Bsy 
ರಾಜ್ಯ

ಹೋರಾಟದ ಛಲ, ಆತ್ಮವಿಶ್ವಾಸ ತುಂಬಿದ ಮಹಾನ್ ನಾಯಕ

(ಲೇಖಕರು - ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕರು)

ಕರ್ನಾಟಕ ಕಂಡ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಮತ್ತು ರೈತ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಮತ್ತು ನನ್ನ ನಡುವಿನ ಒಡನಾಟ ಎರಡು ದಶಕಗಳಿಗೂ ಮೀರಿದ್ದು. ನನ್ನನ್ನು ರಾಜಕೀಯಕ್ಕೆ ಕರೆ ತಂದವರೇ ಯಡಿಯೂರಪ್ಪ ಮತ್ತು ಅನಂತಕುಮಾರ್ ಅವರು. ವಿದ್ಯಾರ್ಥಿ ನಾಯಕನಾಗಿದ್ದ ನನ್ನನ್ನು ಎಬಿವಿಪಿಗೆ ಸೇರಿಸಿ ರಾಜಕೀಯ ಸೇರಲು ಕಾರಣರಾದವರು ನನಗೆ ಗುರುಸಮಾನರಾದ ಪೊ›.ಎಂ.ಕೆ. ಶ್ರೀಧರ್ ಅವರು.
2003ರ ಆ.15ರಂದು ನಾನು ಯಡಿಯೂರಪ್ಪ ಮತ್ತು ಅನಂತಕುಮಾರ್ ಅವರ ಸಮ್ಮುಖ ಅದ್ದೂರಿ ಸಮಾರಂಭದಲ್ಲಿ ಬಿಜೆಪಿ ಸೇರಿದೆ. ಆಗಿನಿಂದ ಈವರೆಗೆ ಯಡಿಯೂರಪ್ಪ ಅವರು ನನ್ನ ಬಗ್ಗೆ ತೋರಿದ ಪ್ರೀತಿ ಮತ್ತು ವಿಶ್ವಾಸದಲ್ಲಿ ಎಳ್ಳಷ್ಟೂ ಕೊರತೆ ಕಂಡಿಲ್ಲ. ತಮ್ಮ ಮಕ್ಕಳ ಮೇಲೆ ಅವರು ಎಷ್ಟು ಪ್ರೀತಿ ತೋರಿಸಿದ್ದಾರೋ, ಏನೋ ನನಗೆ ಗೊತ್ತಿಲ್ಲ. ಆದರೆ, ಅದಕ್ಕಿಂತ ಹೆಚ್ಚಿನ ಪ್ರೀತಿ ಮತ್ತು ಮಮಕಾರವನ್ನು ನನ್ನ ಮೇಲೆ ತೋರಿಸಿದ್ದಾರೆ. ನಾನು ಯಡಿಯೂರಪ್ಪ ಅವರನ್ನು ನನ್ನ ತಂದೆಯ ಸ್ಥಾನದಲ್ಲಿ ಇರಿಸಿ, ಮನಸ್ಸಿನಲ್ಲೇ ಪೂಜಿಸುತ್ತೇನೆ. ಅದಕ್ಕೆ ಒಂದಲ್ಲ, ಅನೇಕ ಕಾರಣಗಳಿವೆ.
ನಾನು ಬಿಜೆಪಿಗೆ ಸೇರಿದಾಗ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ರೂಪುಗೊಂಡಿರಲಿಲ್ಲ. ಆಗ ಅದು ಕುಣಿಗಲ್ ಕ್ಷೇತ್ರವಾಗಿತ್ತು. ನಾನು ಪಕ್ಷ ಸೇರಿದಾಗ 2004ರ ವಿಧಾನಸಭಾ ಚುನಾವಣೆ ಎದುರಾಯಿತು. ಯಡಿಯೂರಪ್ಪ ಅವರು ನನಗೆ ಕುಣಿಗಲ್​ನಿಂದ ಸ್ಪರ್ಧೆಗೆ ಟಿಕೆಟ್ ಕೊಟ್ಟರು. ನಮ್ಮ ಭಾಗದಲ್ಲಿ ಜನಪ್ರಿಯ ನಾಯಕರಾಗಿದ್ದ ವೈ.ಕೆ. ರಾಮಯ್ಯ ಅವರ ಪತ್ನಿ ಅನಸೂಯಮ್ಮ ಅವರನ್ನು ನಾನೇ ಮುಂದೆ ನಿಂತು ಬಿಜೆಪಿಗೆ ಸೇರಿಸಿದೆ. ಅವರಿಗೆ ಹುಲಿಯೂರು ದುರ್ಗದಿಂದ ಟಿಕೆಟ್ ಸಿಕ್ಕಿತು. ಆಗಲೇ ನಮಗೆ ಯಡಿಯೂರಪ್ಪ ಅವರ ಕುರಿತು ಎಂಥ ಅಭಿಮಾನ ಬೆಳೆದಿತ್ತು ಎಂದರೆ ವರನಟ ರಾಜ್​ಕುಮಾರ್ ಕಟೌಟ್ ಹಾಕಿದಷ್ಟು ಎತ್ತರ ಯಡಿಯೂರಪ್ಪ ಅವರ ಕಟೌಟ್​ಗಳನ್ನು ಕ್ಷೇತ್ರದಲ್ಲೆಲ್ಲ ಹಾಕಿಸಿ ಸಂಭ್ರಮ ಪಟ್ಟಿದ್ದೆವು. ಆ ಚುನಾವಣೆಯಲ್ಲಿ ನಾನು ಸೋತೆ, ಅನಸೂಯಮ್ಮ ಅವರೂ ಸೋತರು. ಆದರೆ, ತುಮಕೂರು ಲೋಕಸಭಾ ಕ್ಷೇತ್ರದಿಂದ ಎಸ್. ಮಲ್ಲಿಕಾರ್ಜುನಯ್ಯ ಕೇವಲ 1,700 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಎಂಪಿಎ ಅಧ್ಯಕ್ಷ ಹುದ್ದೆ ಕೊಟ್ಟರು: 2006ರಲ್ಲಿ ಜೆಡಿಎಸ್ ಜತೆಗಿನ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂತು. ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದರು. ಅವರನ್ನು ನನ್ನನ್ನು ಕರೆದು ಮೈಸೂರು ಪೇಪರ್ ಮಿಲ್ಸ್​ನ ಅಧ್ಯಕ್ಷ ಹುದ್ದೆಗೆ ನೇಮಿಸಿದರು. ಇದು ನಾನು ಕನಸಿನಲ್ಲೂ ನೆನಪಿಸಿಕೊಳ್ಳದ ಹುದ್ದೆಯಾಗಿತ್ತು. ಹೇಮಾವತಿ ನೀರಿಗಾಗಿ ನಮ್ಮ ಭಾಗದಲ್ಲಿ ನಿರಂತರ ಹೋರಾಟ. 2007ರಲ್ಲಿ ಕೊತ್ತಗೆರೆ ಕೆರೆ ಒಡೆದ ಪ್ರಕರಣದಲ್ಲಿ ಹೋರಾಟ ಮಾಡಿ 15 ದಿನ ಸೆರೆವಾಸ ಅನುಭವಿಸಿದೆ. ಆಗ ಯಡಿಯೂರಪ್ಪ ಅವರು ನನ್ನ ಬೆಂಬಲಕ್ಕೆ ನಿಂತು, ಧೈರ್ಯ ತುಂಬಿದ್ದನ್ನು ನಾನು ಎಂದಿಗೂ ಮರೆಯಲಾರೆ. ಏಕೆಂದರೆ ರಾಜಕಾರಣದಲ್ಲಿ ಹೋರಾಟ ಬಹಳ ಮುಖ್ಯ. ಅದಕ್ಕೆ ಬೆನ್ನೆಲುಬಾಗಿ ಯಾರಾದರೂ ಹಿರಿಯ ನಾಯಕರು ನಿಂತರೆ ನಮ್ಮ ಉತ್ಸಾಹ ಇಮ್ಮಡಿಯಾಗುತ್ತದೆ ಮತ್ತು ನಮ್ಮಲ್ಲಿ ಹೋರಾಟದ ಕೆಚ್ಚು ಇನ್ನಷ್ಟು ಹೆಚ್ಚುತ್ತದೆ. ನನ್ನಲ್ಲಿರುವ ಈ ಹೋರಾಟದ ಗುಣಕ್ಕೆ ಯಡಿಯೂರಪ್ಪ ಅವರು ಮುಖ್ಯಕಾರಣ ಎಂದರೆ ಅದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ.
2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾಗಿ ತುಮಕೂರು ಗ್ರಾಮಾಂತರ ಕ್ಷೇತ್ರ ರಚನೆಯಾಯಿತು. ನನಗೆ ಟಿಕೆಟ್ ಸಿಕ್ಕು 27,000 ಮತಗಳ ಭರ್ಜರಿ ಅಂತರದಿಂದ ಗೆದ್ದೆ. ಅದು ನಾನು ಮೊದಲ ಬಾರಿ ಶಾಸಕನಾದ ಸಂದರ್ಭ. ನಮ್ಮ ಕ್ಷೇತ್ರದ ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನೆ ಅನೇಕ ದಶಕಗಳಿಂದ ಕಾಗದದ ಮೇಲೆ ಉಳಿದ ಯೋಜನೆಯಾಗಿತ್ತು. ಇದಕ್ಕೆ ಅನುಮತಿ ಕೊಡಬೇಕು ಎಂದು ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಬಳಿ ಕೇಳಿಕೊಂಡೆ. ಅವರು ನೋಡಿ ಸುಮ್ಮನಾದರು. ಅವರ ಬಳಿ ಕಾರ್ಯದರ್ಶಿಯಾಗಿದ್ದ ಬಿ.ಎನ್.ಕೃಷ್ಣಯ್ಯ ಎಂಬ ಅಧಿಕಾರಿಗಳು ಇದು ಹೀಗೆ ಕೊಟ್ಟರೆ ಆಗದು, ಸಂಪುಟದ ಮುಂದೆ ಇದನ್ನು ಮಂಡಿಸಬೇಕೆಂದು ನೀವು ಕೇಳಿಕೊಳ್ಳಿ ಎಂದು ಸಲಹೆ ಕೊಟ್ಟರು.ಯಡಿಯೂರಪ್ಪ ಅವರ ಬಳಿ ಅದೇ ರೀತಿ ಮನವಿ ಮಾಡಿಕೊಂಡೆ. ಅವರಿಗೆ ಬೇರೆ ಯಾವುದೋ ಕಾರಣಕ್ಕೆ ಸಿಟ್ಟು ಬಂದಿತ್ತೋ, ಏನೋ? ಆ ಕಡತವನ್ನು ನನ್ನ ಮುಖಕ್ಕೆ ಬಿಸಾಕಿ, ಎಲ್ಲಿದೆ ದುಡ್ಡು? ಎಂದು ಕೇಳಿದರು.
ಒಂದು ಕ್ಷಣ ನನಗೆ ದಿಕ್ಕು ತೋಚದಂತಾಗಿ ಹೊರಗೆ ಬಂದೆ. ಅರ್ಧ ಗಂಟೆಯಲ್ಲಿ ನನಗೆ ಅವರಿಂದ ಕರೆ ಬಂತು. ಆಗ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಕರೆದು ಇದನ್ನು ಸಂಪುಟದ ಮುಂದೆ ಇಡಿ ಎಂದು ಸೂಚನೆ ಕೊಟ್ಟರು. ಮಾದರಿ ತಿಳಿಯಲು ಬಾಗೂರು-ನವಿಲೆ ಏತ ನೀರಾವರಿ ಯೋಜನೆ ನೋಡಿಕೊಂಡು ಬನ್ನಿ ಎಂದು ಬೊಮ್ಮಾಯಿ ಅವರ ಜತೆ ನನ್ನನ್ನು ಕಳಿಸಿಕೊಟ್ಟರು. ಮುಂದೆ ಸಂಪುಟದಲ್ಲಿ ಅನುಮೋದನೆ ಸಿಕ್ಕ 68 ಕೋಟಿ ರೂ. ವೆಚ್ಚದ ಹೆಬ್ಬೂರು-ಗೂಳೂರು ಏತ ನೀರಾವರಿ ಬೃಹತ್ ಯೋಜನೆಗೆ ಯಡಿಯೂರಪ್ಪ ಅವರೇ ಬಂದು ಗುದ್ದಲಿ ಪೂಜೆ ನೆರವೇರಿಸಿದರು. ಒಂದೂವರೆ ವರ್ಷದಲ್ಲಿ ಈ ಕೆಲಸ ಮುಗಿಯಬೇಕು ಎಂದು ಅಲ್ಲಿದ್ದ ನೀರಾವರಿ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಅವರು ಹೇಳಿದಂತೆ ಒಂದೂವರೆ ವರ್ಷದಲ್ಲಿ ಯೋಜನೆ ಪೂರ್ಣಗೊಂಡಿತು. ಉದ್ಘಾಟನೆಯನ್ನೂ ಅವರೇ ಮಾಡಿದ್ದು ನಿಜಕ್ಕೂ ಸ್ಮರಣೀಯ.
ಆತ್ಮವಿಶ್ವಾಸ ತುಂಬಿದ ಅವರ ವಾತ್ಸಲ್ಯ: ಯಡಿಯೂರಪ್ಪ ಅವರಿಗೆ ನನ್ನ ಮೇಲೆ ಎಂತಹ ಅಗಾಧ ವಾತ್ಸಲ್ಯ ಎಂದರೆ ಪುಟ್ಟ ಪಂಚಾಯಿತಿ ಮಟ್ಟದ ಕಾರ್ಯಕ್ರಮವಿದ್ದರೂ ತಾವೇ ಶಂಕುಸ್ಥಾಪನೆಗೋ, ಉದ್ಘಾಟನೆಗೋ ಬರುತ್ತಿದ್ದರು. ನನ್ನ ಕ್ಷೇತ್ರದ ಕಣಕುಪ್ಪೆ ಗ್ರಾಮದಲ್ಲಿ ಇಂಥದೇ ಒಂದು ಕಾರ್ಯಕ್ರಮ ಇತ್ತು. ಕೇವಲ ಮೂರು ದಿನಗಳ ಮುಂಚೆ ಅವರಿಗೆ, ಇಂಥ ಕಾರ್ಯಕ್ರಮ ಇದೆ, ತಾವು ಬರಬೇಕು ಎಂದು ಕೋರಿಕೊಂಡೆ. ಅವರು ಬಂದರು. ಇದರಿಂದ ನನ್ನಲ್ಲಿ ಎಂಥ ಆತ್ಮವಿಶ್ವಾಸ ಮೂಡಿತು ಎಂದರೆ ನನ್ನ ಕ್ಷೇತ್ರದ ಜನರಲ್ಲಿ ಮಾತ್ರವಲ್ಲ, ನಮ್ಮ ಎಲ್ಲ ಶಾಸಕ ಮಿತ್ರರಲ್ಲಿ ನನ್ನ ಕುರಿತು ಒಂದು ವಿಶೇಷ ಗೌರವ ಭಾವನೆ ಬೆಳೆಯಿತು. ಯಡಿಯೂರಪ್ಪ ಮತ್ತು ಸುರೇಶಗೌಡನ ಸಂಬಂಧವೇ ಒಂದು ವಿಶೇಷ ಎಂದು ಎಲ್ಲರೂ ಅಭಿಮಾನದಿಂದ ಹೇಳುವಂತೆ ಆಯಿತು!. ನಾನು ನನ್ನ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಯೋಜನೆಗಳ ಕುರಿತು ಯಡಿಯೂರಪ್ಪ ಅವರಿಗೆ ಎಲ್ಲ ಮಾಹಿತಿ ಇತ್ತು. ಅವರು ಇತರರಿಗೆ, ‘ಸುರೇಶಗೌಡನ್ನ ನೋಡ್ರಿ. ಕ್ಷೇತ್ರದಲ್ಲಿ ಒಂದು ಪೈಸೆ ಭ್ರಷ್ಟಾಚಾರ ಮಾಡದೆ, ಹೇಗೆ ಜನರ ಕೆಲಸ ಮಾಡಿಸಬಹುದು ಎಂದು ನೋಡಿ. ಅದೇ ರೀತಿ ನೀವೂ ಕೆಲಸ ಮಾಡಿಸಿ’ ಎಂದು ಹೇಳುತ್ತಿದ್ದರು. ಇದು ನನ್ನಲ್ಲಿ ಆತ್ಮವಿಶ್ವಾಸ ಮತ್ತು ಜನರ ಕೆಲಸ ಮಾಡುವ ಹುಮ್ಮಸ್ಸು ಹೆಚ್ಚಿಸಿತು.