ಗುರುಪೂರ್ಣಿಮೆ ಪ್ರಯುಕ್ತ ದೇವನಹಳ್ಳಿ ದಿವ್ಯಜ್ಯೋತಿ ಕ್ರೆಡಿಟ್​ ಕೋ ಆಪರೇಟಿವ್​ ಸೊಸೈಟಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ಶಿಕ್ಷಕ ಕೆ.ಬಸವರಾಜ್​, ಕಸಾಪ ತಾಲೂಕು ಅಧ್ಯಕ್ಷ ಯಲಿಯೂರು ದೇವರಾಜ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಡಾ.ಎನ್​.ಚಂದ್ರಶೇಖರ್​, ಹಸಿರುಸೇನೆ ರಾಜ್ಯ ಯುವ ಘಟಕದ ಅಧ್ಯಕ್ಷ ಡಾ.ಬಿ.ಕೆ.ವಿನೋದಕುಮಾರಗೌಡ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್​.ಕೃಷ್ಣಪ್ಪ, ಜಿಲ್ಲಾ ಕೋಶಾಧ್ಯಕ್ಷ ಮುನಿರಾಜು ಅಪ್ಪಯ್ಯ, ಗೋಕರೆಗೇಟ್​ ಮಂಜುನಾಥ್​ ಇತರರು ಇದ್ದರು. 
ರಾಜ್ಯ

ಜ್ಞಾನದ ಬೆಳಕು ತೋರುವವನೇ ಗುರು / DEVANAHALLI

ದೇವನಹಳ್ಳಿ : ವ್ಯಾಸಮಹರ್ಷಿಗಳು ಪ್ರಕೃತಿಯಲ್ಲಿ ಭಗವಂತನನ್ನು ಕಂಡವರು. ಸಕಲ ಜೀವರಾಶಿಗಳಲ್ಲಿ ದೇವರನ್ನು ಕಾಣುವ ಭಾರತ ಇಂದು ವಿಶ್ವಗುರುವಾಗಿದೆ. ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ ಬೆಳಕು ತೋರುವವವನೇ ಗುರು ಎಂದು ಕಸಾಪ ಜಿಲ್ಲಾ ಕೋಶಾಧ್ಯಕ್ಷ ಡಾ.ಮುನಿರಾಜು ಅಪ್ಪಯ್ಯ ಹೇಳಿದರು.
ಪಟ್ಟಣದ ಮರಳುಬಾಗಿಲಿನ ದಿವ್ಯಜ್ಯೋತಿ ಕ್ರೆಡಿಟ್​ ಕೋ ಆಪರೇಟಿವ್​ ಸೊಸೈಟಿಯಲ್ಲಿ ಶ್ರೀ ಕೃಷ್ಣಪಾಂಡವ ತಿಗಳ ಪತ್ತಿನ ಸಹಕಾರ ಸಂಘ ಹಾಗೂ ಕರವೇ ನೇತೃತ್ವದಲ್ಲಿ ಆಯೋಜಿಸಿದ್ದ ಗುರುಪೂರ್ಣಿಮೆ ಹಾಗೂ ಬಾಲ ಗಂಗಾಧರ ತಿಲಕ್​ ಅವರ ಜಯಂತಿಯಲ್ಲಿ ಮಾತನಾಡಿ, ಗುರುವಿನ ಮಹತ್ವ ಅರಿತು ಮಾನವಿಯ ಮೌಲ್ಯ ಬೆಳೆಸಿಕೊಂಡರೆ ಮಾತ್ರ ಗುರುಪೌರ್ಣಮಿ ಆಚರಿಸಿದ್ದಕ್ಕೂ ನಿಜವಾದ ಅರ್ಥ ಬರುತ್ತದೆ ಎಂದರು.
ಕರವೇ ಗೌರವಾಧ್ಯಕ್ಷ ಡಾ.ಎನ್​.ಚಂದ್ರಶೇಖರ್​ ಮಾತನಾಡಿ, ಹಿಂದೆ ಶಿಷ್ಯರು ಗುರುಗಳ ಪಾದಕ್ಕೆ ನಮಿಸಿ ವಿದ್ಯೆ ಕಲಿಯುವ ಕಾಲವಿತ್ತು, ಆದರೆ ಈಗ ಗುರುಗಳೇ ಮಕ್ಕಳಿಗೆ ಕೈಮುಗಿದು ಶಾಲೆಗೆ ಕರೆ ತಂದು ವಿದ್ಯೆ ಕಲಿಸುವ ಕಾಲ ಬಂದಿದೆ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್​.ಕೃಷ್ಣಪ್ಪ ಮಾತನಾಡಿ, ಕಲ್ಲಿನಂತ ವ್ಯಕ್ತಿಯನ್ನು ತಿದ್ದೀತಿಡಿ ಪೂಜಿಸುವ ವಿಗ್ರವನ್ನಾಗಿಸುವ ಶಕ್ತಿ ಗುರುವಿಗಿದೆ. ಅಂತಹ ಗುರುಸ್ಮರಣೆಯೇ ಗುರುಪೌರ್ಣಮಿ ಎಂದರು. ರಾಜ್ಯ ರೈತ ಸಂಘ ಹಸಿರು ಸೇನೆ ಯುವ ಘಟಕದ ಅಧ್ಯಕ್ಷ ಡಾ.ಬಿ.ಕೆ.ವಿನೋದಕುಮಾರಗೌಡ ಮಾತನಾಡಿ, ಗುರು ಎಂದರೆ ಕೇವಲ ಅಕ್ಷರಜ್ಞಾನ ಬೋಧಿಸುವವರಲ್ಲ. ಅಜ್ಞಾನದ ಅಂಧಕಾರ ದೂರ ಮಾಡಿ ಜ್ಞಾನದ ಜ್ಯೋತಿ ಬೆಳಗಿಸುವ ದಿವ್ಯ ಚೇತನ. ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಧೈರ್ಯ, ವಿವೇಕ, ಮೌಲ್ಯಗಳು ಮತ್ತು ಮಾನವೀಯತೆ ದಾರಿ ತೋರಿಸುವ ಚಿರಂತನ ಪ್ರೇರಣಾಶಕ್ತಿ. ವ್ಯಕ್ತಿತ್ವ ರೂಪಿಸಿ, ಕನಸುಗಳಿಗೆ ರೆಕ್ಕೆ ನೀಡುವ, ಜೀವನಪೂರ್ತಿ ಹೃದಯದಲ್ಲಿ ಅಚ್ಚಳಿಯದೆ ಉಳಿಯುವ ಶ್ರೇಷ್ಠ ಮಾರ್ಗದರ್ಶಕರೇ ಗುರು ಎಂದು ಬಣ್ಣಿಸಿದರು.
ಹಿಂದೆ ಅಂತಹ ಮಾರ್ಗದರ್ಶಕರಿದ್ದರು. ಆದರೆ ಸಾಮಾಜಿಕ ಜಾಲತಾಣ ಬಂದ ಮೇಲೆ ವಂಚಕರೇ ಹೆಚ್ಚಾಗಿದ್ದಾರೆ. ಯಾರದೂ ರೈತನ ಭೂಮಿಯ ವಿಡಿಯೋ ತೆಗೆದು ಭೂಮಿ ಮಾರಾಟಕ್ಕಿದೆ, ಸಂಪರ್ಕಿಸಿ ಎಂಬ ಸುಳ್ಳು ಸುದ್ದಿಯನ್ನು ಹರಿಬಿಡುತ್ತಾರೆ. ಕಡಿಮೆ ಬೆಲೆಗೆ ಭೂಮಿ, ನಿವೇಶನ ಇದೆ ಎಂದೂ ವಂಚಿಸುತ್ತಾರೆ. ಇನ್ನೂ ಯಾಮಾರಿದರೆ ನಿಮ್ಮ ಬ್ಯಾಂಕ್​ ಖಾತೆಯಲ್ಲಿನ ಹಣವನ್ನೇ ಲಪಟಾಯಿಸುತ್ತಾರೆ. ಇಂತಹವರಿಗೆ ಅದ್ಯಾವ ಗುರುಗಳು ಮಾರ್ಗತೊರಿದರೋ ದೇವರೆ ಬಲ್ಲ. ವಂಚಕರಿಂದ ಜಾಗೃತರಾಗಿ ಮತ್ತು ಸುತ್ತಮುತ್ತಲಿನವರಿಗೂ ತಿಳಿಸಿ ಎಂದರು. ತಾಲೂಕು ಕಸಾಪ ಅಧ್ಯಕ್ಷ ಯಲಿಯೂರು ದೇವರಾಜ್​ ಹಾಗೂ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಕೆಂಚನಗೌಡ ಬಸವರಾಜ್​ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಉಪನ್ಯಾಸಕ ಸಾಹಿತಿ ಶರಣಯ್ಯ ಹಿರೇಮಠ್​, ತಾಲೂಕು ಕರವೇ ಅಧ್ಯಕ್ಷ ಆರ್​.ವೆಂಕಟರಾಜು, ಸಮರಸೇನೆ ಅಧ್ಯಕ್ಷ ಗೋಕರೆಗೇಟ್​ ಮಂಜುನಾಥ್​, ಪದಾಧಿಕಾರಿಗಳಾದ ಆರ್​.ಕೆ.ನಂಜೇಗೌಡ, ನಂದಿನಿ, ಪದ್ಮಾವತಿ, ಎಚ್​.ಕೆ.ಶಾಂತಲಾ, ರಾಮಾಂಜಿನಪ್ಪ, ಬೈಚಾಪುರದ ಕೃಷ್ಣಪ್ಪ, ನಾರಾಯಣಸ್ವಾಮಿ, ಶಿವಕುಮಾರ್​ ಕುಮಾರ್​, ರಾಮಣ್ಣ, ಬೈರೇಗೌಡ, ಸುಬ್ರಹ್ಮಣಿ ಇತರರು ಇದ್ದರು.