ಆನೇಕಲ್​ನ ಖಾಸಗಿ ಕಾಲೇಜು ಬಳಿ ಕೊಕೇನ್​ ಮಾರುತ್ತಿದ್ದ ವಿದೇಶಿ ಮಹಿಳೆ ಬಂಧನದ ವಿಷಯವನ್ನು ಪಟ್ಟಣ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಬೆಂಗಳೂರು ಗ್ರಾಮಾಂತರ ಎಸ್​ಪಿ ಚಂದ್ರಕಾಂತ್​ ಬಹಿರಂಗಪಡಿಸಿದರು. ಡಿವೈಎಸ್​ಪಿ ಗೋಪಾಲ್​ ನಾಯಕ್​, ವೃತ್ತ ನಿರೀಕ್ಷಕರಾದ ಚಂದ್ರಪ್ಪ, ನವೀನ್​, ಮಂಜುನಾಥ್​, ಕೆಂಪೇಗೌಡ, ಮಹೇಂದ್ರ ಇದ್ದರು.  
ರಾಜ್ಯ

ಕೊಕೇನ್​ ಮಾರುತ್ತಿದ್ದ ವಿದೇಶಿ ಮಹಿಳೆ ಸೆರೆ / ANEKAL

ಆನೇಕಲ್​ : ಖಾಸಗಿ ಕಾಲೇಜಿನ ಎದುರು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾದ ಮಹಿಳೆಯನ್ನು ಬಂಧಿಸಿರುವ ಆನೇಕಲ್​ ಪೊಲೀಸರು, 18 ಲಕ್ಷ ರೂ. ಮೌಲ್ಯದ 180 ಗ್ರಾಂ ಕೊಕೇನ್​ ವಶಪಡಿಸಿಕೊಂಡಿದ್ದಾರೆ.
ನೈಜೀರಿಯಾದ ಬ್ಲೆಸ್ಸಿಂಗ್​ ಒಪುಟಾ(34) ಬಂಧಿತೆ. ಈಕೆ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಬಂದಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಇನ್​ಸ್ಪೆಕ್ಟರ್​ ಆರ್​.ಪ್ರಕಾಶ್​ ನೇತೃತ್ವದ ತಂಡ ದಾಳಿ ನಡೆಸಿ, ವಶಕ್ಕೆ ಪಡೆಯಿತು.
ಕಾಲೇಜು ಬಳಿ ಇತ್ತೀಚೆಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಹೀಗಾಗಿ ಕಾಲೇಜು ಅಕ್ಕ ಪಕ್ಕ ಪೊಲೀಸರು ಕಣ್ಣಿಟ್ಟಿದ್ದರು. ಸಬ್​ ಇನ್​ಸ್ಪೆಕ್ಟರ್​ ಸಿದ್ದನಗೌಡ ಪರಿಶೀಲನೆ ನಡೆಸುತ್ತಿದ್ದಾಗ ಈಕೆ ಕಾಲೇಜು ಪಕ್ಕದಲ್ಲಿ ಮಾರಾಟ ಮಾಡಲು ತಂದಿದ್ದ ಮಾದಕ ವಸ್ತು ಸಮೇತ ಬಂಧಿಸಲಾಯಿತು.
ಈಕೆ ತಿರುಮಶೆಟ್ಟಿಹಳ್ಳಿ ಬಳಿ ವಾಸವಿದ್ದಾಳೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆನೇಕಲ್​ ಪೊಲೀಸರು, ಬೆಂಗಳೂರು ಗ್ರಾಮಾಂತರ ಎಸ್​ಪಿ ಚಂದ್ರಕಾಂತ್​ ನೇತೃತ್ವದಲ್ಲಿ ಚರ್ಚಿಸಿದ್ದಾರೆ, ಆನೇಕಲ್​ಠಾಣೆಇನ್​ಸ್ಪೆಕ್ಟರ್​ ಪ್ರಕಾಶ್​ ಹಾಗೂ ಸೂರ್ಯನಗರ ಠಾಣೆ ಸಿಪಿಐ ಎಸ್​.ಎಂ.ಚಂದ್ರಪ್ಪ ನೇತೃತ್ವದಲ್ಲಿ ತನಿಖೆ ತೀವ್ರಗೊಂಡಿದೆ.
ತನಿಖಾ ತಂಡದಲ್ಲಿ ಆನೇಕಲ್​ ಠಾಣೆ ಸಬ್​ಇನ್​ಸ್ಪೆಕ್ಟರ್​ ಸಿದ್ದನಗೌಡ, ಪಿಎಸ್​ಐ ಮುನಿರತ್ನ, ಅಪರಾಧ ವಿಭಾಗದ ಸಿಬ್ಬಂದಿ ಭಾನುಪ್ರಿಯ, ಸುರೇಶ್​, ಭಾಸ್ಕರ, ಅನಿಲ್​ ಇದ್ದರು. ಕಾರ್ಯಾಚರಣೆ ಮಾಡಿದ ಪೊಲೀಸ್​ ತಂಡಕ್ಕೆ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಲಾಗಿದೆ.