ಹಾಗರಗುಂಡಗಿಯಲ್ಲಿ ನಿಮಾರ್ಣ ಹಂತದ ಕೆರೆಯನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಅರುಣಕುಮಾರ ಪಾಟೀಲ್ ಪರಿಶೀಲಿಸಿದರು. ರಾಜು ಕಾಂತಾ, ಸೋಮಶೇಖರ ಸಜ್ಜನ್, ಷಣ್ಮುಖಪ್ಪ ಸಿಬರಬಂಡಿ ಇತರರಿದ್ದರು.
- ಅರುಣಕುಮಾರ ಪಾಟೀಲ್ ಮಾಹಿತಿ
- ಹಾಗರಗುಂಡಗಿ ಗ್ರಾಮಕ್ಕೆ ಭೇಟಿ
ಅಫಜಲಪುರ: ಹಾಗರಗುಂಡಗಿ ಗ್ರಾಮದಲ್ಲಿ ಸುಮಾರು 11 ಕೋಟಿ ರೂ. ವೆಚ್ಚದಲ್ಲಿ 156 ಎಕರೆ ಪ್ರದೇಶದಲ್ಲಿ ನಿಮಾರ್ಣದ ಕೆರೆಯಿಂದ 282 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ್ ತಿಳಿಸಿದರು.
ಹಾಗರಗುಂಡಗಿಯಲ್ಲಿ ನಿರ್ಮಾಣ ಹಂತದ ಕೆರೆಯನ್ನು ಭಾನುವಾರ ವೀಕ್ಷಿಸಿದ ಅವರು, ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ. ಶೀಘ್ರದಲ್ಲಿ ಕೆರೆ ಲೋಕಾರ್ಪಣೆಗೊಳ್ಳಲಿದೆ. ಕಾಮಗಾರಿ ಪೂರ್ಣಗೊಂಡಿದ್ದಿ, ನೀರು ತುಂಬಿಸುವ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ. ಕೆರೆಯ ನೀರನ್ನು ಸಮರ್ಪಕವಾಗಿ ಸಂಗ್ರಹಿಸುವುದು ಮತ್ತು ಅಗತ್ಯ ಸಂದರ್ಭದಲ್ಲಿ ರೈತರಿಗೆ ನೀರು ಲಭ್ಯವಾಗುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಮುಖ್ಯವಾಗಿದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಮಳೆ ಆಧಾರಿತ ಕೃಷಿ ಲಾಭದಾಯಕವಾಗಿಲ್ಲ. ನೀರಾವರಿ ಸೌಲಭ್ಯ ವಿಸ್ತರಣೆಯಿಂದ ರೈತರು ಒಂದೇ ಬೆಳೆಗೆ ಸೀಮಿತವಾಗದೆ ವಿವಿಧ ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆ ಬೆಳೆದು ಆದಾಯ ಹೆಚ್ಚಿಸಿಕೊಳ್ಳಬಹುದು. ಕೆರೆಯಲ್ಲಿ ನೀರು ನಿಲ್ಲುವುದರಿಂದ ಅಂತರ್ಜಲ ಮರುಪೂರಣಕ್ಕೆ ಸಹಕಾರಿಯಾಗಿ ಬಾವಿ, ಕೊಳವೆ ಬಾವಿಗಳ ಸಂರಕ್ಷಣೆಯಾಗಲಿದೆ ಎಂದರು.
ಸಣ್ಣ ನೀರಾವರಿ ಇಲಾಖೆ ಎಇ ಸಿದ್ದಲಿಂಗಪ್ಪ ಗೌಂಡಿ ಮಾಹಿತಿ ನೀಡಿ, ಭೀಮಾ ನದಿಯಿಂದ 330 ಎಚ್ಪಿ ಸಾಮರ್ಥ್ಯದ ಎರಡು ಮೋಟಾರ್ಗಳ ಮೂಲಕ ಹಾಗರಗುಂಡಗಿ ಕೆರೆ ತುಂಬಿಸಲಾಗುತ್ತಿದೆ. ಕೆರೆ 61.73 ಎಂಸಿಎಫ್ ನೀರು ಶೇಖರಣೆ ಸಾಮರ್ಥ್ಯ ಹೊಂದಿದೆ. ಅಂತಿಮ ಹಂತದ ಕೆಲ ಸಣ್ಣಪುಟ್ಟ ಕೆಲಸಗಳಿದ್ದು, ವಾರದಲ್ಲಿ ಮುಗಿಯಲಿವೆ ಎಂದು ತಿಳಿಸಿದರು.
ಮಾಜಿ ಸಚಿವ ಎಸ್.ಕೆ.ಕಾಂತಾ, ಪ್ರಮುಖರಾದ ರಾಜು ಕಾಂತಾ, ಸೋಮಶೇಖರ ಸಜ್ಜನ್, ಷಣ್ಮುಖಪ್ಪ ಸಿಬರಬಂಡಿ, ಭೀಮಾಶಂಕರ ರಾಸಣಗಿ, ಚಂದ್ರಕಾಂತ ನಡಗಟ್ಟಿ, ಶರಣು ಮಂದ್ರಾಡ ಇತರರಿದ್ದರು.
ಪ್ರಾಯೋಗಿಕ ಪರೀಕ್ಷೆ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಸರಿಪಡಿಸಬೇಕು. ಕೆರೆಯ ಕಟ್ಟೆ, ನೀರು ಹರಿಯುವ ಮಾರ್ಗ, ಒಳಹರಿವು ಮತ್ತು ಹೊರಹರಿವು ವ್ಯವಸ್ಥೆಗಳನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು. ಭವಿಷ್ಯದಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.
— > ಅರುಣಕುಮಾರ ಪಾಟೀಲ್, ಅಧ್ಯಕ್ಷ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ