ಮೈಸೂರಿನಲ್ಲಿ ವಿಜಯವಾಣಿ ಕೃಷಿ ಮೇಳ
- ಸಾಂಸ್ಕೃತಿಕ ನಗರಿಯಲ್ಲಿ ಮೂರು ದಿನಗಳ ವಿಜಯವಾಣಿ ಕೃಷಿ ಮೇಳ
- ರಾಜ್ಯ ಮಟ್ಟದ ಕೃಷಿ ಮೇಳಕ್ಕೆ ಹರಿದುಬಂದ ಜನಸಾಗರ
- ಮೇಳ ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾ
ಮೈಸೂರು: ವಿಜಯವಾಣಿ ದಿನಪತ್ರಿಕೆಯಿಂದ ಈ ವರ್ಷ ಜಿಲ್ಲೆಯ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ರಾಜ್ಯ ಮಟ್ಟದ ವಿಜಯವಾಣಿ ಕೃಷಿ ಮೇಳಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆಗಳು ಲಭಿಸುತ್ತಿವೆ.
ಸಾಂಸ್ಕೃತಿಕ ನಗರಿಯಲ್ಲಿ ಮೊದಲ ದಿನವೇ ಅಕ್ಷರಶಃ ಕಳೆಗಟ್ಟಿದ್ದ ಕೃಷಿಮೇಳ, ರೈತರ ಪಾಲಿಗೆ ಜಾತ್ರೆಯಾಗಿ ಮಾರ್ಪಟ್ಟರೆ, ಜಾನಪದ ನೃತ್ಯ ವೈಭವ ಸಾಂಸ್ಕೃತಿಕ ಸಿರಿವಂತಿಕೆಯನ್ನು ತೆರೆದಿಟ್ಟಿತು. ರೈತರು ಮತ್ತು ರೈತರೇತರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಕೃಷಿ ಜಾತ್ರೆಗೆ ಜನರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಎರಡನೇ ದಿನವು ಸುಡುವ ಬಿಸಿಲಿನಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಿರುವುದು ಹಲವರ ಗಮನ ಸೆಳೆದಿದೆ.
ಸಮಗ್ರ ಮಾಹಿತಿ ಲಭ್ಯ
ಮೇಳದಲ್ಲಿ ಪ್ರತಿಷ್ಠಾಪಿಸಿರುವ ಬೆಳೆಗಳ ಪ್ರಾತ್ಯಕ್ಷಿಕೆಗಳು ಸೇರಿ 100ಕ್ಕೂ ಅಧಿಕ ಮಳೆಗೆಗಳು ಹೆಚ್ಚು ಗಮನ ಸೆಳೆಯುತ್ತಿವೆ. ಕೃಷಿ ವಿಭಾಗ, ಹವಾಮಾನ ಆಧಾರಿತ ಬೀಜ ಬಿತ್ತನೆ, ಭತ್ತ, ಜಲನಯನ,ಮಣ್ಣು, ಸಸ್ಯ ಸಂರಕ್ಷಣೆ, ರೇಷ್ಮೆ, ಎಣ್ಣೆಕಾಳು, ದ್ವಿದಳಧಾನ್ಯ, ಕೀಟ ಶಾಸ್ತ್ರ, ವಾಣಿಜ್ಯ ಬೆಳೆ, ಜೈವಿಕ ಗೊಬ್ಬರ ಮತ್ತು ಬೀಜ ತಾಂತ್ರಿಕತೆ ಪ್ರಾತ್ಯಕ್ಷಿಕೆ ಕೇಂದ್ರಗಳಲ್ಲಿ ಹೆಚ್ಚಿನ ಹಾಗೂ ಅಗತ್ಯ ಮಾಹಿತಿ ಕಲೆಹಾಕಬಹುದಾಗಿದೆ. ಇದರೊಟ್ಟಿಗೆ ತಳಿಯ ಹೆಸರು, ಬೆಳೆಯುವ ದಿನಗಳ ಅವಧಿ, ಇಳಿವರಿ, ಯಾವ ತಿಂಗಳಲ್ಲಿ ಬೀಜ ಬಿತ್ತನೆ ಮಾಡಿದರೆ ಉತ್ತಮ? ಹವಾಮಾನ ವೈಪರೀತ್ಯ ಸಮಸ್ಯೆಯಿಂದ ಬೆಳೆಯನ್ನು ಉಳಿಸಿಕೊಳ್ಳುವುದು ಹೇಗೆ? ಮತ್ತು ಕಳೆಯಿಂದ ಬೆಳೆ ರಕ್ಷಿಸಿಕೊಳ್ಳುವ ಬಗ್ಗೆ ಹೇಗೆ? ಎಂಬುದರ ಬಗ್ಗೆ ಮೇಳದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ.
ಸುಡುವ ಬಿಸಿಲಿನಲ್ಲೂ ಹಾಜರು
ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಕೃಷಿ ಮೇಳದ 2ನೇ ದಿನವಾದ ಶನಿವಾರ ಉರಿ ಬಿಸಿಲಿನ ನಡುವೆಯೂ ಜನಸಾಗರ ಹರಿದುಬಂದಿದೆ. ಕೃಷಿ ಮೇಳದಲ್ಲಿ ವಿವಿಧ ಇಲಾಖೆಗಳು ನೀಡಲಿರುವ ಸಮಗ್ರ ಮಾಹಿತಿಯನ್ನು ತಿಳಿಯಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು ಗಮನಾರ್ಹ. ಮಾವು, ಹಲಸು ಸೇರಿ ಹಣ್ಣಿನ ಗಿಡಗಳು, ಅಡಿಕೆ, ಎಳನೀರು ಸಿಪ್ಪೆ ಸುಲಿಯುವ ಮಳಿಗೆ, ಕೃಷಿ ಉತ್ಪನ್ನಗಳ ಪ್ರಾತ್ಯಕ್ಷಿಕೆ ಕೇಂದ್ರಗಳಿಗೆ ಜನರು ಭೇಟಿ ನೀಡುತ್ತಿದ್ದಾರೆ. ಕುಟುಂಬ ಸಮೇತ ತಂಡೋಪತಂಡವಾಗಿ ಕೈಯಲ್ಲಿ ಛತ್ರಿ ಹಿಡಿದು ಜನರು ಮೇಳವನ್ನು ವೀಕ್ಷಿಸಿದ್ದಾರೆ. ನಾಳೆ ಅಂದರೆ ಭಾನುವಾರ ಮೇಳಕ್ಕೆ ಅಂತಿಮ ತೆರೆ ಬೀಳಲಿದೆ.
ಮೇಳ ಉದ್ಘಾಟಿಸಿದ ವಿಜಯೇಂದ್ರ
ಇನ್ನು ಮೂರು ದಿನಗಳ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ನಾನು ನಾಡಿನ ರೈತರ ಪರವಾಗಿ ಸದಾ ಹೋರಾಟ ನಡೆಸುತ್ತೇನೆ. ರೈತರ ಸಮಸ್ಯೆಗಳ ಬಗೆಹರಿಸಲು ವಿಧಾನಸೌಧ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತೇನೆ. ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಕ್ಕರೆ ಬೆಳೆಯುವ ರೈತನಿಗೆ ಫಲ ಸಿಕ್ಕಂತೆ ಎಂದು ಹೇಳಿದರು.