ಮದ್ದೂರು ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಉದ್ಘಾಟಿಸಿದರು. ವಿನಯ್‌ಕುಮಾರ್, ಡಾ.ಬಿ.ಕೃಷ್ಣ, ಶಿವನಂಜಯ್ಯ,ಡಾ.ಎಂ.ಮಹೇಶ ಚಿಕ್ಕಲ್ಲೂರು ಡಿ.ಪಿ.ಸ್ವಾಮಿ ಇದ್ದರು. 
ರಾಜ್ಯ

ಜ್ಞಾನ ಸಂಪರ್ಕಕ್ಕೆ ಮನೆಗೊಂದು ಗ್ರಂಥಾಲಯ ಸೇತುವೆ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ
  • ಟೌನ್‌ಕ್ಲಬ್ ಆವರಣ
ಮದ್ದೂರು; ರಾಜ್ಯಾದ್ಯಂತ ಒಂದು ಲಕ್ಷ ಮನೆಗಳಲ್ಲಿ ಮನೆ ಮನೆ ಗ್ರಂಥಾಲಯ ಪ್ರಾರಂಭಿಸಿ ಜ್ಞಾನದ ಸಂಕೇತವನ್ನು ಪ್ರಚರಿಸಲು ಪ್ರಾಧಿಕಾರ ಮುಂದಾಗಿದ್ದು, ಅದರಲ್ಲೂ ಗ್ರಾಮೀಣ ಭಾಗಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ತಿಳಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರ, ಜನಪರ ಸಾಹಿತ್ಯ ಪರಿಷತ್, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಹಾಗೂ ಜಿಲ್ಲಾ ಜಾಗೃತಿ ಸಮಿತಿಯಿಂದ ಭಾನುವಾರ ನಗರದ ಟೌನ್‌ಕ್ಲಬ್ ಆವರಣದಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಮತ್ತು ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮನೆಗೊಂದು ಗ್ರಂಥಾಲಯ ಜ್ಞಾನ ಸಂಪರ್ಕಕ್ಕೆ ಸೇತುವಾಗಿದ್ದು, ಪುಸ್ತಕಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ಮೂಲಕ ಜ್ಞಾನಭಂಡಾರವನ್ನು ವೃದ್ಧಿ ಮಾಡಿಕೊಳ್ಳಬಹುದಾಗಿದೆ ಎಂದರು.
ಸ್ವ ಅನುಭವ ಹಾಗೂ ಲೋಕಾನುಭವಗಳಿಂದ ಪ್ರತಿಭೆಯನ್ನು ಹೊರತರಲು ಸಾಧ್ಯವಾಗಿದ್ದು ಪ್ರತಿಭೆಯಿಂದ ಪ್ರತಿಜ್ಞೆಯನ್ನು ದಾಖಲಿಸಿ ಶಾಶ್ವತವಾಗಿ ಉಳಿಸಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಕುತಿಮ್ಮ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ವಿನಯ್‌ಕುಮಾರ್, ಮನೆಗೊಂದು ಗ್ರಂಥಾಲಯ ಮತ್ತು ಮನೆ ಮನೆ ಕವಿಗೋಷ್ಠಿ ಪ್ರಸ್ತುತ ದಿನಗಳಲ್ಲಿ ಅತ್ಯವಶ್ಯಕ. ಇಂದಿನ ಯುವಜನಾಂಗ ಮೊಬೈಲ್‌ಗೆ ದಾಸರಾಗುತ್ತಿರುವುದು ಆತಂಕಕಾರಿ ವಿಚಾರ. ಪಾಲಕರು ಮೊಬೈಲ್‌ಗಳನ್ನು ಬದಿಗೊತ್ತಿ ಪುಸ್ತಕಗಳನ್ನು ಹಿಡಿಯುವಂತಾದರೆ ಮಕ್ಕಳೂ ಅದನ್ನೇ ಅನುಸರಿಸಿ ಜ್ಞಾನದ ಭಂಡಾರವನ್ನು ಹೆಚ್ಚಿಸಿಕೊಳ್ಳಲಿದ್ದಾರೆ ಎಂದರು.
ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಡಾ.ಬಿ.ಕೃಷ್ಣ, ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತದ ಸಂಘದ ಅಧ್ಯಕ್ಷ ಶಿವನಂಜಯ್ಯ, ಜನಪರ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಂ.ಮಹೇಶ ಚಿಕ್ಕಲ್ಲೂರು ಮಾತನಾಡಿದರು. ಟೌನ್‌ಕ್ಲಬ್ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಮನೆಗೊಂದು ಗ್ರಂಥಾಲಯದ ಕೇಂದ್ರ ಮತ್ತು ಅದರ ಕರ ಪತ್ರಗಳನ್ನು ಕಾರ್ಯಕ್ರಮಕ್ಕೂ ಮುನ್ನ ಬಿಡುಗಡೆಗೊಳಿಸಲಾಯಿತು. ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವಿ.ಟಿ ರವಿಕುಮಾರ್, ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದ ಆಯೋಜಕಿ ಹಾಗೂ ಶಿಕ್ಷಕಿ ಚಿಕ್ಕಮ್ಮ, ಮುಖಂಡರಾದ ಕ್ರಷ್ಣ, ದೊರೆಸ್ವಾಮಿ, ನಾಗರಾಜು, ಕಬ್ಬಾರೆ ಶಂಕರ್ ಇತರರಿದ್ದರು.