಎಂ ಡಿ.ಕೆ. ಶಿವಕುಮಾರ್ ಈ ಹೊಸ ಇಲಾಖೆ ಹುಟ್ಟು ಹಾಕಿ ಅಭಿಯಾನ ಆರಂಭಿಸಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶ ಇದರದು. | ಡಾ.ಶರಣಪ್ರಕಾಶ ಪಾಟೀಲ್ಜಿಲ್ಲಾ ಉಸ್ತುವಾರಿ ಸಚಿವ