ಕಲಬುರಗಿಯ ಮಹಾಲಕ್ಷ್ಮೀ ಲೇಔಟ್ನಲ್ಲಿರುವ ಮಹಾದೇವ ಮಂದಿರ ನಿರ್ವಹಣೆಗೆ ಹೊಸ ಸಮಿತಿ ರಚಿಸಲಾಯಿತು. ರಾಜು ಲೇಂಗಟಿ, ಬಸವರಾಜ ಯಾಲಕ್ಕಿ, ಎಸ್.ವೈ.ಪಾಟೀಲ್, ಸಿದ್ದಣ್ಣ ಅರಳಿ ಇತರರಿದ್ದರು.
- ದೇವಾಲಯ ಮಾರಾಟಕ್ಕೆ ಕೋರ್ಟ್ ತಡೆ
- ಸಂಭ್ರಮಿಸಿದ ಬಡಾವಣೆ ನಿವಾಸಿಗಳು
ಕಲಬುರಗಿ: ನಗರದ ಹೃದಯ ಭಾಗದಲ್ಲಿರುವ ಮಹಾಲಕ್ಷ್ಮೀ ಲೇಔಟ್ದಲ್ಲಿರುವ ಮಹಾದೇವ ಮಂದಿರದ ಜಾಗ ಮಾರಾಟ ಪ್ರಕರಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಬಡಾವಣೆ ಜನರೆಲ್ಲರೂ ಸೇರಿ ಉತ್ಸವ ಮಾಡುವ ಮೂಲಕ ಸಂಭ್ರಮಿಸಿ ಭಕ್ತಿ ಮೆರೆದರು.
ಮಹಿಳೆಯೊಬ್ಬರೂ ದೇವಾಲಯವಿದ್ಧ ಸ್ಥಳದ -ದಾಖಲೆಗಳನ್ನು ತಿದ್ದಿ ಬೇರೊಬ್ಬರಿಗೆ ಮಾರಾಟ ಮಾಡಿದ್ದರು. ಅದನ್ನು ಅವರು ತಮ್ಮ ಸ್ವಾಧಿನಕ್ಕೆ ತೆಗೆದುಕೊಳ್ಳಲು ಬಂದಾಗ, ಇದು ಪುರಾತನ ದೇವಾಲಯವಾಗಿದೆ. ಇದನ್ನು ಹೇಗೆ ಮಾರಾಟ ಮಾಡಲು ಬರುತ್ತದೆ ? ಎಂದು ಅಡ್ಡಿಪಡಿಸಿದ್ದರು. ನಂತರ ಬಡಾವಣೆಯವರೆಲ್ಲರೂ ಸೇರಿಕೊಂಡು ನ್ಯಾಯವಾದಿ ಬಸವರಾಜ ಯಾಲಕ್ಕಿ ಮೂಲಕ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ವಾದ ಆಲಿಸಿ ಮಾರಾಟಕ್ಕೆ ತಡೆ ನೀಡಿದೆ.
ಪ್ರಾಚಿನ ದೇವಾಲಯ ಉಳಿಸುವ ಮೂಲಕ ನ್ಯಾಯಾಲಯದಲ್ಲಿ ತಮಗೆ ನ್ಯಾಯ ದೊರಕಿದೆ ಎಂದು ಬಡಾವಣೆ ಜನರು ಸೇರಿ ದೇಣಿಗೆ ಸಂಗ್ರಹಿಸಿ ಮಹಾದೇವ ಉತ್ಸವ ಮಾಡಿದರು. ಪ್ರಸಾದ ವಿತರಣೆ, ಭಜನೆ ಸೇರಿ ಇನ್ನಿತರ ಧಾರ್ಮಿಕ ಕಾರ್ಯಕ್ರಮ ಜರುಗಿದವು. ದೇವಸ್ಥಾನ ನಿರ್ವಹಣೆ ಮಾಡಿಕೊಂಡು ಹೋಗಲು ಮಹಾದೇವ ಮಂದಿರ ಟ್ರಸ್ಟ್ ಸಮಿತಿ ರಚನೆ ಮಾಡಿಕೊಂಡು ಸಮಿತಿಗೆ ರಾಜು ಲೇಂಗಟಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಸ್ವಾಮಿಯೊಬ್ಬರನ್ನು ನೇಮಿಸಿಕೊಂಡು ನಿತ್ಯ ಶಿವನ ಪೂಜೆ ಇನ್ನಿತರ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.
ಪ್ರಮುಖರಾದ ಸಿದ್ದಣ್ಣ ಅರಳಿ, ಎಸ್.ವೈ.ಪಾಟೀಲ್, ಬಸವರಾಜ ಯಾಲಕ್ಕಿ, ಶಿವಾನಂದ ಸ್ವಾಮಿ, ಶ್ರೀಮಂತ ಆಳಂದಕರ್, ಮಲ್ಲು ಕುಕನೂರ, ವಿರೇಶ ತಡಕಲ್, ಗುರು, ಡಾ.ಕೆ.ಬಸವರಾಜ ಇತರರಿದ್ದರು.