ಸರ್ಜಾಪುರದ ಅಂಬೇಡ್ಕರ್​ ಆಟದ ಮೈದಾನದಲ್ಲಿರುವ ಎಂಟು ಅಡಿ ಕಂಚಿನ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಯಿತು. 
ರಾಜ್ಯ

ಸಮಾಜ ಪರಿವರ್ತನೆಯ ಮಹಾನ್​ ಚಿಂತಕ / SARJAPUR

ಸರ್ಜಾಪುರ : ಅಂಬೇಡ್ಕರ್​ ಕೇವಲ ಸಂವಿಧಾನ ರಚನೆಗಾರರಲ್ಲ, ಸಮಾಜ ಪರಿವರ್ತನೆಯ ಮಹಾನ್​ ಚಿಂತಕರು ಮತ್ತು ಶೋಷಿತರ ಧ್ವನಿಯಾಗಿದ್ದು, ಸಮಾಜಕ್ಕೆ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂರು ಮಂತ್ರಗಳನ್ನು ನೀಡಿದರು ಎಂದು ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್​.ಅಂಬೇಡ್ಕರ್​ ಸೇವಾ ಟ್ರಸ್ಟ್​ ಅಧ್ಯಕ್ಷ ವೈ.ಶ್ರೀರಾಮುಲು ತಿಳಿಸಿದರು.
ಆನೇಕಲ್​ ತಾಲೂಕಿನ ಸರ್ಜಾಪುರದ ಡಾ.ಅಂಬೇಡ್ಕರ್​ ಆಟದ ಮೈದಾನದಲ್ಲಿ ಡಾ.ಅಂಬೇಡ್ಕರ್​ ಸೇವಾ ಟ್ರಸ್ಟ್​ನಿಂದ ದಿ ಆಕ್ಸ್​ಫರ್ಡ್​ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ತಾಲೂಕಿನಲ್ಲಿ ನೂತನವಾಗಿ ಆಯ್ಕೆಯಾಗಿರುವ ನ್ಯಾಯಧೀಶರಿಗೆ ಸನ್ಮಾನ ಮತ್ತು ಆಶಾ ಕಾರ್ಯಕರ್ತರಿಗೆ, ಅಟೋ ಚಾಲಕರಿಗೆ ಮತ್ತು ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬರು ಉತ್ತಮ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಹಕ್ಕುಗಳನ್ನು ಅರಿತುಕೊಳ್ಳಬೇಕು. ಇಂದಿನ ಯುವ ಪೀಳಿಗೆ ಅಂಬೇಡ್ಕರ್​ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ದಿಕ್ಕಿನಲ್ಲಿ ಹೆಜ್ಜೆ ಹಾಕಬೇಕು ಎಂದರು.
ಟ್ರಸ್ಟ್​ ಸಂಸ್ಥಾಪಕ ಅಧ್ಯಕ್ಷ ಡಾ.ಜಿ.ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಮೂರ್ತಿ ಕುಮಾರ್​, ಉಪಾಧ್ಯಕ್ಷ ಡಾ.ಎಸ್​. ಮಂಜುನಾಥ್​, ಎಸ್​.ಎಂ.ಶ್ರೀನಿವಾಸ್​, ಎಂ.ರಾಮಕೃಷ್ಣಪ್ಪ, ಮುನಿಕೆಂಪಣ್ಣ, ಖಜಾಂಚಿ ಎ.ಸತೀಶ್​ ಕುಮಾರ್​, ಮುಖಂಡರಾದ ಕಲಾವತಿ ಮೂರ್ತಿ ಕುಮಾರ್​, ಜಿ.ನಾಗರಾಜು, ಸದಸ್ಯರಾದ ವೈ.ಸೀನಪ್ಪ, ವಿ.ಬಸವರಾಜು, ರಾಮಕೃಷ್ಣಪ್ಪ, ಮಹಮ್ಮದ್​, ಎಚ್​.ಬಿ.ಮುನಿಯಪ್ಪ, ಕೆ.ವೆಂಕಟೇಶ್​, ಎಸ್​.ಕೆ.ಗಣೇಶ್​ ಇದ್ದರು.

ಅಂಬೇಡ್ಕರ್​ ತತ್ವಗಳು ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯ ಸ್ಥಾಪಿಸಲು ಮಹತ್ವದ ಪಾತ್ರ ವಹಿಸುತ್ತವೆ. ಪ್ರತಿಯೊಬ್ಬರು ಶಿಕ್ಷಣದ ಮೂಲಕ ಸಬಲೀಕರಣ ಹೊಂದಬೇಕು ಹಾಗೂ ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ನ್ಯಾಯ ಮತ್ತು ಸಮಾನತೆ ಕಾಪಾಡಲು ಪ್ರತಿಯೊಬ್ಬರೂ ಕಾನೂನು ಅರಿವು ಹೊಂದಬೇಕು. ವಿಶೇಷವಾಗಿ ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳು ಶಿಕ್ಷಣ ಮತ್ತು ಕಾನೂನು ತಿಳಿವಳಿಕೆಯ ಮೂಲಕ ಸಬಲೀಕರಣ ಹೊಂದಬೇಕು.