ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು: ಆದಾಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ನಮ್ಮ ಸರ್ಕಾರ ಪ್ರೀತಿಯಿಂದ ಕೊಟ್ಟಿರುವ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ವಿಪಕ್ಷ ಇರುವುದೇ ಟೀಕೆ ಮಾಡಲು. ನಾವು ಏನೇ ಒಳ್ಳೆಯದು ಮಾಡಲು ಮುಂದಾದರೂ ಅದಕ್ಕೆ ಅಡ್ಡಗಾಲು ಹಾಕುವುದಕ್ಕೆ ವಿಪಕ್ಷಗಳಿರುವುದು. ಅವರ ಕೈಯಲ್ಲಿ ಆಗದಿದ್ದ ಕೆಲಸ ನಾವು ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಲು ಸರ್ಕಾರ ಮುಂದಾಗಿದೆ. ಆರಂಭದಲ್ಲಿ ಕೆಲವು ಫಲಾನುಭವಿಗಳು ಬೇರೆಯವರ ದೂರವಾಣಿ ಸಂಖ್ಯೆ ಹಾಗೂ ಇತರೆ ಮಾಹಿತಿ ನೀಡಿದ್ದಾರೆ. ಬೇರೆಯವರ ಖಾತೆಗೆ ಹಣ ಹೋಗುತ್ತಿರುವ ಬಗ್ಗೆ ಮಾಹಿತಿ ಇದೆ. ಫಲಾನುಭವಿಗಳ ಖಾತೆಗೆ ಹಣ ಹೋಗುವಂತೆ ಮಾಡುವುದು ನಮ್ಮ ಉದ್ದೇಶ ಎಂದರು.
ರಾಜ್ಯ ಸರ್ಕಾರ ಕರ್ನಾಟಕದ ಜನತೆಗೆ ಯೋಜನೆ ಕೊಡುತ್ತಿರುವುದು. ಉಚಿತ ವಿದ್ಯುತ್ ಅನ್ನು ರಾಜ್ಯದ ಮತದಾರರಿಗೆ ನೀಡಬೇಕೇ ಹೊರತು, ಬೇರೆ ರಾಜ್ಯದವರಿಗೆ ಯಾಕೆ ಕೊಡಬೇಕು? ಹೀಗಾಗಿ ಫಲಾನುಭವಿಗಳಿಗೆ ಗುರುತಿನ ಚೀಟಿ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿದ್ದೇವೆ. ಈ ಪ್ರಕ್ರಿಯೆ ನಡೆಯುತ್ತಿದೆ. ಯೋಜನೆ ನಿಲ್ಲಿಸುವುದು ನಮ್ಮ ಉದ್ದೇಶವಲ್ಲ. ನಮ್ಮ ಗ್ಯಾರಂಟಿ ದೇಶಕ್ಕೆ ಮಾದರಿ. ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ ಸೇರಿ ಬೇರೆ ರಾಜ್ಯಗಳು ನಮ್ಮ ಮಾದರಿ ಅನುಸರಿಸಿವೆ ಎಂದು ಶಿವಕುಮಾರ್ ತಿಳಿಸಿದರು.
ಕೆಲವರು ಗೃಹಲಕ್ಷ್ಮಿ ಹಣವನ್ನು ನಕಲಿ ಫೈನಾನ್ಸ್ ವ್ಯವಹಾರಕ್ಕೆ ಬಳಸುತ್ತಿದ್ದಾರೆ. ಗ್ರಾಮ ಪಂಚಾಯಿತಿಯಿಂದ ತಾಲೂಕು ಪಂಚಾಯಿತಿವರೆಗೆ ಎಲ್ಲೆಲ್ಲಿ ಇಂತಹ ಸ್ಕೀಂಗಳಿವೆ ಅವುಗಳಿಗೆ ಕಡಿವಾಣ ಹಾಕಲು ನಿರ್ದೇಶನ ನೀಡಿದ್ದೇವೆ. ನಮ್ಮ ಹೃದಯದಿಂದ ಕೊಟ್ಟ ಯೋಜನೆಗಳಿವು. ಹೆಣ್ಣು ಕುಟುಂಬದ ಕಣ್ಣು ಎಂದು ಅವರಿಗೆ ಆರ್ಥಿಕ ಶಕ್ತಿ ಸಿಗಬೇಕು. ಅವರ ಮನೆಗಳು ಬೆಳಗಬೇಕು ಎಂದು ನೀಡಲಾಗಿದೆ ಎಂದು ಸಿಎಂ ಹೇಳಿದರು.